ಗಾಜಾ ಪುನರ್ನಿರ್ಮಾಣಕ್ಕೆ ರಷ್ಯಾದಿಂದ 1 ಬಿಲಿಯನ್ ನೆರವು: ಟ್ರಂಪ್ರ ಶಾಂತಿ ಮಂಡಳಿಗೆ ಕೈಜೋಡಿಸಿದ ಪುಟಿನ್
ಮಾಸ್ಕೋ: ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ರಷ್ಯಾ(Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧಪೀಡಿತ ಗಾಜಾ ಪಟ್ಟಿಯ ಪುನರ್ ನಿರ್ಮಾಣಕ್ಕಾಗಿ 1 ಬಿಲಿಯನ್ ಡಾಲರ್ ಹಣವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಇದರಲ್ಲಿನ ವಿಶೇಷವೆಂದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ನೇತೃತ್ವದ ಬೋರ್ಡ್ ಆಫ್ ಪೀಸ್ ಅಡಿಯಲ್ಲಿ ಕೆಲಸ ಮಾಡಲು ರಷ್ಯಾ ಸಮ್ಮತಿಸಿದೆ. ಅಲ್ಲದೆ, ಗುರುವಾರ ಮಾಸ್ಕೋದ ಕ್ರೆಮ್ಲಿನ್‌ನಲ್ಲಿ ಪ್ಯಾಲೆಸ್ತೀನ್ ನಾಯಕ ಮಹಮೂದ್ ಅಬ್ಬಾಸ್ ಅವರನ್ನು ಭೇಟಿಯಾದ ನಂತರ ಪುಟಿನ್ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಸ್ತಬ್ಧಗೊಂಡ ಆಸ್ತಿಯಿಂದ ಗಾಜಾಕ್ಕೆ ಮರುಜೀವ
ಯುಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಹೇರಿದ ನಿರ್ಬಂಧಗಳಿಂದಾಗಿ ರಷ್ಯಾದ ಅನೇಕ ವಿದೇಶಿ ಆಸ್ತಿಗಳು ಫ್ರೀಜ್ ಆಗಿವೆ. ಈಗ ಈ ಸ್ತಬ್ಧಗೊಂಡ ಆಸ್ತಿಯಿಂದಲೇ 1 ಬಿಲಿಯನ್ ಡಾಲರ್ ಹಣವನ್ನು ಗಾಜಾದಲ್ಲಿ ಶಾಲೆ, ಆಸ್ಪತ್ರೆ ಮತ್ತು ಮನೆಗಳ ನಿರ್ಮಾಣಕ್ಕೆ ಬಳಸಲು ರಷ್ಯಾ ಸಿದ್ಧವಿದೆ ಎಂದು ಪುಟಿನ್ ತಿಳಿಸಿದ್ದಾರೆ.
ಪ್ಯಾಲೆಸ್ತೀನ್ ರಾಷ್ಟ್ರವೇ ಏಕೈಕ ಪರಿಹಾರ
ಪ್ಯಾಲೆಸ್ತೀನ್ ನಾಯಕ ಅಬ್ಬಾಸ್ ಅವರೊಂದಿಗೆ ಮಾತನಾಡಿದ ಪುಟಿನ್, ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಬೇಕಾದರೆ ಪೂರ್ಣ ಸಾರ್ವಭೌಮತ್ವ ಹೊಂದಿರುವ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯೇ ಏಕೈಕ ದಾರಿಯಾಗಿದೆ. ಪ್ಯಾಲೆಸ್ತೀನ್ ಸ್ವತಂತ್ರ ರಾಷ್ಟ್ರವಾಗದ ಹೊರತು ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ದಾವೋಸ್ ಒಪ್ಪಂದಕ್ಕೆ ಪುಟಿನ್ ಬೆಂಬಲ
ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ಡೊನಾಲ್ಡ್ ಟ್ರಂಪ್ರು 19 ರಾಷ್ಟ್ರಗಳ ನಾಯಕರೊಂದಿಗೆ ಬೋರ್ಡ್ ಆಫ್ ಪೀಸ್ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ರಷ್ಯಾದ ಈ ನಿಲುವು ಹೊರಬಿದ್ದಿದೆ. ಟ್ರಂಪ್ ಮತ್ತು ಪುಟಿನ್ ನಡುವಿನ ಈ ಅಘೋಷಿತ ಸಮನ್ವಯತೆಯು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಮತ್ತು ರಷ್ಯಾ ಕೈಜೋಡಿಸಿರುವುದು ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಬಹುದು ಎಂಬ ಆಶಾವಾದ ಮೂಡಿಸಿದೆ,(ಏಜೆನ್ಸೀಸ್).