Saudi Vs Iran | ಗಲ್ಫ್‌ನಲ್ಲಿ ಯುದ್ಧದ ಕಿಡಿ
ಟೆಹ್ರಾನ್: ಸೌದಿ ಅರೇಬಿಯಾ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ (Saudi Vs Iran) ನಡೆಸಿದ ದಾಳಿಗೆ ಬಲವಾದ ಪ್ರತಿಕ್ರಿಯೆ ಎಂಬಂತೆ ಸೌದಿ ಅರೇಬಿಯಾ ಭಾನುವಾರ ಮಿಲಿಟರಿ ಅಟ್ಯಾಚ್ ಸೇರಿದಂತೆ ಐದು ಇರಾನಿನ ರಾಜತಾಂತ್ರಿಕರನ್ನು ಪರ್ಸೋನಾ ನಾನ್ ಗ್ರಾಟಾ (ಅನಪೇಕ್ಷಿತ ವ್ಯಕ್ತಿ) ಎಂದು ಘೋಷಿಸಿದ್ದು, ದೇಶವನ್ನು ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಿದೆ.
ಇರಾನ್‌ನ ಸರಣಿ ದಾಳಿಗಳನ್ನು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದ್ದು, ಇರಾನ್‌ನ ಈ ಉದ್ಧಟತನವು ಅಂತಾರಾಷ್ಟ್ರೀಯ ಕಾನೂನು, ನೆರೆಹೊರೆಯ ತತ್ವಗಳು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2817 (2026) ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಇಸ್ಲಾಮಿಕ್ ಸಹೋದರತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆ, ಈ ದಾಳಿಗಳು ಮುಂದುವರೆದರೆ ಇರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಿದೆ.
ವಿಶ್ವಸಂಸ್ಥೆಯ ಚಾರ್ಟರ್‌ನ 51ನೇ ವಿಧಿಯನ್ನು ಉಲ್ಲೇಖಿಸಿರುವ ಸೌದಿ ಅರೇಬಿಯಾ, ತನ್ನ ಸಾರ್ವಭೌಮತ್ವ, ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಯಾವುದೇ ಮಿಲಿಟರಿ ಕ್ರಮ ತೆಗೆದುಕೊಳ್ಳಲು ತನಗೆ ಹಕ್ಕಿದೆ ಎಂದು ಘೋಷಿಸಿದೆ. ಇದು ಇರಾನ್ ವಿರುದ್ಧ ಸೌದಿ ಅರೇಬಿಯಾ ನೇರ ಮಿಲಿಟರಿ ಕಾರ್ಯಾಚರಣೆಗೆ ಸಜ್ಜಾಗುತ್ತಿರುವ ಮುನ್ಸೂಚನೆಯಾಗಿದೆ.
ಉಚ್ಛಾಟನೆ ಬೆನ್ನಲ್ಲೇ ಮತ್ತೆ ಕ್ಷಿಪಣಿ, ಡ್ರೋನ್ ದಾಳಿ!
ರಾಜತಾಂತ್ರಿಕರನ್ನು ಹೊರಹಾಕಿದ ಕೆಲವೇ ಗಂಟೆಗಳಲ್ಲಿ ಇರಾನ್ ಮತ್ತೆ ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡಿದ್ದು, ಸೌದಿ ರಾಜಧಾನಿ ರಿಯಾದ್ ಗುರಿಯಾಗಿಸಿ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ, ಅವುಗಳಲ್ಲಿ ಒಂದನ್ನು ವಾಯುಪಡೆ ತಡೆಹಿಡಿದಿದೆ. ಇನ್ನುಳಿದ ಎರಡು ಕ್ಷಿಪಣಿಗಳು ಜನವಸತಿಯಿಲ್ಲದ ಪ್ರದೇಶಗಳಲ್ಲಿ ಬಿದ್ದಿವೆ.
ಸೌದಿಯ ಪೂರ್ವ ಪ್ರಾಂತ್ಯದ ಮೇಲೆ ನುಗ್ಗಿ ಬಂದಿದ್ದ ಹಲವಾರು ಸ್ಫೋಟಕ ಡ್ರೋನ್‌ಗಳನ್ನು ಸೌದಿ ರಕ್ಷಣಾ ಪಡೆಗಳು ಯಶಸ್ವಿಯಾಗಿ ಹೊಡೆದು ಉರುಳಿಸಿದ್ದು, ಈ ದಾಳಿಗಳಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಗಲ್ಫ್ ಪ್ರದೇಶದಲ್ಲಿ ಯುದ್ಧದ ಭೀತಿ ಆವರಿಸಿದೆ.
ಜಾಗತಿಕವಾಗಿ ಇದರ ಪರಿಣಾಮವೇನು..?
ಸೌದಿ ಮತ್ತು ಇರಾನ್ ನಡುವಿನ ಈ ನೇರ ಸಂಘರ್ಷವು ರಾಜತಾಂತ್ರಿಕ ಸಂಬಂಧಗಳನ್ನು ಶಾಶ್ವತವಾಗಿ ಹಾನಿಗೊಳಿಸುವ ಸಾಧ್ಯತೆಯಿದ್ದು, ತನ್ನ ವಾಯುಪ್ರದೇಶ, ನಿವಾಸಿಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಸೌದಿ ಅರೇಬಿಯಾ ತನ್ನ ವಾಯುಪಡೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಹೈಅಲರ್ಟ್ನಲ್ಲಿರಿಸಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಇದು ಗಂಭೀರ ಪರಿಣಾಮ ಬೀರುವ ಆತಂಕವಿದೆ(ಏಜೆನ್ಸೀಸ್).