ಔಷಧಕ್ಕೂ ಬಗ್ಗದ ಬ್ಯಾಕ್ಟೀರಿಯಾಗಳಿಗೆ ವೈರಸ್‌ಗಳೇ ಯಮ 
ವಿದೇಶ

ಔಷಧಕ್ಕೂ ಬಗ್ಗದ ಬ್ಯಾಕ್ಟೀರಿಯಾಗಳಿಗೆ ವೈರಸ್‌ಗಳೇ ಯಮ! ಹೊಸ ಚಿಕಿತ್ಸಾ ವಿಧಾನದತ್ತ ಜಗತ್ತಿನ ಚಿತ್ತ.. sciehnce world

ಸಾಮಾನ್ಯವಾಗಿ ವೈರಸ್‌ಗಳು ಮನುಷ್ಯರಲ್ಲಿ ಕಾಯಿಲೆಗಳನ್ನು ಹರಡಿಸುತ್ತವೆ ಎಂಬುದು ನಮಗೆ ತಿಳಿದಿದೆ. ಆದರೆ ಕೆಲವು ವೈರಸ್‌ಗಳೇ ಮನುಷ್ಯನ ಜೀವ ಉಳಿಸಲು ನೆರವಾಗಬಲ್ಲವು ಎಂದರೆ ನಂಬುತ್ತೀರಾ? ಹೌದು, ಆ್ಯಂಟಿಬಯೋಟಿಕ್ ಔಷಧಗಳಿಗೂ ಬಗ್ಗದೆ ಮನುಷ್ಯನ ಆರೋಗ್ಯಕ್ಕೆ ದೊಡ್ಡ ಸವಾಲಾಗಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ವಿಜ್ಞಾನಿಗಳು ಈಗ ವೈರಸ್‌ಗಳನ್ನೇ ಅಸ್ತ್ರವಾಗಿ ಬಳಸುವ ಪ್ರಯತ್ನಕ್ಕೆ ವೇಗ ನೀಡಿದ್ದಾರೆ. ಈ ಹೊಸ ಚಿಕಿತ್ಸಾ ವಿಧಾನಕ್ಕೆ 'ಫೇಜ್ ಥೆರಪಿ' (Phage Therapy) ಎಂದು ಹೆಸರಿಡಲಾಗಿದೆ.sciehnce world

sciehnce world: ಸಾಮಾನ್ಯವಾಗಿ ವೈರಸ್‌ಗಳು ಮನುಷ್ಯರಲ್ಲಿ ಕಾಯಿಲೆಗಳನ್ನು ಹರಡಿಸುತ್ತವೆ ಎಂಬುದು ನಮಗೆ ತಿಳಿದಿದೆ. ಆದರೆ ಕೆಲವು ವೈರಸ್‌ಗಳೇ ಮನುಷ್ಯನ ಜೀವ ಉಳಿಸಲು ನೆರವಾಗಬಲ್ಲವು ಎಂದರೆ ನಂಬುತ್ತೀರಾ? ಹೌದು, ಆ್ಯಂಟಿಬಯೋಟಿಕ್ ಔಷಧಗಳಿಗೂ ಬಗ್ಗದೆ ಮನುಷ್ಯನ ಆರೋಗ್ಯಕ್ಕೆ ದೊಡ್ಡ ಸವಾಲಾಗಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ವಿಜ್ಞಾನಿಗಳು ಈಗ ವೈರಸ್‌ಗಳನ್ನೇ ಅಸ್ತ್ರವಾಗಿ ಬಳಸುವ ಪ್ರಯತ್ನಕ್ಕೆ ವೇಗ ನೀಡಿದ್ದಾರೆ. ಈ ಹೊಸ ಚಿಕಿತ್ಸಾ ವಿಧಾನಕ್ಕೆ 'ಫೇಜ್ ಥೆರಪಿ' (Phage Therapy) ಎಂದು ಹೆಸರಿಡಲಾಗಿದೆ.

ಔಷಧಗಳಿಗೂ ಬಗ್ಗದ ಬ್ಯಾಕ್ಟೀರಿಯಾಗಳ ಆತಂಕ

ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕುಗಳಿಗೆ ಸಾಮಾನ್ಯವಾಗಿ ಆ್ಯಂಟಿಬಯೋಟಿಕ್ ಔಷಧಗಳನ್ನು ಬಳಸಲಾಗುತ್ತದೆ. ಆದರೆ ಈ ಔಷಧಗಳನ್ನು ಪದೇಪದೆ ಅಥವಾ ವೈದ್ಯರ ಸಲಹೆಯಿಲ್ಲದೆ ಬಳಸುವುದರಿಂದ ಕೆಲವು ಬ್ಯಾಕ್ಟೀರಿಯಾಗಳು ಔಷಧಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಪರಿಣಾಮವಾಗಿ ಸಾಮಾನ್ಯ ಔಷಧಗಳು ಅವುಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇಂತಹ ಬ್ಯಾಕ್ಟೀರಿಯಾಗಳನ್ನು ಆಂಟಿಬಯೋಟಿಕ್ ರೆಸಿಸ್ಟೆಂಟ್ ಬ್ಯಾಕ್ಟೀರಿಯಾ ಅಥವಾ ಸೂಪರ್‌ಬಗ್‌ಗಳು ಎಂದು ಕರೆಯಲಾಗುತ್ತದೆ.

ಇವುಗಳಿಂದ ಉಂಟಾಗುವ ಸೋಂಕುಗಳಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ದೊಡ್ಡ ಸವಾಲಾಗಿದೆ. ಹೊಸ ಔಷಧಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಈಗಾಗಲೇ ಲಭ್ಯವಿರುವ ಚಿಕಿತ್ಸೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಇದೇ ಸಂದರ್ಭದಲ್ಲಿ ವಿಜ್ಞಾನಿಗಳ ಗಮನ ಬ್ಯಾಕ್ಟೀರಿಯಾಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುವ ವೈರಸ್‌ಗಳತ್ತ ಹರಿದಿದೆ.

ಇದನ್ನೂ ಓದಿ : ಆಗಷ್ಟೇ ಹುಟ್ಟಿದ ಮಗುವಿಗೆ 6 ತಿಂಗಳು ನೀರು ಉಣಿಸುವುದಿಲ್ಲ ಏಕೆ? ಇಲ್ಲಿದೆ ನೋಡಿ ಅಚ್ಚರಿ ಉತ್ತರ | Newborn Baby

ಬ್ಯಾಕ್ಟೀರಿಯಾಗಳನ್ನೇ ಕೊಲ್ಲುವ ವೈರಸ್‌ಗಳು ಯಾವುವು?

ಈ ವೈರಸ್‌ಗಳನ್ನು ಬ್ಯಾಕ್ಟೀರಿಯೊಫೇಜ್‌ಗಳು ಅಥವಾ ಸಂಕ್ಷಿಪ್ತವಾಗಿ ಫೇಜ್‌ಗಳುಎಂದು ಕರೆಯಲಾಗುತ್ತದೆ. ಇವು ಬ್ಯಾಕ್ಟೀರಿಯಾಗಳನ್ನು ಮಾತ್ರ ಗುರಿಯಾಗಿಸಿಕೊಂಡು ಅವುಗಳೊಳಗೆ ಪ್ರವೇಶಿಸಿ ಸಂತಾನೋತ್ಪತ್ತಿ ಮಾಡುತ್ತವೆ. ನಂತರ ಬ್ಯಾಕ್ಟೀರಿಯಾದ ಜೀವಕೋಶವನ್ನು ಒಡೆದು ಹೊಸ ವೈರಸ್‌ಗಳು ಹೊರಬರುತ್ತವೆ. ಈ ಪ್ರಕ್ರಿಯೆಯಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಇದರ ವಿಶೇಷತೆಯೆಂದರೆ, ಸಾಮಾನ್ಯ ಆ್ಯಂಟಿಬಯೋಟಿಕ್‌ಗಳಂತೆ ದೇಹದಲ್ಲಿರುವ ಹಲವು ಬಗೆಯ ಬ್ಯಾಕ್ಟೀರಿಯಾಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುವ ಬದಲು, ಫೇಜ್‌ಗಳು ನಿರ್ದಿಷ್ಟ ಬ್ಯಾಕ್ಟೀರಿಯಾ ಅಥವಾ ಅದರ ನಿರ್ದಿಷ್ಟ ತಳಿಯನ್ನು ಗುರಿಯಾಗಿಸುತ್ತವೆ. ಹೀಗಾಗಿ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಆಯ್ದು ನಾಶಪಡಿಸುವ ಸಾಧ್ಯತೆಯಿದೆ.

ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕ ವೈರಸ್ ಆಯ್ಕೆ

ಈ ಚಿಕಿತ್ಸಾ ವಿಧಾನದ ಪ್ರಮುಖ ವಿಶೇಷತೆಯೇ ವೈಯಕ್ತಿಕ ಆಯ್ಕೆ. ಒಬ್ಬ ರೋಗಿಯಲ್ಲಿ ಸೋಂಕು ಉಂಟುಮಾಡಿರುವ ಬ್ಯಾಕ್ಟೀರಿಯಾಗಳ ತಳಿಯನ್ನು ಮೊದಲು ಪ್ರಯೋಗಾಲಯದಲ್ಲಿ ಗುರುತಿಸಲಾಗುತ್ತದೆ. ಬಳಿಕ ಆ ಬ್ಯಾಕ್ಟೀರಿಯಾವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರುವ ಸೂಕ್ತ ಫೇಜ್‌ಗಳನ್ನು ಪರೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಇದನ್ನೇ ವೈಯಕ್ತಿಕ ಫೇಜ್ ಥೆರಪಿ ಎಂದು ಕರೆಯಲಾಗುತ್ತದೆ.

ಜರ್ಮನ್ ಸೊಸೈಟಿ ಫಾರ್ ಇನ್‌ಫೆಕ್ಷಿಯಸ್ ಡಿಸೀಸ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ವೈದ್ಯಕೀಯ ಮತ್ತು ವೈಜ್ಞಾನಿಕ ಸಂಸ್ಥೆಗಳ ತಜ್ಞರು ಈ ಚಿಕಿತ್ಸೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ. ವೈರಸ್‌ಗಳ ಆಯ್ಕೆ, ಗುಣಮಟ್ಟದ ಪರೀಕ್ಷೆ, ಉತ್ಪಾದನೆ, ರೋಗಿಗಳಿಗೆ ನೀಡುವ ವಿಧಾನ ಮತ್ತು ಚಿಕಿತ್ಸೆಯ ನಂತರದ ಮೇಲ್ವಿಚಾರಣೆ ಸೇರಿದಂತೆ 60ಕ್ಕೂ ಹೆಚ್ಚು ಶಿಫಾರಸುಗಳನ್ನು ಈ ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ. ಈ ಮಾರ್ಗಸೂಚಿಗಳು ನೇಚರ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾಗಿವೆ.

ಶೇ.77ರಷ್ಟು ರೋಗಿಗಳಲ್ಲಿ ಸುಧಾರಣೆ

ಫೇಜ್ ಚಿಕಿತ್ಸೆಯ ಆರಂಭಿಕ ಫಲಿತಾಂಶಗಳು ವಿಜ್ಞಾನಿಗಳಲ್ಲಿ ಭರವಸೆ ಮೂಡಿಸಿವೆ. ಬೆಲ್ಜಿಯಂನಲ್ಲಿ 100 ರೋಗಿಗಳನ್ನು ಒಳಗೊಂಡ ಅಧ್ಯಯನದಲ್ಲಿ ಫೇಜ್ ಚಿಕಿತ್ಸೆ ಪಡೆದವರ ಪೈಕಿ ಶೇ.77ರಷ್ಟು ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಶೇ.61ರಷ್ಟು ಪ್ರಕರಣಗಳಲ್ಲಿ ಗುರಿಯಾಗಿಸಿಕೊಂಡಿದ್ದ ಬ್ಯಾಕ್ಟೀರಿಯಾಗಳು ಪರೀಕ್ಷೆಯಲ್ಲಿ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಇನ್ನೂ ಎಲ್ಲ ಸೋಂಕುಗಳಿಗೂ ಪರಿಹಾರವಲ್ಲ

ಫೇಜ್ ಥೆರಪಿ ಭರವಸೆಯ ಚಿಕಿತ್ಸಾ ವಿಧಾನವಾಗಿದ್ದರೂ, ಸದ್ಯಕ್ಕೆ ಇದನ್ನು ಎಲ್ಲ ಬ್ಯಾಕ್ಟೀರಿಯಾ ಸೋಂಕುಗಳಿಗೂ ಸಾಮಾನ್ಯ ಚಿಕಿತ್ಸೆಯಾಗಿ ಬಳಸಲು ಸಾಧ್ಯವಿಲ್ಲ. ಪ್ರತಿಯೊಂದು ಬ್ಯಾಕ್ಟೀರಿಯಾಗಳಿಗೂ ಸೂಕ್ತವಾದ ವೈರಸ್ ಅನ್ನು ಗುರುತಿಸುವುದು ಸವಾಲಿನ ಕೆಲಸವಾಗಿದೆ. ಅಲ್ಲದೆ, ಕೆಲವು ಬ್ಯಾಕ್ಟೀರಿಯಾಗಳು ಫೇಜ್‌ಗಳ ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮದೇ ಆದ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತವೆ.

ಹೀಗಾಗಿ ಈ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ದೃಢಪಡಿಸಲು ಇನ್ನಷ್ಟು ದೊಡ್ಡ ಪ್ರಮಾಣದ ನಿಯಂತ್ರಿತ ವೈದ್ಯಕೀಯ ಪ್ರಯೋಗಗಳ ಅಗತ್ಯವಿದೆ. ಸದ್ಯಕ್ಕೆ ಆಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಫೇಜ್ ಥೆರಪಿ ಹೊಸ ಭರವಸೆಯ ಮಾರ್ಗವಾಗಿ ಹೊರಹೊಮ್ಮಿದೆ, (ಏಜೆನ್ಸೀಸ್​).