ಥಾಯ್ಲೆಂಡ್: ಥಾಯ್ಲೆಂಡ್ ರಾಜಮನೆತನಕ್ಕೆ ಭಾರೀ ದುಃಖದ ಸುದ್ದಿ ಎದುರಾಗಿದೆ. ಥಾಯ್ಲೆಂಡ್ ರಾಜ Maha Vajiralongkorn ಅವರ ಹಿರಿಯ ಪುತ್ರಿ ರಾಜಕುಮಾರಿ ಬಜ್ರಕಿಟಿಯಾಭಾ ಮಹಿಡೋಲ್(Bajrakitiyabha) ಅವರು 47ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಥಾಯ್ಲೆಂಡ್ ರಾಜಮನೆತನದ ಕಚೇರಿ ಅಧಿಕೃತವಾಗಿ ತಿಳಿಸಿದೆ.
ಮೂರು ವರ್ಷಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ
2022ರ ಡಿಸೆಂಬರ್‌ನಲ್ಲಿ ನಡೆದ ಸೇನಾ ಕಾರ್ಯಕ್ರಮಕ್ಕಾಗಿ ನಾಯಿಗಳಿಗೆ ತರಬೇತಿ ನೀಡುತ್ತಿದ್ದ ವೇಳೆ ರಾಜಕುಮಾರಿ ಬಜ್ರಕಿಟಿಯಾಭಾ ಏಕಾಏಕಿ ಪ್ರಜ್ಞಾಹೀನರಾಗಿದ್ದರು(ಕೋಮಾ). ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ಅವರಿಗೆ ಮೈಕೋಪ್ಲಾಸ್ಮಾ ಸೋಂಕು ತಗುಲಿತ್ತು ಎಂದು ತಿಳಿಸಿದ್ದರು. ಇದು ಸಾಮಾನ್ಯವಾಗಿ ಶ್ವಾಸಕೋಶದ ಸೋಂಕು ಮತ್ತು ನ್ಯುಮೋನಿಯಾಗೆ ಕಾರಣವಾಗುವ ಬ್ಯಾಕ್ಟೀರಿಯಾ ಸೋಂಕಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳ ನೆರವು ನೀಡಲಾಗುತ್ತಿತ್ತು.
ದೇಶದ ಹೆಮ್ಮೆ ಎಂದು ಪ್ರಧಾನಿ ಶ್ರದ್ಧಾಂಜಲಿ
ಥಾಯ್ಲೆಂಡ್ ಪ್ರಧಾನಿ ಅನೂಟಿನ್ ಚಾರ್ನ್ವಿರಾಕುಲ್ ರಾಜಕುಮಾರಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಇದು ಕೇವಲ ಒಂದು ದುಃಖದ ಸುದ್ದಿ ಅಲ್ಲ. ಇಡೀ ರಾಷ್ಟ್ರದ ಹೃದಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಥಾಯ್ಲೆಂಡ್‌ನ ಹೆಮ್ಮೆ ಆಗಿದ್ದರು" ಎಂದು ಪ್ರಧಾನಿ ಹೇಳಿದ್ದಾರೆ.ಮಹಿಳೆಯರು, ಮಕ್ಕಳು ಹಾಗೂ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಎಂದೆಂದಿಗೂ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದರು.
ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ರಾಜಕುಮಾರಿ
ಬಜ್ರಕಿಟಿಯಾಭಾ ಅವರು ಕಾನೂನು ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಅವರು ಥಾಯ್ಲೆಂಡ್‌ನ ಥಮ್ಮಸಾಟ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಬಳಿಕ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದರು.ನಂತರ ಅವರು ಸರ್ಕಾರಿ ಅಭಿಯೋಜಕರಾಗಿ ಕೆಲಸ ಮಾಡಿದರು. ಬಳಿಕ ಆಸ್ಟ್ರಿಯಾದಲ್ಲಿ ಥಾಯ್ಲೆಂಡ್ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.2017ರಲ್ಲಿ ವಿಶ್ವಸಂಸ್ಥೆಯ ಮಾದಕ ವಸ್ತು ಮತ್ತು ಅಪರಾಧ ನಿಯಂತ್ರಣ ಕಚೇರಿಯ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಿದ್ದರು.
ಮಹಿಳಾ ಕೈದಿಗಳಿಗಾಗಿ ವಿಶೇಷ ಕಾರ್ಯ
ಮಹಿಳಾ ಕೈದಿಗಳ ಪುನರ್ವಸತಿ ಮತ್ತು ಅವರ ಜೀವನಮಟ್ಟ ಸುಧಾರಣೆಗೆ ಬಜ್ರಕಿಟಿಯಾಭಾ ಹಲವು ಯೋಜನೆಗಳನ್ನು ರೂಪಿಸಿದ್ದರು.ಅವರ "ಕಮ್ಲಾಂಗ್ಜೈ" ಯೋಜನೆ ಮಹಿಳಾ ಕೈದಿಗಳಿಗೆ ಹೊಸ ಜೀವನ ನೀಡುವ ಉದ್ದೇಶ ಹೊಂದಿತ್ತು. ಮಹಿಳೆಯರ ಮೇಲಿನ ಹಿಂಸೆ ತಡೆ ಮತ್ತು ಮಹಿಳಾ ಹಕ್ಕುಗಳ ರಕ್ಷಣೆಯಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.ಅವರ ಪ್ರಯತ್ನದ ಫಲವಾಗಿ ಮಹಿಳಾ ಕೈದಿಗಳ ಆರೈಕೆ ಕುರಿತ "ಬ್ಯಾಂಕಾಕ್ ರೂಲ್ಸ್" ಅನ್ನು ವಿಶ್ವಸಂಸ್ಥೆ ಅಂಗೀಕರಿಸಿತ್ತು.
ರಾಜಮನೆತನದಲ್ಲಿ ಶೋಕ
ರಾಜಕುಮಾರಿಯ ನಿಧನದ ಹಿನ್ನೆಲೆಯಲ್ಲಿ ಬ್ಯಾಂಕಾಕ್‌ನ ಗ್ರ್ಯಾಂಡ್ ಪ್ಯಾಲೇಸ್‌ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ರಾಜಮನೆತನದ ಸಂಪ್ರದಾಯದಂತೆ ಅತ್ಯುನ್ನತ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಕುಮಾರಿಯ ನಿಧನದಿಂದ ಥಾಯ್ಲೆಂಡ್ ಜನತೆ ಮತ್ತು ರಾಜಮನೆತನ ತೀವ್ರ ಶೋಕದಲ್ಲಿ ಮುಳುಗಿದೆ,(ಏಜೆನ್ಸೀಸ್).