ಮೃತ ಸಾರಾ ಬೆಕ್​ಸ್ಟ್ರೋಮ್ ಮತ್ತು ಟ್ರಂಪ್ 
ವಿದೇಶ

ಶ್ವೇತಭವನದ ಬಳಿ ಗುಂಡಿನ ದಾಳಿ; ಗಾಯಾಳು ನ್ಯಾಷನಲ್ ಗಾರ್ಡ್​ಗಳಲ್ಲಿ ಒಬ್ಬರು ಸಾವು; ಮತ್ತೊಬ್ಬರ ಸ್ಥಿತಿ ಚಿಂತಾಜನಕ; ಟ್ರಂಪ್| Donald Trump

ನ್ಯೂಯಾರ್ಕ್: ಅಮೆರಿಕಾದ ಶ್ವೇತಭವನದ ಬಳಿ ನಿನ್ನೆ(ನ. 27) ರಂದು ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಇಬ್ಬರು ರಾಷ್ಟ್ರೀಯ ಗಾರ್ಡ್​ನ ಸಾರಾ ಬೆಕ್​ಸ್ಟ್ರೋಮ್ ಮೃತಪಟ್ಟಿದ್ದು, ಮತ್ತೊಬ್ಬ ಸೈನಿಕ ಸಾವು-ಬದುಕಿನ ಮಧ್ಯ ಹೋರಾಡುತ್ತಿದ್ದಾನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ. 
ಬೆಕ್‌ಸ್ಟ್ರೋಮ್ ಅವರನ್ನು ಅತ್ಯಂತ ಗೌರವಾನ್ವಿತ, ಯುವ, ಭವ್ಯ ವ್ಯಕ್ತಿ ಎಂದು ಶ್ಲಾಘಿಸಿದ ಟ್ರಂಪ್, ಥ್ಯಾಂಕ್ಸ್‌ಗಿವಿಂಗ್ ರಜಾ ದಿನವನ್ನು ಗುರುತಿಸಲು ಯುಎಸ್ ಸೈನಿಕರೊಂದಿಗೆ ವೀಡಿಯೊ ಕರೆಯನ್ನು ಪ್ರಾರಂಭಿಸುವ ಸ್ವಲ್ಪ ಸಮಯದ ಮೊದಲು ಅವರ ಸಾವಿನ ಬಗ್ಗೆ ತಿಳಿದುಕೊಂಡೆ. ಇನ್ನೊಬ್ಬ ಯುವಕ ತನ್ನ ಪ್ರಾಣಕ್ಕಾಗಿ ಹೋರಾಡುತ್ತಿದ್ದಾನೆ. ಅವನ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಟ್ರಂಪ್ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದ್ದಾರೆ.
ಥ್ಯಾಂಕ್ಸ್​ಗಿವಿಂಗ್ ರಜೆಯ ಮುನ್ನಾ ದಿನದಂದು ವಾಷಿಂಗ್ಟನ್ ಡಿಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಗಾರ್ಡ್‌ನ ಇಬ್ಬರು ಸದಸ್ಯರನ್ನು ಶ್ವೇತಭವನದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ಭೀಕರ ಹೊಂಚುಹಾಕಿ ಗುಂಡಿನ ದಾಳಿ ನಡೆಸಲಾಗಿತ್ತು. ನಿನ್ನೆ ಇದನ್ನು ಅಧ್ಯಕ್ಷ ಟ್ರಂಪ್ ಭಯೋತ್ಪಾದನೆ ದಾಳಿ ಎಂದು ಕರೆದಿದ್ದು, ರಾಷ್ಟ್ರದ ಮೇಲಿನ ದಾಳಿ ಎಂದು ಹೇಳಿದ್ದರು. 
ಗುಂಡು ಹಾರಿಸಿದ ಶಂಕಿತನನ್ನು 29 ವರ್ಷದ ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಲಾಗಿದೆ.  ಅಫ್ಘಾನ್ ಪ್ರಜೆಯಾದ ಲಕನ್ವಾಲ್ 2021 ರಲ್ಲಿ ಅಮೆರಿಕಕ್ಕೆ ಆಗಮಿಸಿದ್ದರು ಎಂದು ವರದಿಯಾಗಿದೆ. ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ನ್ಯಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ (ಏಜೆನ್ಸೀಸ್).