ಇಂದು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ; ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(PM Modi) ಇಂದು(ನ. 28) ಕರ್ನಾಟಕ ಮತ್ತು ಗೋವಾ ಪ್ರವಾಸ ಕೈಗೊಂಡಿದ್ದು, ಬೆಳಗ್ಗೆ 11.30ರ ಸುಮಾರಿಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಬಳಿಕ ಗೋವಾಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರಧಾನಿ ಲಕ್ಷ ಕಂಠ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಜೊತೆಗೆ ಶ್ರೀಕೃಷ್ಣನ ಗರ್ಭಗುಡಿಯ ಮುಂಭಾಗದಲ್ಲಿರುವ ಸುವರ್ಣ ತೀರ್ಥ ಮಂಟಪ ಉದ್ಘಾಟನೆ, ಹಾಗೂ ಕನಕನ ಕಿಂಡಿಗೆ ಕನಕನ ಕವಚವನ್ನು ಸಮರ್ಪಿಸಲಿದ್ದಾರೆ.
ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸನ್ಯಾಸಿಗಳು, ವಿದ್ವಾಂಸರು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ನಾಗರಿಕರು ಸೇರಿದಂತೆ 100,000 ಜನ ಭಾಗವಹಿಸುತ್ತಿದ್ದು ಒಗ್ಗಟ್ಟಿನಿಂದ ಭಗವದ್ಗೀತೆಯನ್ನು ಪಠಿಸಲಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಹಿನ್ನೆಲೆ, ಮೋದಿ ಸಂಚರಿಸುವ ಎಲ್ಲ ಮಾರ್ಗಗಳಲ್ಲಿ ವಾಹನಗಳ ಸಂಚಾರ ಬಂದ್ ಮಾಡಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ಎಲ್ಲಾ ವಾಹನಗಳ ಸಂಚಾರ ಸ್ಥಗಿತ, ಬದಲಿ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಸೂಚನೆ.

ಗೋವಾದಲ್ಲಿ ಶ್ರೀರಾಮನ ಪ್ರತಿಮೆ ಅನಾವರಣ

ಉಡುಪಿಯಿಂದ ಮಧ್ಯಾಹ್ನ 3.15ರ ಸುಮಾರಿಗೆ ಗೋವಾಗೆ ತೆರಳುವ ಪ್ರಧಾನಿ ಮೋದಿ, ದಕ್ಷಿಣ ಗೋವಾದಲ್ಲಿರುವ ಕ್ಯಾನಕೋನಾದಲ್ಲಿರುವ ಮಠಕ್ಕೆ ಭೇಟಿ ನೀಡಲಿದ್ದಾರೆ. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠದ 550 ನೇ ವರ್ಷದ ಆಚರಣೆಯಾದ 'ಸಾರ್ಧ ಪಂಚಶತಮಾನೋತ್ಸವ'ದಲ್ಲಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಪ್ರಧಾನಿಯವರು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠದಲ್ಲಿ 77 ಅಡಿ ಎತ್ತರದ ಪ್ರಭು ಶ್ರೀ ರಾಮನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಜೊತೆಗೆ ಮಠವು ಅಭಿವೃದ್ಧಿಪಡಿಸಿದ 'ರಾಮಾಯಣ ಥೀಮ್ ಪಾರ್ಕ್ ಗಾರ್ಡನ್' ಅನ್ನು ಉದ್ಘಾಟಿಸಲಿದ್ದಾರೆ. ಶ್ರೀಗಳ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠವು ಮೊದಲ ಗೌಡ್ ಸಾರಸ್ವತ ಬ್ರಾಹ್ಮಣ ವೈಷ್ಣವ ಮಠವಾಗಿದೆ. ಇದು 13 ನೇ ಶತಮಾನದಲ್ಲಿ ಜಗದ್ಗುರು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಕ್ರಮವನ್ನು ಅನುಸರಿಸುತ್ತದೆ. ಈ ಮಠವು ಕುಶಾವತಿ ನದಿಯ ದಡದಲ್ಲಿರುವ ದಕ್ಷಿಣ ಗೋವಾದ ಸಣ್ಣ ಪಟ್ಟಣವಾದ ಪರ್ತಗಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net