ಟೋಕಿಯೋ: ಅಮೆರಿಕದ ‘ನಾವು ವಿಶ್ವ ಕನ್ನಡಿಗರು’ (ನಾವಿಕ) ಸಂಸ್ಥೆ ಹಾಗೂ ಟೋಕಿಯೋ ಕನ್ನಡ ಬಳಗ ಜಂಟಿಯಾಗಿ ಆಯೋಜಿಸಿದ್ದ 8ನೇ ವಿಶ್ವ ಕನ್ನಡ ಸಮ್ಮೇಳನ ‘ನಾವಿಕೋತ್ಸವ–2026’ ಜಪಾನ್ನ ಟೋಕಿಯೋದಲ್ಲಿ ಅದ್ಧೂರಿಯಾಗಿ ನೆರವೇರಿದೆ.
‘ಕಿಜುನಾ’ ಅಂದರೆ ಗಡಿಗಳನ್ನು ಮೀರಿದ ಬಾಂಧವ್ಯ ಎಂಬ ಪರಿಕಲ್ಪನೆಯಡಿ ನಡೆದ ಸಮ್ಮೇಳನವು ಪೂರ್ವದ ಜಪಾನ್ ಹಾಗೂ ಪಶ್ಚಿಮದ ಅಮೆರಿಕದ ಕನ್ನಡಿಗರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ಇದೇ ಸಂದರ್ಭದಲ್ಲಿ ಟೋಕಿಯೋ ಕನ್ನಡ ಬಳಗದ 25ನೇ ವಾರ್ಷಿಕೋತ್ಸವದ ರಜತ ಮಹೋತ್ಸವವೂ ಸಂಭ್ರಮದಿಂದ ನಡೆಯಿತು.
ನಾವಿಕ ಅಧ್ಯಕ್ಷೆ ಡಾ. ಅನ್ನಪೂರ್ಣ ಭಟ್ ಅವರ ನೇತೃತ್ವದಲ್ಲಿ, ಸಮ್ಮೇಳನದ ಸಂಚಾಲಕ ಅಜಿತ್ ಭಾಸ್ಕರ್ ಅವರ ಸಮರ್ಥ ಸಂಘಟನೆ ಹಾಗೂ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಜಯ್ ಬೊಳ್ಳೂರು ಅವರ ಸಹಕಾರದಲ್ಲಿ ನಡೆದ ಈ ಕನ್ನಡ ಹಬ್ಬದಲ್ಲಿ ಅಮೆರಿಕ ಹಾಗೂ ಜಪಾನ್ನ ಸುಮಾರು 600 ಕನ್ನಡಿಗರು ಭಾಗವಹಿಸಿದ್ದರು.
ಬೆಂಕಿ ಬಸಣ್ಣ ಹಾಗೂ ಶ್ರೀಕಲಾ ಬೊಳ್ಳಾಜೆ ಸಂಯೋಜಿಸಿದ್ದ ಸಾಹಿತ್ಯ ವೇದಿಕೆಯನ್ನು ನಾವಿಕ ಅಧ್ಯಕ್ಷೆ ಡಾ. ಅನ್ನಪೂರ್ಣ ಭಟ್ ಉದ್ಘಾಟಿಸಿದರು. ಕನ್ನಡ ಚಿತ್ರರಂಗದ ಹಿರಿಯ ನಟ, ಪ್ರಣಯರಾಜ ಶ್ರೀನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಬೆಂಕಿ ಬಸಣ್ಣ ಪ್ರಧಾನ ಸಂಪಾದಕತ್ವದಲ್ಲಿ ಹೊರತಂದ ‘ವಿಶ್ವ ಕನ್ನಡ ಕೂಟಗಳ ಕೈಪಿಡಿ’ ಕೃತಿಯನ್ನು ಶ್ರೀನಾಥ್ ಲೋಕಾರ್ಪಣೆ ಮಾಡಿದರು. ವಿಶ್ವದ ವಿವಿಧ ದೇಶಗಳ ಕನ್ನಡ ಸಂಘಟನೆಗಳು, ಅವುಗಳ ಚಟುವಟಿಕೆಗಳು ಹಾಗೂ ಜಾಗತಿಕ ಕನ್ನಡ ಸಮುದಾಯಗಳ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಿರುವ ಈ ಕೃತಿ ವಿಶ್ವ ಕನ್ನಡಿಗರನ್ನು ಬೆಸೆಯುವ ಮಹತ್ವದ ಪ್ರಯತ್ನವಾಗಿದೆ. ಬಹುಭಾಷಾ ಸಾಹಿತಿ ಕಿರಣ್ ಭಟ್ ಅವರ ‘ಒಂದು ವಲಸೆ ಕಥೆ’ ಕವನ ಸಂಕಲನವನ್ನೂ ಬಿಡುಗಡೆ ಮಾಡಲಾಯಿತು.
ಜಪಾನ್, ಭಾರತ ಹಾಗೂ ಅಮೆರಿಕದ ಉದ್ಯಮಿಗಳನ್ನು ಒಗ್ಗೂಡಿಸಿದ ಉದ್ಯಮ ವೇದಿಕೆಯಲ್ಲಿ ವಿಜಯ್ ಕೊಟ್ರಪ್ಪ ಹೂಡಿಕೆ ಅವಕಾಶಗಳು, ಶಿವಕುಮಾರ್ ಬೆಂಗಳೂರು ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆ ಹಾಗೂ ಸಿ.ವಿ. ಶಶಿಕುಮಾರ್ ಮೂಲಸೌಕರ್ಯ ತಂತ್ರಜ್ಞಾನದ ಕುರಿತು ವಿಷಯ ಮಂಡಿಸಿದರು.
ಜಪಾನ್ನ ಉದ್ಯಮಿ, ಪರಿಸರ ವಿಜ್ಞಾನಿ ಡಾ. ಶ್ರೀಹರಿ ಚಂದ್ರಘಟಗಿ ಅವರೊಂದಿಗೆ ಸುರೇಶ್ ರಾಮಚಂದ್ರ ವಿಶೇಷ ಸಂವಾದ ನಡೆಸಿದರು. ಶಿವಕುಮಾರ್ ಸಿ.ಕೆ., ಅಚ್ಯುತ್ ಕುಮಾರ್ ಅಲ್ಲಾಡಿ ಹಾಗೂ ಜುಂಕೊ ನಿರ್ಮಲಾ ಅವರು ವಿದ್ಯುತ್ ವಾಹನಗಳು, ರೊಬೋಟಿಕ್ಸ್, ಉತ್ಪಾದನೆ, ಬಾಹ್ಯಾಕಾಶ ಹಾಗೂ ಜೈವಿಕ ತಂತ್ರಜ್ಞಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿದರು. ಅಮೆರಿಕದಿಂದ ಆಗಮಿಸಿದ್ದ ವೈದ್ಯರಿಗಾಗಿ ಮುಂದುವರಿದ ವೈದ್ಯಕೀಯ ಶಿಕ್ಷಣ (CME) ಕಾರ್ಯಕ್ರಮವೂ ನಡೆಯಿತು.
ಟೋಕಿಯೋ ಕನ್ನಡ ಬಳಗದ ಕಲಾವಿದರು ಪ್ರಸ್ತುತಪಡಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಾವಿಕೋತ್ಸವದ ಪ್ರಮುಖ ಆಕರ್ಷಣೆಯಾಗಿ ಪ್ರೇಕ್ಷಕರ ಮನಸೂರೆಗೊಂಡವು. ಜಪಾನ್ನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಕಲಿಸಿ ಬೆಳೆಸುತ್ತಿರುವುದಕ್ಕೆ ಈ ಪ್ರದರ್ಶನಗಳೇ ಸಾಕ್ಷಿಯಾಗಿದ್ದವು.
ಪುಟಾಣಿ ಮಕ್ಕಳ ವೇಷಭೂಷಣ ಪ್ರದರ್ಶನ, ಸಹನಾ ರಾವ್ ಅವರ ಮಕ್ಕಳ ಜಾನಪದ ನೃತ್ಯ, ವರ್ಷಿತಾ ನಾಗರಾಜ್ ಅವರ ‘ಪುಟಾಣಿ ಪುಂಟರು’, ಪಲ್ಲವಿ ವೇಣುಗೋಪಾಲ್ ಅವರ ‘ತಕಧಿಮಿ ಗರ್ಲ್ಸ್’, ನಾಗಶ್ರೀ ಮನೋಜ್ ಹಾಗೂ ಇಶಾನ್ವಿ ಮನೋಜ್ ಅವರ ಭರತನಾಟ್ಯ, ಶಿಲ್ಪಾ ವೈದ್ಯ ಅವರ ‘ಮೈಸೂರು ವೈಭವ’ ಹಾಗೂ ದೀಪಾ ಶ್ರೀಕುಮಾರ್ ಅವರ ‘ಕೃಷ್ಣ ಕಲಾಪಂ’ ನೃತ್ಯಗಳು ಗಮನ ಸೆಳೆದವು.
ಶ್ರೀಕಲಾ ಬೊಳ್ಳಾಜೆ ಅವರ ನೇತೃತ್ವದ ‘ಕಂಸವಧೆ’ ಯಕ್ಷಗಾನವು ಜಪಾನ್ ನೆಲದಲ್ಲಿ ಕರಾವಳಿ ಕರ್ನಾಟಕದ ಕಲಾ ಪರಂಪರೆಯನ್ನು ಅನಾವರಣಗೊಳಿಸಿತು. ವಿಶೇಷವಾಗಿ ಗಣೇಶ್ ಮೇಗೂರು ನಿರ್ದೇಶನದ ‘ಯು ಆರ್ ಡನ್ ಬ್ರೋ’ ಹಾಸ್ಯನಾಟಕದಲ್ಲಿ ಯಮಧರ್ಮರಾಯ, ಚಿತ್ರಗುಪ್ತ, ಡೊನಾಲ್ಡ್ ಟ್ರಂಪ್ ಹಾಗೂ ‘ರೀಲ್ಸ್ ರಾಣಿ’ ಪಾತ್ರಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.
ಗುರು ರಶ್ಮಿ ಶಶಿ ಅವರ ಪರಿಕಲ್ಪನೆಯ ‘ಸಿರಿನಾಡ ವೈಭವ’ ನೃತ್ಯ ರೂಪಕ, ‘AI ಅವಾಂತರ!’ ಹಾಸ್ಯನಾಟಕ ಹಾಗೂ ಹತ್ತು ಜೋಡಿಗಳು ಭಾಗವಹಿಸಿದ ‘Journey of Sandalwood’ ಫ್ಯಾಷನ್ ಪರೇಡ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು.