ಮಾಸ್ಕೋ: ಕಳೆದ ಮೂರು ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ, ಕಳೆದ ಎರಡು ದಿನಗಳಲ್ಲಿ ಉಭಯ ದೇಶಗಳು ಮಧ್ಯೆ ನಡೆದ ಭೀಕರ ಡ್ರೋನ್ ದಾಳಿಗಳಲ್ಲಿ ಕನಿಷ್ಠ 27 ಮಂದಿ ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಉಭಯ ದೇಶಗಳ ನಡುವಿನ ಡ್ರೋನ್ ದಾಳಿಯಲ್ಲಿ ರಷ್ಯಾದಲ್ಲಿ 16 ಹಾಗೂ ಉಕ್ರೇನ್‌ನಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ರಷ್ಯಾದ ಮಾಸ್ಕೋ ಪ್ರದೇಶದಲ್ಲಿ ಐವರು, ಕ್ರಾಸ್ನೋಡರ್ ಪ್ರದೇಶದ ಅರ್ಖಿಪೋ-ಒಸಿಪೋವ್ಕಾ ರೆಸಾರ್ಟ್ ಗ್ರಾಮದಲ್ಲಿ ಡ್ರೋನ್ ಅವಶೇಷಗಳು ಬಿದ್ದು ಮೂರು ಮಕ್ಕಳು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 40 ಜನ ಗಾಯಗೊಂಡಿದ್ದಾರೆ.
ರಷ್ಯಾದ ಇ-ಕಾಮರ್ಸ್ ಕಂಪನಿಯ ಗೋದಾಮಿನ ಮೇಲೆ ಉಕ್ರೇನ್ ಅಟ್ಯಾಕ್
ಇನ್ನೂ ರಷ್ಯಾ ಆಕ್ರಮಿತ ಕ್ರೈಮಿಯಾದಲ್ಲಿ ನಾಲ್ವರು, ಗಡಿ ಭಾಗವಾದ ಬೆಲ್ಗೊರೊಡ್ ಪ್ರದೇಶದಲ್ಲಿ ನಾಲ್ವರು ಮೃಪಟ್ಟು 17 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ರಷ್ಯಾದ ಇ-ಕಾಮರ್ಸ್ ಕಂಪನಿಯ ಗೋದಾಮಿನ ಮೇಲೆ ಉಕ್ರೇನ್ ಡ್ರೋನ್ ಅಟ್ಯಾಕ್ ನಡೆಸಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಉಕ್ರೇನ್‌ನ ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದ ಕ್ರಿವಿ ಹ್ ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್ ಮೇಲೆ ನಡೆದ ದಾಳಿಯಲ್ಲಿ ಮಗು ಸೇರಿ ಮೂವರು ಮೃತಪಟ್ಟಿದ್ರೆ, ಜಪೋರಿಝಿಯಾ ಪ್ರದೇಶದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವಿಗೀಡಾಗಿದ್ದಾರೆ. 21 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ (ಏಜೆನ್ಸೀಸ್).