ಸಾಂದರ್ಭಿಕ ಚಿತ್ರ ( Aliens )
- ಏಲಿಯನ್ಗಳು ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಸದಾ ನಡೆಯುತ್ತಲೇ ಇವೆ
- ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಮಾತ್ರ ದೊರೆತಿಲ್ಲ
- ಎಷ್ಟೇ ಸಂಶೋಧನೆಗಳು ನಡೆದರೂ ಏಲಿಯನ್ಸ್ ಸಂಗತಿ ನಮ್ಮ ನಡುವೆ ನಿಗೂಢವಾಗಿಯೇ ಉಳಿದಿದೆ
Aliens : ಏಲಿಯನ್ಗಳು ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಮಾತ್ರ ದೊರೆತಿಲ್ಲ. ಏಲಿಯನ್ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್ಗಳ ಸಂಗತಿ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.
ಅಂದಹಾಗೆ, ಏಲಿಯನ್ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಏಲಿಯನ್ಗಳ ಇರುವಿಕೆಯನ್ನೇ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್ಒ (ಯೂನಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್) ಎಂದು ಕರೆಯಲಾಗುತ್ತದೆ. ಈ ಯುಎಫ್ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳಿಕೊಳ್ಳುತ್ತಿರುತ್ತಾರೆ.
ಇಂದಿಗೂ ಈ ಪ್ರಶ್ನೆಗಳು ಕಾಡುತ್ತಿವೆ
ಅಂದಹಾಗೆ, ಮಾನವರು ಎಷ್ಟೇ ಸಂಶೋಧನೆಗಳನ್ನು ಮಾಡಿದರು ಕೂಡ ಭೂಮ್ಯತೀತ ಜೀವಿಗಳ ಕುರಿತಾದ ಯಾವುದೇ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅಷ್ಟಕ್ಕೂ ಭೂಮಿಯ ಹೊರಗೆ ನಿಜವಾಗಿಯೂ ಜೀವಿಗಳಿವೆಯೇ? ಅವು ಭೂಮಿಯನ್ನು ತಲುಪಿವೆಯೇ? ಆ ಜೀವಿಗಳು ಸಿನಿಮಾಗಳಲ್ಲಿ ನೋಡಿದಂತೆ ಕಾಣುತ್ತವೆಯೇ? ಇನ್ನೂ ಹಲವು ಉತ್ತರವಿಲ್ಲದ ಪ್ರಶ್ನೆಗಳು ನಮ್ಮ ನಡುವೆ ಇವೆ. ಈಗಾಗಲೇ ಭೂಮ್ಯತೀತ ಜೀವಿಗಳ ಸುತ್ತ ಅನೇಕ ಸಿದ್ಧಾಂತಗಳು ಹರಡುತ್ತಿವೆ. ಅವುಗಳಲ್ಲಿ ಒಂದು ಅಮೆರಿಕನ್ ಸರ್ಕಾರಕ್ಕೆ ಸಂಬಂಧಿಸಿದೆ. ಅಮೆರಿಕನ್ ಮಿಲಿಟರಿ ಮತ್ತು ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಈ ವಿಷಯವನ್ನು ಯುಗಯುಗಗಳಿಂದ ಅಧ್ಯಯನ ಮಾಡುತ್ತಿವೆ.
ಅಮೆರಿಕದ ನೆವಾಡಾದಲ್ಲಿ ಏರಿಯಾ 51 ಅತ್ಯಂತ ಸುರಕ್ಷಿತ ಪ್ರದೇಶವಾಗಿದ್ದು, ಇದು ಅಮೆರಿಕ ವಾಯುಪಡೆಗೆ ನೆಲೆಯಾಗಿದೆ. ಇಲ್ಲಿ ಅನ್ಯಲೋಕದ ಬಾಹ್ಯಾಕಾಶ ನೌಕೆಯನ್ನು ಸಂಗ್ರಹಿಸಲಾಗಿದೆ ಎಂಬುದಕ್ಕೆ ಹಲವು ಸಿದ್ಧಾಂತಗಳಿವೆ. ಅನೇಕ ಜನರು ಇಲ್ಲಿ ಆಕಾಶದಲ್ಲಿ ಹೆಚ್ಚಿನ ವೇಗದಲ್ಲಿ ಹಾರುವ ವಸ್ತುಗಳನ್ನು ನೋಡಿದ್ದೇವೆ ಮತ್ತು ಅದರ ವಿಡಿಯೋಗಳು ನಮ್ಮ ಬಳಿ ಇವೆ ಎಂದು ಹೇಳಿಕೊಂಡಿದ್ದಾರೆ.
ನಿಗೂಢ ಪ್ರದೇಶ
ಅಂದಹಾಗೆ, ಅಮೆರಿಕದ ನೆವಾಡಾದಲ್ಲಿ ಹೆಕ್ಟೇರ್‌ಗಳಷ್ಟು ಮರುಭೂಮಿಯಂತಿರುವ ಪ್ರದೇಶದಲ್ಲಿ ಏನು ನಡೆಯುತ್ತಿದೆ ಅನ್ನೋದು ಯಾರಿಗೂ ತಿಳಿದಿಲ್ಲ. ಈ ಏರಿಯಾ 51 ಬಹಳ ನಿಗೂಢ ಪ್ರದೇಶವಾಗಿದೆ. ಸರ್ಕಾರವೇ ಹೇಳುವಂತೆ ಇದು ಅತ್ಯಂತ ವರ್ಗೀಕೃತ ಸಂಶೋಧನಾ ಸೌಲಭ್ಯವಾಗಿದ್ದು, ಒಂದೇ ಒಂದು ಉಪಗ್ರಹ ಚಿತ್ರವನ್ನು ಸಹ ಇಲ್ಲಿ ಅನುಮತಿಸಲಾಗುವುದಿಲ್ಲ. ಇದು ಯುನೈಟೆಡ್ ಸ್ಟೇಟ್ಸ್ ಸೆರೆಹಿಡಿದ ಹಾರುವ ತಟ್ಟೆಗಳು ಮತ್ತು ಏಲಿಯನ್‌ಗಳಿಗೆ ನೆಲೆಯಾಗಿದೆ ಎಂದು ಕೆಲವರು ಈಗಲೂ ನಂಬಿದ್ದಾರೆ.
ಹೊರಬಿತ್ತು ಮಹತ್ವದ ಮಾಹಿತಿ
ಇದೀಗ ಏಲಿಯನ್ಗಳ ವಿಚಾರದಲ್ಲಿ ಒಂದು ನಿರ್ಣಾಯಕ ತಿರುವು ಸಿಗಲಿದೆ. ಕಳೆದ ಗುರುವಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂಥ್ ಪೇಜ್ನಲ್ಲಿ ಏಲಿಯನ್ಗಳ ವಿಚಾರವಾಗಿ ಕೆಲವು ಪ್ರಮುಖ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. ಏಲಿಯನ್ಸ್‌ಗೆ ಸಂಬಂಧಿಸಿದ ಅಮೆರಿಕ ಸರ್ಕಾರ ಹೊಂದಿರುವ ಫೈಲ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಟ್ರಂಪ್ ಹೇಳಿದ್ದೇನು?
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಅನ್ಯಗ್ರಹ ಜೀವಿಗಳು, ಭೂಮ್ಯತೀತ ಜೀವಿಗಳು, ಗುರುತಿಸಲಾಗದ ಆಕಾಶ ವಿದ್ಯಮಾನಗಳು ಹಾಗೂ ಗುರುತಿಸಲಾಗದ ಹಾರುವ ವಸ್ತುಗಳಂತಹ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಕಡತಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಾನು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಟ್ರಂಪ್ ತಮ್ಮ ಟ್ರೂಥ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ದಾಖಲೆಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ, (ಏಜೆನ್ಸೀಸ್).