ನವದೆಹಲಿ: ಜಾಗತಿಕವಾಗಿ ದಿನೇದಿನೆ ಹೆಚ್ಚಾಗುತ್ತಿರುವ ಎಲ್ ನಿನೊ ( Super El Nino ) ಸ್ಥಿತಿಯು ಸೆಪ್ಟೆಂಬರ್ 2026 ಮತ್ತು ಫೆಬ್ರವರಿ 2027ರ ನಡುವೆ ಮಿತಿ ಮೀರಲಿದ್ದು, ತೀವ್ರ ಉಷ್ಣತೆಯಿಂದಾಗಿ ಅಂದಾಜು 4 ಲಕ್ಷಕ್ಕೂ ಹೆಚ್ಚುವರಿ ಮಂದಿಯನ್ನು ಬಲಿಪಡೆಯುವ ಸಾಧ್ಯತೆಯಿದೆ ಎಂದು ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್‌ನ ಹೊಸ ಅಂದಾಜು ವರದಿ ಹೇಳಿದೆ. ಈ ವರದಿಯ ಆಘಾತಕಾರಿ ಸಂಗತಿ ಏನೆಂದರೆ, ಜಾಗತಿಕ ಮಟ್ಟದಲ್ಲಿ ಸಂಭವಿಸಲಿರುವ ಈ ತಾಪಮಾನ ಸಂಬಂಧಿತ ಸಾವುಗಳಲ್ಲಿ ಹೆಚ್ಚಿನ ಭಾಗವನ್ನು ದಕ್ಷಿಣ ದೇಶಗಳೇ ಎದುರಿಸಬೇಕಾಗುತ್ತದೆ ಎಂದು ವರದಿ ಎಚ್ಚರಿಸಿದೆ.
ಹವಾಮಾನ ಬದಲಾವಣೆ ಮತ್ತು ವಿಪರೀತ ಹವಾಮಾನ ವೈಪರೀತತ್ಯಗಳು ವಿಶ್ವದಾದ್ಯಂತ ಜನಜೀವನ, ಆರ್ಥಿಕತೆ ಮತ್ತು ಸಮುದಾಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡಲು ಹವಾಮಾನ ವಿಜ್ಞಾನ, ಅರ್ಥಶಾಸ್ತ್ರ ಹಾಗೂ ದತ್ತಾಂಶ ವಿಶ್ಲೇಷಣೆಯನ್ನು ಒಟ್ಟುಗೂಡಿಸಿ ಕೆಲಸ ಮಾಡುವ ಒಂದು ಸಂಶೋಧನಾ ಸಹಯೋಗವೇ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್. ಈ ಲ್ಯಾಬ್ ವರದಿಯಲ್ಲಿ ನೀಡಿರುವ ಅಂದಾಜುಗಳು ಈಗಾಗಲೇ ದಾಖಲಾದ ಸಾವುಗಳ ಮುನ್ಸೂಚನೆಯಲ್ಲ, ಬದಲಿಗೆ 1996 ರಿಂದ 2025 ರವರೆಗಿನ ಅವಧಿಯನ್ನು ಆಧಾರವಾಗಿಟ್ಟುಕೊಂಡು ಸರಾಸರಿ ವರ್ಷದಲ್ಲಿ ಸಂಭವಿಸಬಹುದಾದ ಸಾವುಗಳಿಗಿಂತ ಶಾಖ-ಸಂಬಂಧಿತ ಹೆಚ್ಚುವರಿ ಮರಣಗಳನ್ನು ಇದು ಈ ಲ್ಯಾಬ್ ವರದಿ ಅಂದಾಜಿಸಿದೆ.
ಕೇವಲ ಸಾಹೆಲ್ ಪ್ರದೇಶವೊಂದರಲ್ಲೇ 66,800 ಹೆಚ್ಚುವರಿ ಶಾಖ-ಸಂಬಂಧಿತ ಸಾವುಗಳು ಸಂಭವಿಸುವ ಮುನ್ಸೂಚನೆ ಇದ್ದು, ಇದರಲ್ಲಿ ನೈಜೀರಿಯಾದಲ್ಲಿ 31,400, ಸುಡಾನ್‌ನಲ್ಲಿ 17,500, ನೈಜರ್‌ನಲ್ಲಿ 10,000 ಮತ್ತು ಚಾಡ್‌ನಲ್ಲಿ 8,000 ಸಾವುಗಳು ಸೇರಿವೆ. ಹಾಗೆಯೇ ದಕ್ಷಿಣ ಆಗ್ನೇಯ ಏಷ್ಯಾದ ಫಿಲಿಪೈನ್ಸ್, ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶಗಳಲ್ಲಿ ಒಟ್ಟಾಗಿ 19,400 ಹೆಚ್ಚುವರಿ ಸಾವುಗಳು ಸಂಭವಿಸಬಹುದಾದರೆ, ಇಂಡೋನೇಷ್ಯಾದಲ್ಲಿ ಈ ಸಂಖ್ಯೆ 19,300 ಎಂದು ಅಂದಾಜಿಸಲಾಗಿದೆ.
ವರದಿಯ ಪ್ರಕಾರ ಬ್ರೆಜಿಲ್ ದೇಶದಲ್ಲಿ 13,300 ಹೆಚ್ಚುವರಿ ಸಾವುಗಳು ಸಂಭವಿಸುವ ನಿರೀಕ್ಷೆಯಿದ್ದರೆ, ಭಾರತದಲ್ಲಿ ಈ ಅಂದಾಜು 15,800 ರಷ್ಟಿದೆ. ಸರ್ಕಾರಗಳು ಉಷ್ಣತೆಯ ಮುನ್ನೆಚ್ಚರಿಕೆಗಳು, ತಂಪಾದ ಆಶ್ರಯ ಕೇಂದ್ರಗಳು, ಹೈಡ್ರೈಶನ್ ಸೌಲಭ್ಯಗಳು, ಹೊರಾಂಗಣದಲ್ಲಿ ಅಥವಾ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣೆ ಹಾಗೂ ಬಲವಾದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯದಂತಹ ತುರ್ತು ಕ್ರಮಗಳನ್ನು ಕೈಗೊಳ್ಳಲು ಈ ವರದಿ ಹೆಚ್ಚು ಸಹಾಯ ಮಾಡಬಲ್ಲದ ಎಂದು ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ತಿಳಿಸಿದೆ.
ಎಲ್ ನಿನೊ ವಿದ್ಯಮಾನವು ಸದ್ಯಕ್ಕಂತೂ ತನ್ನ ಉತ್ತುಂಗ ತಲುಪಿಲ್ಲ. ವಿಶ್ವ ಹವಾಮಾನ ಸಂಸ್ಥೆಯು (WMO) ಸೆಪ್ಟೆಂಬರ್ 3 ರಂದು ಬಿಡುಗಡೆ ಮಾಡಿದ ಮಾಹಿತಿಯಂತೆ, ಈ ವಿದ್ಯಮಾನವು ಪ್ರಸ್ತುತ ದೃಢವಾಗಿ ನೆಲೆಗೊಂಡಿದ್ದು, ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಫೆಬ್ರವರಿ 2027 ರವರೆಗೆ ಎಲ್ ನಿನೊ ಮುಂದುವರಿಯುವ ಸಾಧ್ಯತೆ ಶೇ. 100 ರಷ್ಟು ಹತ್ತಿರದಲ್ಲಿದೆ ಎಂದು WMO ಸ್ಪಷ್ಟಪಡಿಸಿದೆ.
ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತದ (Noaa) ಇತ್ತೀಚಿನ ಮೌಲ್ಯಮಾಪನ ವರದಿಯ ಪ್ರಕಾರ, ಎಲ್ ನಿನೊ 3.4 ಪ್ರದೇಶದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ 1.8°C ರಷ್ಟು ಹೆಚ್ಚಾಗಿದೆ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಪ್ರದೇಶದಲ್ಲಿ ಇದು 3°C ಗಿಂತ ಹೆಚ್ಚಿನ ವ್ಯತ್ಯಾಸವನ್ನು ತೋರಿಸಿದೆ. ಉತ್ತರ ಗೋಳಾರ್ಧದ ಶರತ್ಕಾಲ ಮತ್ತು ಚಳಿಗಾಲದಲ್ಲಿ ಅತ್ಯಂತ ಪ್ರಬಲವಾದ ಎಲ್ ನಿನೊ ಸಂಭವಿಸುವ ಸಾಧ್ಯತೆ ಶೇ. 90 ಕ್ಕಿಂತ ಹೆಚ್ಚಿದೆ ಎಂದು ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ಏಜೆನ್ಸಿ ತಿಳಿಸಿದೆ.
ಫೆಬ್ರವರಿ 2027 ರವರೆಗೆ ಇರುವ ಪ್ರಸ್ತುತ 6 ತಿಂಗಳ ಮುನ್ಸೂಚನೆಯನ್ನು ನೋಡಿದಾಗ, ಭಾರತ ಮತ್ತು ಪಾಕಿಸ್ತಾನದಂತಹ ಉತ್ತರ ಗೋಳಾರ್ಧದ ಪ್ರಮುಖ ಪ್ರದೇಶಗಳಲ್ಲಿ ಶಾಖ-ಸಂಬಂಧಿತ ಸಾವುಗಳು ಮುಂಬರುವ ಬೇಸಿಗೆಯವರೆಗೂ ಮುಂದುವರಿಯುತ್ತವೆ ಎಂದು ವರದಿಯ ಲೇಖಕರು ಬರೆದಿದ್ದಾರೆ. ಎಲ್ ನಿನೋ ಪರಿಣಾಮಗಳು ಈಗಾಗಲೇ ವಿಶ್ವದಾದ್ಯಂತ ಗೋಚರಿಸುತ್ತಿದ್ದು, ಜಾಗತಿಕ ಸರಾಸರಿ ಮೇಲ್ಮೈ ವಾಯು ತಾಪಮಾನವು 16.96°C ಇರುವುದರೊಂದಿಗೆ 2026ರ ಆಗಸ್ಟ್ ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ಆಗಸ್ಟ್ ತಿಂಗಳು ಎನಿಸಿಕೊಂಡಿದೆ.
ಈ ದಾಖಲೆಯ ಉಷ್ಣತೆಯು ದೀರ್ಘಕಾಲೀನ ಜಾಗತಿಕ ತಾಪಮಾನ ಏರಿಕೆ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಎಲ್ ನಿನೊ ಪರಿಸ್ಥಿತಿಗಳೆರಡನ್ನೂ ಪ್ರತಿಬಿಂಬಿಸುತ್ತದೆ ಎಂದು ಕೋಪರ್ನಿಕಸ್ ತಿಳಿಸಿದೆ. ಪ್ರಸ್ತುತ ಎಲ್ ನಿನೊ ವಿದ್ಯಮಾನವನ್ನು ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ "ಭವಿಷ್ಯದಿಂದ ಬಂದ ಪೋಸ್ಟ್‌ಕಾರ್ಡ್" ಎಂದು ಬಣ್ಣಿಸಿದೆ, ಏಕೆಂದರೆ ಮುಂಬರುವ ತಿಂಗಳುಗಳಲ್ಲಿ ನಿರೀಕ್ಷಿಸಲಾದ ತಾಪಮಾನವು ಇನ್ನು ಸುಮಾರು ಎರಡು ದಶಕಗಳ ನಂತರದ ಹವಾಮಾನ ಮಾದರಿಗಳನ್ನು ಹೋಲುತ್ತದೆ. ಭಾರತ ಹಾಗೂ ಈ ಪ್ರದೇಶದ ಇತರ ದೇಶಗಳು ಮುಂದಿನ ಬೇಸಿಗೆಯನ್ನು ಪ್ರವೇಶಿಸುತ್ತಿದ್ದಂತೆ ಶಾಖ-ಸಂಬಂಧಿತ ಸಾವುಗಳು 2027 ರ ವೇಳೆಯೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಣೆಯು ಎಚ್ಚರಿಸಿದೆ, (ಏಜೆನ್ಸೀಸ್).