ಐಶಾರಾಮಿ ಹೋಟೆಲ್​ ಬಿಟ್ಟು ನೆಲಮಾಳಿಗೆ ಸೇರಿರುವ ಪ್ರವಾಸಿಗರು 
ವಿದೇಶ

ಕನಸಿನ ನಗರಿ ದುಬೈನಲ್ಲಿ ಕ್ಷಿಪಣಿಗಳ ಅಟ್ಟಹಾಸ: ಐಷಾರಾಮಿ ಹೋಟೆಲ್ ಬಿಟ್ಟು ನೆಲಮಾಳಿಗೆಯಲ್ಲಿ ಅಡಗಿದ ಪ್ರವಾಸಿಗರು; ವಿಡಿಯೋ ವೈರಲ್ | Dubai Under Attack ​

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಯುದ್ಧ
  • ದುಬೈ ಮೇಲೆ ಮಿಸೈಲ್​ ಬಿಟ್ಟ ಇರಾನ್​
  • ಪ್ರಾಣಭಯದಿಂದ ನೆಲಮಾಳಿಗೆ ಸೇರಿರುವ ಪ್ರವಾಸಿಗರು
ದುಬೈ: ಕನಸಿನ ನಗರಿ ದುಬೈ ಈಗ ಅಕ್ಷರಶಃ ರಣರಂಗವಾಗಿ ಬದಲಾಗಿದೆ (Dubai Under Attack). ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಈಗ ಗಲ್ಫ್ ರಾಷ್ಟ್ರಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಸುರಿಮಳೆಗೈಯುತ್ತಿದೆ. ದುಬೈ, ದೋಹಾ, ಬಹ್ರೇನ್ ಮತ್ತು ಕುವೈತ್‌ನ ಪ್ರಮುಖ ಪ್ರದೇಶಗಳು ಬೆಂಕಿಯುಂಡೆಗಳಂತೆ ಭಾಸವಾಗುತ್ತಿವೆ.

ಪಾರ್ಕಿಂಗ್ ಗ್ಯಾರೇಜ್‌ಗಳಲ್ಲಿ ಪ್ರವಾಸಿಗರ ರಾತ್ರಿಗಳು!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ದುಬೈನ ಬುರ್ಜ್ ಅಲ್ ಅರಬ್ ಮತ್ತು ಫೇರ್‌ಮಾಂಟ್‌ನಂತಹ ವಿಶ್ವದ ಅತ್ಯಂತ ಐಷಾರಾಮಿ ಹೋಟೆಲ್‌ಗಳಿಗೆ ಬಂದಿದ್ದ ಪ್ರವಾಸಿಗರು, ಪ್ರಾಣಭಯದಿಂದ ನೆಲಮಾಳಿಗೆ ಮತ್ತು ಪಾರ್ಕಿಂಗ್ ಗ್ಯಾರೇಜ್‌ಗಳಲ್ಲಿ ಹಾಸಿಗೆ ಹಾಕಿಕೊಂಡು ಮಲಗುತ್ತಿದ್ದಾರೆ. ಸಣ್ಣ ಮಕ್ಕಳಿರುವ ಕುಟುಂಬಗಳು ಸ್ಮಾರ್ಟ್‌ಫೋನ್‌ಗಳಿಗೆ ಬರುವ ವಾಯುದಾಳಿಯ ಎಚ್ಚರಿಕೆ ಕಂಡು ದಿಕ್ಕುತೋಚದಂತಾಗಿದ್ದಾರೆ. ಹೋಟೆಲ್ ಸಿಬ್ಬಂದಿಗಳು ನೆಲಮಾಳಿಗೆಯಲ್ಲೇ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.
ಗ್ರೋಕ್ ದೃಢಪಡಿಸಿದ ಸತ್ಯ
ಈ ವಿಡಿಯೋಗಳು ಸುಳ್ಳು ಎಂಬ ಮಾತುಗಳು ಕೇಳಿಬಂದಾಗ, ಟ್ವಿಟರ್ (X) ನ ಚಾಟ್‌ಬಾಟ್ 'ಗ್ರೋಕ್' ಇದನ್ನು ಸ್ಪಷ್ಟಪಡಿಸಿದೆ. ಹೌದು, ಇದು ಸತ್ಯ. ಫೆಬ್ರವರಿ 28-29ರಂದು ದುಬೈನ ವಿಮಾನ ನಿಲ್ದಾಣ ಮತ್ತು ಪ್ರಮುಖ ಹೋಟೆಲ್‌ಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ, ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರನ್ನು ನೆಲಮಾಳಿಗೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗ್ರೋಕ್ ಮಾಹಿತಿ ನೀಡಿದೆ.
ನೂರಾರು ಕ್ಷಿಪಣಿಗಳ ಅಟ್ಟಹಾಸ: ಸಾವು-ನೋವಿನ ಭೀತಿ
ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ನಡೆಸಿದ ಈ ಕಾರ್ಯಾಚರಣೆಯಲ್ಲಿ ಕನಿಷ್ಠ 165 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 541 ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಯುಎಇ ರಕ್ಷಣಾ ಸಚಿವಾಲಯದ ಪ್ರಕಾರ, ಈ ದಾಳಿಯಲ್ಲಿ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದ ಮೂವರು ಸಾವನ್ನಪ್ಪಿದ್ದಾರೆ ಮತ್ತು 58 ಮಂದಿ ಗಾಯಗೊಂಡಿದ್ದಾರೆ. ಕುವೈತ್ ಮತ್ತು ಓಮನ್‌ನಲ್ಲಿಯೂ ದಾಳಿಗಳು ವರದಿಯಾಗಿದ್ದು, ಅಲ್ಲಿಯೂ ಸಾವು-ನೋವುಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ.

ಯುದ್ಧಕ್ಕೆ ಕಾರಣವೇನು?

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಅಮೆರಿಕ-ಇಸ್ರೇಲ್ ಹತ್ಯೆ ಮಾಡಿದ್ದೇ ಈ ಮಹಾಯುದ್ಧಕ್ಕೆ ನಾಂದಿ ಹಾಡಿದೆ. ಈ ಹತ್ಯೆ ಮುಸ್ಲಿಮರ ವಿರುದ್ಧದ ಯುದ್ಧ ಘೋಷಣೆ ಎಂದು ಕರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಈ ಐತಿಹಾಸಿಕ ಅಪರಾಧಕ್ಕೆ ಸೇಡು ತೀರಿಸಿಕೊಳ್ಳುವುದು ನಮ್ಮ ಹಕ್ಕು ಎಂದು ಗುಡುಗಿದ್ದಾರೆ.

ಸ್ತಬ್ಧಗೊಂಡ ವಾಯುಪ್ರದೇಶ: ಸಿಲುಕಿಕೊಂಡ ಸಾವಿರಾರು ಪ್ರಯಾಣಿಕರು

ಯುಎಇ ಮತ್ತು ಕತಾರ್ ಸೇರಿದಂತೆ ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ. ಸಾವಿರಾರು ಅಂತರಾಷ್ಟ್ರೀಯ ವಿಮಾನಗಳು ರದ್ದಾಗಿದ್ದು, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ದಿಕ್ಕಿಲ್ಲದಂತಾಗಿದ್ದಾರೆ. ಓಮನ್‌ನ ಡುಕ್ಮ್ ವಾಣಿಜ್ಯ ಬಂದರಿನ ಮೇಲೆಯೂ ಡ್ರೋನ್ ದಾಳಿ ನಡೆದಿದ್ದು, ಅಲ್ಲಿನ ವಿದೇಶಿ ಕೆಲಸಗಾರನೊಬ್ಬ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ,(ಏಜನ್ಸೀಸ್).