ವ್ಲಾಡಿಮಿರ್ ಪುಟಿನ್, ಡೊನಾಲ್ಡ್ ಟ್ರಂಪ್, ಝೆಲೆನ್ಸ್ಕಿ
- ಬರ್ಲಿನ್‌ನಲ್ಲಿ ರಷ್ಯಾ-ಯುಕ್ರೇನ್ ಶಾಂತಿ ಮಾತುಕತೆ
- ಯುರೋಪಿಯನ್ ಮತ್ತು ನ್ಯಾಟೋ ನಾಯಕರೊಂದಿಗೆ ಝೆಲೆನ್ಸ್ಕಿ ಚರ್ಚೆ
- ಟ್ರಂಪ್-ಝೆಲೆನ್ಸ್ಕಿ ಉತ್ತಮ ಮಾತುಕತೆ, ಶಾಂತಿಯತ್ತ ಯುಕ್ರೇನ್
- ಶೀಘ್ರದಲ್ಲೇ ಸಿಹಿ ಸುದ್ದಿ ಕೇಳಿಬರಲಿದೆ ಎಂದು ಟ್ರಂಪ್ ಭರವಸೆ
ಅಮೆರಿಕ: ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ರಷ್ಯಾ-ಯುಕ್ರೇನ್ ಯುದ್ಧವು ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಯಾರ ಮಧ್ಯಸ್ಥಿಕೆಗೂ ಬಗ್ಗದ ಎರಡು ರಾಷ್ಟ್ರಗಳನ್ನು ತಾನೇ ಹತೋಟಿಗೆ ತರಬೇಕು, ಅದರ ಕ್ರೆಡಿಟ್ಸ್ ನನಗೆ ಸೇರಬೇಕು ಎಂಬ ಹೆಬ್ಬಯಕೆ ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾ-ಯುಕ್ರೇನ್ ನಡುವೆ ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸುವ ಕೊನೆಯ ಹಂತಕ್ಕೆ ಕಾಲಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ, ಈ ಎರಡೂ ದೇಶಗಳ ನಡುವೆ ಶಾಂತಿ ಒಪ್ಪಂದ ತರಲು ಶತಾಯ-ಗತಾಯ ಪ್ರಯತ್ನದಲ್ಲಿ ತೊಡಗಿದ್ದಾರೆ. ಆದರೆ, ಅವರ ಹಲವಾರು ಪ್ರಯತ್ನಗಳು ಸರಣಿ ಸೋಲನ್ನು ಅನುಭವಿಸಿತು. ಆದರೂ ಬೆಂಬಿಡದೆ, ಯುಕ್ರೇನ್ ಮತ್ತು ರಷ್ಯಾ ಅಧ್ಯಕ್ಷರನ್ನು ಟ್ರಂಪ್ ಮುಖಾಮುಖಿಯಾಗಿ ಭೇಟಿಯಾಗಿ, ಸಾಕಷ್ಟು ಮಾತುಕತೆ ನಡೆಸುತ್ತಿದ್ದಾರೆ. ಆದರೀಗ, ಈ ಸತತ ಪ್ರಯತ್ನಕ್ಕೆ ಫಲ ನೀಡುವ ಸಮಯ ಸನ್ನಿಹಿತ ಎಂಬುದನ್ನು ಸ್ವತಃ ಟ್ರಂಪ್ ತಿಳಿಸಿರುವುದು ಸದ್ಯ ಕುತೂಹಲ ಮೂಡಿಸಿದೆ.
ಬರ್ಲಿನ್‌ನಲ್ಲಿ ನಡೆದ ಇತ್ತೀಚಿನ ಮಾತುಕತೆಗಳು ಫಲಪ್ರದವಾಗಿವೆ ಎಂದು ತೋರಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ನ್ಯಾಟೋದಂತಹ ಯುರೋಪಿಯನ್ ನಾಯಕರು ಮತ್ತು ಝೆಲೆನ್ಸ್ಕಿ ನಡುವೆ ಮಾತುಕತೆಗಳು ಹಲವು ಗಂಟೆಗಳ ಕಾಲ ನಡೆಯಿತು. ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಲಾಕ್ ಮತ್ತು ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಸುದೀರ್ಘ ಮಾತುಕತೆಗಳನ್ನು ನಡೆಸಿದ್ದಾರೆ. ಟ್ರಂಪ್ ಮಂಡಿಸಿದ ಪ್ರಸ್ತಾಪವನ್ನು ಆಧರಿಸಿ ಮಾತುಕತೆಗಳು ನಡೆದಿವೆ. ಸೋಮವಾರ (ಡಿ.15) ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಯುಕ್ರೇನ್ ಅಧ್ಯಕ್ಷರೊಂದಿಗಿನ ನಮ್ಮ ಮಾತುಕತೆಗಳು ಫಲ ನೀಡುವಂತಿದೆ ಎಂದಿದ್ದಾರೆ.
ರಷ್ಯಾ-ಯುಕ್ರೇನ್ ನಡುವೆ ಶೀಘ್ರದಲ್ಲೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಲಕ್ಷಣಗಳು ಗೋಚರಿಸಿವೆ. ನಾಲ್ಕು ವರ್ಷಗಳ ಸಮರ ಇನ್ನೂ ಮುಂದುವರಿಯಬಾರದು. ಇದೆಲ್ಲವೂ ಇಲ್ಲಿಗೆ ನಿಲ್ಲಬೇಕು ಎಂದು ಯುರೋಪಿಯನ್ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ವರದಿಗಳು ಉಲ್ಲೇಖಿಸಿವೆ. ಯುಕ್ರೇನ್‌ನ ಭದ್ರತೆಗೆ ಅಮೆರಿಕ ಖಾತರಿ ನೀಡುವುದರೊಂದಿಗೆ ಮಾತುಕತೆ ಫಲಪ್ರದವಾಗಿದೆ ಎಂದು ಹೇಳಲಾಗಿದೆ. ವಾಷಿಂಗ್ಟನ್ ನೀಡಿದ ಹೊಸ ಭದ್ರತಾ ಖಾತರಿಗಳ ಬಗ್ಗೆ ಝೆಲೆನ್ಸ್ಕಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ರಷ್ಯಾ ಇಲ್ಲಿ ಯಾವ ಪ್ರದೇಶಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂಬುದು ಈಗಲೂ ಅಸ್ಪಷ್ಟ. ಸದ್ಯ ಈ ಬಗ್ಗೆ ರಷ್ಯಾದಿಂದ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ಲಭಿಸಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).