ಘಟನೆಯ ಸ್ಥಳ 
ವಿದೇಶ

ಮದುವೆ ಸಮಾರಂಭದ ಮೇಲೆ ಆತ್ಮಾಹುತಿ ಬಾಂಬ್ ದಾಳಿ; 7 ಮಂದಿ ಸಾವು, 25 ಜನರಿಗೆ ಗಾಯ | Suicide bomber

ಪೇಶಾವರ್: ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದಲ್ಲಿ ಶುಕ್ರವಾರ(ಜ. 23) ನಡೆದ ವಿವಾಹ ಸಮಾರಂಭದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಸುಮಾರು 25 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿವಾಹ ಸಮಾರಂಭದಲ್ಲಿ ಆತ್ಮಾಹುತಿ ಬಾಂಬರ್ ಒಬ್ಬ ಅತಿಥಿಗಳ ನಡುವೆ ಬಂದು ತನ್ನನ್ನು ತಾನೆ ಸ್ಪೋಟಿಸಿಕೊಂಡಿದ್ದಾನೆ. ಕೆಲವು ಅತಿಥಿಗಳು ಸಮಾರಂಭಕ್ಕೆ ಬರುತ್ತಿದ್ದರೆ, ಇನ್ನೂ ಹಲವರು ಡ್ರಮ್ ಬಾರಿಸುತ್ತಾ ನೃತ್ಯ ಮಾಡುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸ್ ಮುಖ್ಯಸ್ಥ ಅದ್ನಾನ್ ಖಾನ್, ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಜಿಲ್ಲೆಯ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿರುವ ಸರ್ಕಾರಿ ಪರ ಸಮುದಾಯದ ನಾಯಕ ನೂರ್ ಅಲಮ್ ಮೆಹ್ಸೂದ್ ಅವರ ಮನೆಯಲ್ಲಿ ಈ ದಾಳಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ದಾಳಿಯ ಹೊಣೆಯನ್ನು ಯಾವುದೇ ಉಗ್ರ ಗುಂಪು ತಕ್ಷಣಕ್ಕೆ ಹೊತ್ತುಕೊಂಡಿಲ್ಲ. ಆದಾಗ್ಯೂ, ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಅಥವಾ ಟಿಟಿಪಿ ಎಂದೂ ಕರೆಯಲ್ಪಡುವ ಮತ್ತು ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹಲವಾರು ದಾಳಿಗಳನ್ನು ನಡೆಸಿರುವ ಪಾಕಿಸ್ತಾನಿ ತಾಲಿಬಾನ್ ಮೇಲೆ ಅನುಮಾನ ವ್ಯಕ್ತವಾಗಿದೆ (ಏಜೆನ್ಸೀಸ್).