ಸೈತಾನ II ಕ್ಷಿಪಣಿ ಪರೀಕ್ಷೆ 
ವಿದೇಶ

ಜಗತ್ತಿಗೆ ಶಾಂತಿ ಸಂದೇಶ ಪಠಿಸಿ 'ಸೈತಾನ II' ಉಡಾಯಿಸಿದ ಪುಟಿನ್: ಈ ಪರಮಾಣು ಕ್ಷಿಪಣಿಯ ಅಸಲಿ ತಾಕತ್ತೇನು ಗೊತ್ತಾ? Russia Test Sarmat Missile

ಮಾಸ್ಕೋ: ಉಕ್ರೇನ್ ಜೊತೆಗಿನ ರಕ್ತಸಿಕ್ತ ಯುದ್ಧ ಸದ್ಯದಲ್ಲೇ ಕೊನೆಗೊಳ್ಳಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಗತ್ತಿಗೆ ಶಾಂತಿ ಸಂದೇಶ ನೀಡಿದ ಕೆಲವೇ ದಿನಗಳಲ್ಲಿ, ರಷ್ಯಾ ಇಡೀ ವಿಶ್ವವೇ ಬೆಚ್ಚಿಬೀಳುವಂತಹ ಕೆಲಸವೊಂದನ್ನು ಮಾಡಿದೆ.
ಹೌದು, ತನ್ನ ಪರಮಾಣು ಪಡೆಗಳನ್ನು ಆಧುನೀಕರಿಸುವ ಭರದಲ್ಲಿ ರಷ್ಯಾ ಮಂಗಳವಾರ (ಮೇ.12) ಅತ್ಯಂತ ಶಕ್ತಿಶಾಲಿ ಹೊಸ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ (ICBM) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಏನಿದು ‘ಸೈತಾನ II’ ಕ್ಷಿಪಣಿ?

ರಷ್ಯಾ ಪರೀಕ್ಷಿಸಿರುವ ಈ ಪರಮಾಣು ಶಸ್ತ್ರಸಜ್ಜಿತ ಕ್ಷಿಪಣಿಯ ಹೆಸರು ‘ಸರ್ಮತ್’(Russia Test Sarmat Missile). ಆದರೆ ಪಾಶ್ಚಿಮಾತ್ಯ ದೇಶಗಳು ಮತ್ತು ಅಮೆರಿಕ ಇದನ್ನು ಸೈತಾನ II (Satan II) ಎಂದು ಕರೆದಿದೆ. ಸೋವಿಯತ್ ಕಾಲದ ಹಳೆಯ ವೊಯೆವೊಡಾ ಕ್ಷಿಪಣಿಗಳನ್ನು ಬದಲಿಸಲು ಇದನ್ನು ತಯಾರಿಸಲಾಗಿದೆ.
ಪುಟಿನ್ ಘೋಷಿಸಿರುವ ಪ್ರಕಾರ, ಇದು ಪ್ರಸ್ತುತ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ವಿನಾಶಕಾರಿ ಕ್ಷಿಪಣಿಯಾಗಿದೆ. ಪಾಶ್ಚಿಮಾತ್ಯ ದೇಶಗಳ ಯಾವುದೇ ಕ್ಷಿಪಣಿಗಿಂತ ಇದು ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ. ಇದರ ಅತ್ಯಂತ ಅಪಾಯಕಾರಿ ವೈಶಿಷ್ಟ್ಯವೆಂದರೆ, ಇದು ಒಂದೇ ಬಾರಿಗೆ ಬೇರೆ ಬೇರೆ ಗುರಿಗಳನ್ನು ಧ್ವಂಸಗೊಳಿಸಬಲ್ಲ ಹಲವು ಪರಮಾಣು ಬಾಂಬುಗಳನ್ನು ಹೊತ್ತೊಯ್ಯಬಲ್ಲ ಕ್ಷಿಪಣಿಯಾಗಿದೆ.

ಸರ್ಮತ್ ಕ್ಷಿಪಣಿಯ ಹೈಲೈಟ್ಸ್

ಅನಿಯಮಿತ ವ್ಯಾಪ್ತಿ: ಇದು ಭೂಮಿಯ ಕೆಳಕಕ್ಷೆಯಲ್ಲಿ ಹಾರಾಟ ನಡೆಸಬಲ್ಲದು. ಅಂದರೆ 35,000 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ಗುರಿಯನ್ನು ಇದು ತಲುಪಬಲ್ಲದು.
ಅಮೆರಿಕಗೆ ಢವಢವ: ಅಮೆರಿಕ ಯಾವುದೇ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ (Missile Defence) ಹೊಂದಿದ್ದರೂ, ಅದನ್ನು ಸುಲಭವಾಗಿ ಧೂಳೀಪಟ ಮಾಡಿ ನುಗ್ಗುವ ಸಾಮರ್ಥ್ಯ ಇದಕ್ಕಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಕ್ಷಿಪಣಿ ರಷ್ಯಾದ ಸೈನ್ಯವನ್ನು ಅಧಿಕೃತವಾಗಿ ಸೇರಲಿದೆ.

ಯುದ್ಧ ಮುಗಿಯುವ ಹೊತ್ತಿಗೆ ಪರಮಾಣು ಕತ್ತಿ ಝಳಪಿಸುತ್ತಿರುವುದೇಕೆ?

ಕಳೆದ ಶನಿವಾರವಷ್ಟೇ ಎರಡನೇ ಮಹಾಯುದ್ಧದ ವಿಜಯೋತ್ಸವದ ಅಂಗವಾಗಿ ರೆಡ್ ಸ್ಕ್ವೇರ್‌ನಲ್ಲಿ ನಡೆದ ಮಿಲಿಟರಿ ಮೆರವಣಿಗೆಯಲ್ಲಿ ಮಾತನಾಡಿದ್ದ ಪುಟಿನ್, ಉಕ್ರೇನ್‌ನಲ್ಲಿನ ಹೋರಾಟ ಕೊನೆಗೊಳ್ಳುವ ಹಂತಕ್ಕೆ ಬಂದಿದೆ ಎಂದು ಹೇಳಿದ್ದರು.
ಆದರೆ, ಉಕ್ರೇನ್‌ಗೆ ಬೆಂಬಲ ನೀಡುತ್ತಿರುವ ಅಮೆರಿಕ ಮತ್ತು ಯುರೋಪ್ ದೇಶಗಳು ರಷ್ಯಾದ ವಿರುದ್ಧ ಅತಿಯಾಗಿ ಹಸ್ತಕ್ಷೇಪ ಮಾಡದಂತೆ ತಡೆಯಲು ಪುಟಿನ್ ಈ ಪರಮಾಣು ಅಸ್ತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದು ರಕ್ಷಣಾ ತಜ್ಞರ ವಾದವಾಗಿದೆ.
2000ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪುಟಿನ್ ರಷ್ಯಾದ ಸೈನ್ಯವನ್ನು ಸಂಪೂರ್ಣ ಡಿಜಿಟಲ್ ಮತ್ತು ಮಾಡರ್ನ್ ಮಾಡಲು ಹಠ ತೊಟ್ಟಿದ್ದಾರೆ. ನೂರಾರು ಹೊಸ ಕ್ಷಿಪಣಿಗಳು, ಅತ್ಯಾಧುನಿಕ ಪರಮಾಣು ಜಲಾಂತರ್ಗಾಮಿಗಳು ಮತ್ತು ಅಣುಬಾಂಬ್ ಹಾಕುವ ಯುದ್ಧವಿಮಾನಗಳನ್ನು ರಷ್ಯಾ ಸದ್ದಿಲ್ಲದೆ ಸಿದ್ಧಪಡಿಸಿಕೊಳ್ಳುತ್ತಿದೆ.

ಜಗತ್ತಿಗೆ ಎದುರಾಗಿದೆ ಹೊಸ ಕಂಟಕ!

ಇನ್ನೊಂದು ಆತಂಕಕಾರಿ ವಿಷಯವೆಂದರೆ, ರಷ್ಯಾ ಮತ್ತು ಅಮೆರಿಕ ನಡುವೆ ಇದ್ದ ಕೊನೆಯ ಪರಮಾಣು ಶಸ್ತ್ರಾಸ್ತ್ರ ಒಪ್ಪಂದವು ಇದೇ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿದೆ. ಅಂದರೆ ಅರ್ಧ ಶತಮಾನದ ನಂತರ ಇದೇ ಮೊದಲ ಬಾರಿಗೆ, ವಿಶ್ವದ ಅತಿ ದೊಡ್ಡ ಪರಮಾಣು ಶಕ್ತಿ ಹೊಂದಿರುವ ಈ ಎರಡು ದೇಶಗಳ ಮೇಲೆ ಯಾವುದೇ ಕಾನೂನು ಮಿತಿಗಳಿಲ್ಲ. ಇದು ಜಗತ್ತಿನಲ್ಲಿ ಮತ್ತೆ ಅಣು ಅಸ್ತ್ರಗಳ ರೇಸ್ ಆರಂಭವಾಗುವ ಭಯವನ್ನು ಹುಟ್ಟಿಸಿದೆ ಎಂದರೆ ಸುಳ್ಳಲ್ಲ, (ಏಜನ್ಸೀಸ್​).