ಸಾಂದರ್ಭಿಕ ಚಿತ್ರ 
ವಿದೇಶ

ಇನ್ಮುಂದೆ ರಾತ್ರಿಯಲ್ಲೂ ಸಿಗುತ್ತಂತೆ ಸೂರ್ಯನ ಬೆಳಕು: ಆಗಸದಲ್ಲಿ ಕನ್ನಡಿಗಳನ್ನಿಡಲು ಹೊರಟ ಅಮೆರಿಕಕ್ಕೆ ಭಾರತ ಸಾಥ್​! Space Technology

Space Technology: ಸಾಮಾನ್ಯವಾಗಿ ಸೂರ್ಯ ಮುಳುಗಿದರೆ ಭೂಮಿಯ ಮೇಲೆ ಕತ್ತಲು ಆವರಿಸುತ್ತದೆ. ಆ ಕತ್ತಲಿನಿಂದ ಮುಕ್ತಿ ಪಡೆಯಲು ಅಂದರೆ, ಮತ್ತೆ ಬೆಳಕಿಗಾಗಿ ನಾವು ವಿದ್ಯುತ್ ದೀಪಗಳ ಮೊರೆ ಹೋಗುತ್ತೇವೆ. ಆದರೆ, ಇನ್ನು ಮುಂದೆ ರಾತ್ರಿ ವೇಳೆಯಲ್ಲೂ ಸೂರ್ಯನ ಬೆಳಕನ್ನು ಪಡೆಯಲು ಸಾಧ್ಯವಾದರೆ ಹೇಗಿರುತ್ತದೆ ಅಲ್ವಾ? ನಿಮಗೆ ಬೇಕಾದ ಪ್ರದೇಶಕ್ಕೆ ಬಾಹ್ಯಾಕಾಶದಿಂದಲೇ ಬೆಳಕು ಹರಿದುಬಂದರೆ ಹೇಗೆ? ಇದನ್ನು ಕೇಳಲು ಸಿನಿಮಾದ ಕಥೆಯಂತೆ ಅನಿಸಿದರೂ ಅಮೆರಿಕದ ಕಂಪನಿಯೊಂದು ಇಂತಹದ್ದೇ ಯೋಜನೆ ರೂಪಿಸುತ್ತಿದೆ. ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳನ್ನು ಸ್ಥಾಪಿಸಿ, ಸೂರ್ಯನ ಬೆಳಕನ್ನು ಭೂಮಿಯ ನಿರ್ದಿಷ್ಟ ಪ್ರದೇಶಗಳಿಗೆ ಪ್ರತಿಫಲಿಸುವ ಮೂಲಕ ರಾತ್ರಿಯಲ್ಲೂ ಬೆಳಕು ಒದಗಿಸುವುದು ಇದರ ಉದ್ದೇಶ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತದ ರಾಕೆಟ್ ನಿರ್ಮಾಣ ಸಂಸ್ಥೆಯೊಂದೂ ಕೈಜೋಡಿಸಿರುವುದು ವಿಶೇಷವಾಗಿದೆ.

ಏನಿದು ರಾತ್ರಿಯ ಸೂರ್ಯನ ಬೆಳಕಿನ ಯೋಜನೆ?

ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ರಿಫ್ಲೆಕ್ಟ್ ಆರ್ಬಿಟಲ್ ಎಂಬ ಬಾಹ್ಯಾಕಾಶ ನವೋದ್ಯಮ ಸಂಸ್ಥೆ ಈ ಯೋಜನೆಯನ್ನು ರೂಪಿಸಿದೆ. ಸೂರ್ಯನ ಬೆಳಕನ್ನು ಬಾಹ್ಯಾಕಾಶದಲ್ಲಿರುವ ಬೃಹತ್ ಕನ್ನಡಿಗಳ ಮೂಲಕ ಪ್ರತಿಫಲಿಸಿ, ಭೂಮಿಯ ಮೇಲೆ ಕತ್ತಲಿರುವ ಪ್ರದೇಶಗಳಿಗೆ ತಲುಪಿಸುವುದು ಕಂಪನಿಯ ಉದ್ದೇಶ. ಇದಕ್ಕಾಗಿ ಭೂಮಿಯ ಕೆಳಮಟ್ಟದ ಕಕ್ಷೆಯಲ್ಲಿ ಸುಮಾರು 18 ಮೀಟರ್ ಉದ್ದ ಮತ್ತು 18 ಮೀಟರ್ ಅಗಲದ ಬೃಹತ್ ಕನ್ನಡಿಗಳನ್ನು ಹೊಂದಿರುವ ಉಪಗ್ರಹಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಈ ಕನ್ನಡಿಗಳನ್ನು ಬೇಕಾದ ದಿಕ್ಕಿಗೆ ತಿರುಗಿಸುವ ಮೂಲಕ ಭೂಮಿಯ ನಿರ್ದಿಷ್ಟ ಪ್ರದೇಶಗಳ ಮೇಲೆ ಸೂರ್ಯನ ಬೆಳಕನ್ನು ಬೀರುವ ವ್ಯವಸ್ಥೆ ರೂಪಿಸಲಾಗುತ್ತದೆ.

ಪ್ರಾಯೋಗಿಕ ಹಂತದಲ್ಲಿ ಒಂದು ಕನ್ನಡಿ ಸುಮಾರು ಐದು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಬೆಳಕು ಪ್ರತಿಫಲಿಸುವ ಗುರಿಯನ್ನು ಈ ಕಂಪನಿಯೂ ಹೊಂದಿದೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆಯನ್ನು ಸಹ ಇಲ್ಲಿ ಕಲ್ಪಿಸಲಾಗಿದೆ.

ಭಾರತದ ಸ್ಕೈರೂಟ್ ಏರೋಸ್ಪೇಸ್ ಜತೆ ಒಪ್ಪಂದ

ಈ ಯೋಜನೆಯನ್ನು ಪರೀಕ್ಷಿಸಲು ರಿಫ್ಲೆಕ್ಟ್ ಆರ್ಬಿಟಲ್ ಭಾರತದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯೊಂದಿಗೆ ಎರಡು ರಾಕೆಟ್ ಉಡಾವಣೆಗಳಿಗೆ ಒಪ್ಪಂದ ಮಾಡಿಕೊಂಡಿದೆ. ಹೈದರಾಬಾದ್ ಮೂಲದ ಈ ಭಾರತೀಯ ಬಾಹ್ಯಾಕಾಶ ನವೋದ್ಯಮ ಸಂಸ್ಥೆ ಉಪಗ್ರಹ ಉಡಾವಣೆಗೆ ಬೇಕಾದ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯ ಮೊದಲ ಪ್ರಯೋಗಾತ್ಮಕ ಉಡಾವಣೆಯನ್ನು 2027ರ ಎರಡನೇ ತ್ರೈಮಾಸಿಕದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಎರೆಂಡಿಲ್-1 ಹೆಸರಿನ ಪ್ರದರ್ಶನ ಉಪಗ್ರಹದ ಮೂಲಕ ತಂತ್ರಜ್ಞಾನವನ್ನು ಪರೀಕ್ಷಿಸಲು ಕಂಪನಿ ಯೋಜಿಸಿದೆ.

2035ರ ವೇಳೆಗೆ 50 ಸಾವಿರ ಉಪಗ್ರಹಗಳ ಗುರಿ

ಕಂಪನಿಯ ಯೋಜನೆ ಇಲ್ಲಿಗೆ ಮುಗಿಯುವುದಿಲ್ಲ. 2035ರ ವೇಳೆಗೆ ಸುಮಾರು 50 ಸಾವಿರ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಆರಂಭದಲ್ಲಿ ಪ್ರತಿಫಲಿಸುವ ಬೆಳಕು ಚಂದ್ರನ ಬೆಳಕಿಗೆ ಸಮಾನವಾಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಉಪಗ್ರಹಗಳ ಸಂಖ್ಯೆ ಹೆಚ್ಚಾದಂತೆ ಬೆಳಕಿನ ತೀವ್ರತೆ ಮತ್ತು ಅದು ಲಭ್ಯವಾಗುವ ಅವಧಿಯೂ ಹೆಚ್ಚಾಗಬಹುದು ಎಂಬುದು ಅದರ ನಿರೀಕ್ಷೆ.

ಈ ತಂತ್ರಜ್ಞಾನದಿಂದ ಸೌರ ವಿದ್ಯುತ್ ಘಟಕಗಳು ಸೂರ್ಯಾಸ್ತದ ನಂತರವೂ ಹೆಚ್ಚು ಸಮಯ ಕಾರ್ಯನಿರ್ವಹಿಸಲು ನೆರವಾಗಬಹುದು. ನೈಸರ್ಗಿಕ ವಿಕೋಪಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡ ಪ್ರದೇಶಗಳು, ರಕ್ಷಣಾ ಕಾರ್ಯಾಚರಣೆಗಳು ಮತ್ತು ತುರ್ತು ಸಂದರ್ಭಗಳಲ್ಲಿ ಬೆಳಕು ಒದಗಿಸಲು ಇದು ಸಹಕಾರಿಯಾಗಬಹುದು ಎಂಬುದು ಕಂಪನಿಯವಾದ.

ಆದರೆ ರಾತ್ರಿ ಆಕಾಶದ ಗತಿಯೇನು?

ಈ ಯೋಜನೆ ಎಷ್ಟು ಕುತೂಹಲಕಾರಿ ಎನಿಸಿದರೂ ವಿಜ್ಞಾನಿಗಳು ಮತ್ತು ಪರಿಸರ ತಜ್ಞರಲ್ಲಿ ಆತಂಕ ಮೂಡಿಸಿದೆ. ಬಾಹ್ಯಾಕಾಶದಿಂದ ಪ್ರತಿಫಲಿಸುವ ಬೆಳಕು ಭೂಮಿಯ ಮೇಲೆ ಕಂಪನಿ ಉದ್ದೇಶಿಸಿರುವ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ ಎಂಬುದು ಪ್ರಮುಖ ಕಳವಳ. 2025ರ ಆಗಸ್ಟ್‌ನಲ್ಲಿ ಪ್ರಕಟವಾದ ತಜ್ಞರ ಪರಿಶೀಲಿತ ಅಧ್ಯಯನವೊಂದು ವಾತಾವರಣದ ಮೂಲಕ ಹಾದುಬರುವ ಪ್ರತಿಫಲಿತ ಬೆಳಕಿನ ಪರಿಣಾಮಗಳನ್ನು ಮಾದರಿಗಳ ಮೂಲಕ ವಿಶ್ಲೇಷಿಸಿದೆ. ವಾತಾವರಣದಲ್ಲಿರುವ ಅಣುಗಳು ಮತ್ತು ಸೂಕ್ಷ್ಮ ಧೂಳಿನ ಕಣಗಳು ಬೆಳಕನ್ನು ವಿವಿಧ ದಿಕ್ಕುಗಳಿಗೆ ಚದುರಿಸಬಹುದು. ಭೂಮಿಯ ಮೇಲ್ಮೈಗೆ ತಲುಪಿದ ಬೆಳಕು ಮತ್ತೆ ಮೇಲಕ್ಕೆ ಪ್ರತಿಫಲಿಸಿ ಚದುರುವ ಸಾಧ್ಯತೆಯೂ ಇದೆ.

ಇದರಿಂದ ಕಂಪನಿ ಬೆಳಕು ನೀಡಲು ಉದ್ದೇಶಿಸಿರುವ ಪ್ರದೇಶದ ಸುತ್ತಮುತ್ತಲಿನ ಭಾಗಗಳಲ್ಲೂ ಅನಗತ್ಯ ಬೆಳಕಿನ ಹೊಳಪು ಕಾಣಿಸಿಕೊಳ್ಳಬಹುದು. ಅಧ್ಯಯನದ ಮಾದರಿ ಲೆಕ್ಕಾಚಾರಗಳ ಪ್ರಕಾರ, ಕನ್ನಡಿಗಳಿರುವ ಸ್ಥಳದಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲೂ ಹುಣ್ಣಿಮೆಯ ಚಂದ್ರನ ಬೆಳಕಿಗಿಂತ ಹೆಚ್ಚಿನ ಹೊಳಪು ಉಂಟಾಗುವ ಸಾಧ್ಯತೆಯಿದೆ. ಆದರೆ ಇವು ಕಂಪ್ಯೂಟರ್ ಮಾದರಿಗಳ ಆಧಾರದ ಮೇಲಿನ ಅಂದಾಜುಗಳಾಗಿದ್ದು, ನೈಜ ಪ್ರಯೋಗದ ಫಲಿತಾಂಶ ಇನ್ನಷ್ಟೇ ತಿಳಿಯಬೇಕಿದೆ.

ಖಗೋಳ ವಿಜ್ಞಾನಿಗಳಿಂದ ವಿರೋಧ

ರಾತ್ರಿ ಆಕಾಶದ ನೈಸರ್ಗಿಕ ಕತ್ತಲೆ ಖಗೋಳ ಅಧ್ಯಯನಕ್ಕೆ ಅತ್ಯಂತ ಮುಖ್ಯ. ಬಾಹ್ಯಾಕಾಶದಿಂದ ನಿರಂತರವಾಗಿ ಬೆಳಕು ಪ್ರತಿಫಲಿಸಿದರೆ ನಕ್ಷತ್ರಗಳ ವೀಕ್ಷಣೆ, ಖಗೋಳ ಸಂಶೋಧನೆ ಮತ್ತು ರಾತ್ರಿ ವೇಳೆ ಸಕ್ರಿಯವಾಗಿರುವ ಜೀವಿಗಳ ಸಹಜ ಜೀವನಚಕ್ರದ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.ಈ ಯೋಜನೆಗೆ ಅಮೆರಿಕದ ನಿಯಂತ್ರಣ ಸಂಸ್ಥೆಯಿಂದ 2026ರ ಜುಲೈನಲ್ಲಿ ಅನುಮೋದನೆ ದೊರೆತಿದೆ ಎಂದು ವರದಿಯಾಗಿದೆ. ಆದರೆ ಕೆಲವು ಖಗೋಳ ವಿಜ್ಞಾನಿಗಳು ಮತ್ತು ಪರಿಸರ ಸಂಘಟನೆಗಳು ಅಮೆರಿಕದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್‌ಗೆ ಈ ಯೋಜನೆಯ ವಿರುದ್ಧ ಆಕ್ಷೇಪ ಸಲ್ಲಿಸಿದ್ದು, ಅನುಮೋದನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿವೆ.

ಒಂದೆಡೆ ರಾತ್ರಿ ವೇಳೆಯಲ್ಲೂ ಸೂರ್ಯನ ಬೆಳಕು ಒದಗಿಸುವ ಹೊಸ ತಂತ್ರಜ್ಞಾನದ ಕನಸು, ಮತ್ತೊಂದೆಡೆ ನೈಸರ್ಗಿಕ ರಾತ್ರಿ ವಾತಾವರಣಕ್ಕೆ ಎದುರಾಗಬಹುದಾದ ಅಪಾಯ. ಈ ಎರಡರ ನಡುವಿನ ಸಮತೋಲನವನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ನಿಜಕ್ಕೂ ಮುಂದೊಂದು ದಿನ ಸೂರ್ಯನ ಬೆಳಕನ್ನೂ ಹಣ ಕೊಟ್ಟು ಖರೀದಿಸುವ ಕಾಲ ಬರಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).