

ತ್ರಿಶೂರ್: ಹಿರಿಯ ನಟ ಟಿ.ಜಿ. ರವಿ ಅವರ ಪುತ್ರ ಹಾಗೂ ಮಲಯಾಳಂನ ಜನಪ್ರಿಯ ನಟ ಶ್ರೀಜಿತ್ ರವಿ ಅವರಿಗೆ ಪೋಕ್ಸೋ (POCSO) ಪ್ರಕರಣದಲ್ಲಿ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಾಲಾ ಮಕ್ಕಳ ಮುಂದೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದೆ.
ಈ ಘಟನೆ 2022ರ ಜುಲೈ 4ರಂದು ನಡೆದಿತ್ತು. ತ್ರಿಶೂರಿನ ಅಯ್ಯಂತೋಲ್ ಮೈದಾನದ ಬಳಿ ಶಾಲಾ ಮಕ್ಕಳ ಗುಂಪೊಂದು ನಡೆದುಕೊಂಡು ಹೋಗುತ್ತಿತ್ತು. ಈ ವೇಳೆ ಅಲ್ಲಿದ್ದ ನಟ ಶ್ರೀಜಿತ್ ರವಿ, ಮಕ್ಕಳ ಮುಂದೆ ತಮ್ಮ ಖಾಸಗಿ ಅಂಗಗಳನ್ನು ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಇಬ್ಬರು ಮಕ್ಕಳು ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಾಗುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ' (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಟನನ್ನು ಬಂಧಿಸಿದ್ದರು. ಅಲ್ಲದೆ, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಸಾಕ್ಷ್ಯವಾಗಿ ಸಂಗ್ರಹಿಸಿದ್ದರು.
ಬಂಧನದ ನಂತರ ಶ್ರೀಜಿತ್ ರವಿ ಪರ ವಕೀಲರು, "ನಟನಿಗೆ ವರ್ತನೆಗೆ ಸಂಬಂಧಿಸಿದ ಮಾನಸಿಕ ಅಸ್ವಸ್ಥತೆಯಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಘಟನೆ ನಡೆದು ಸುಮಾರು ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ತ್ರಿಶೂರ್ ವಿಶೇಷ ನ್ಯಾಯಾಲಯ ನಟನನ್ನು ದೋಷಿ ಎಂದು ಪರಿಗಣಿಸಿ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.
2005ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಜಿತ್ ರವಿ, ಇಲ್ಲಿಯವರೆಗೆ 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಹೆಚ್ಚಾಗಿ ಹೀರೋ ಪಾತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಕಾಮಿಡಿ ಮತ್ತು ಖಳನಾಯಕನ ಪಾತ್ರಗಳ ಮೂಲಕ ಮಲಯಾಳಂ ಪ್ರೇಕ್ಷಕರಿಗೆ ಬಹಳ ಚಿರಪರಿಚಿತರಾಗಿದ್ದಾರೆ.
'ಪುಣ್ಯಾಲನ್ ಅಗರ್‌ಬತ್ತೀಸ್', 'ಗೋಧಾ', 'ರಾಮಂತೆ ಏಡೆನ್ತೋಟಂ' ಮತ್ತು 'ಜೋ ಅಂಡ್ ಜೋ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಇನ್ನು ಇವರ ತಂದೆ ಟಿ.ಜಿ. ರವಿ ಅವರು 1970 ಮತ್ತು 80ರ ದಶಕದಲ್ಲಿ ಮಲಯಾಳಂ ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿ ಮಿಂಚಿದ ದಿಗ್ಗಜ ನಟ. ಸಜಿತಾ ಅವರನ್ನು ವಿವಾಹವಾಗಿರುವ ಶ್ರೀಜಿತ್ ರವಿ, ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾಗಲೇ ಇಂತಹದೊಂದು ಕಪ್ಪುಚುಕ್ಕೆ ಅಂಟಿಸಿಕೊಂಡು ಈಗ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ, (ಏಜೆನ್ಸೀಸ್).