- ಆರ್‌ಎಸ್‌ಎಸ್ ನಿರ್ಬಂಧಕ್ಕೆ USCIRF ಅಧಿಕಾರಿಗಳ ಒತ್ತಾಯ
- ಆರ್‌ಎಸ್‌ಎಸ್ ನಾಯಕರಿಗೆ ರಾಜತಾಂತ್ರಿಕ ಗೌರವ ನೀಡದಂತೆ ಮನವಿ
- ಧಾರ್ಮಿಕ ಅಲ್ಪಸಂಖ್ಯಾತರ ಕುರಿತ USCIRF ಆರೋಪಕ್ಕೆ ಭಾರತ ಟಾಂಗ್
RSS ban in America: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಅಮೆರಿಕದಲ್ಲಿ ಮತ್ತೆ ಆಕ್ಷೇಪದ ಅಲೆ ಎದ್ದಿದೆ. ಆರ್‌ಎಸ್‌ಎಸ್ ಮೇಲೆ ನಿರ್ಬಂಧ ಹೇರಬೇಕು ಹಾಗೂ ಸಂಘದ ನಾಯಕರಿಗೆ ಅಮೆರಿಕ ಸರ್ಕಾರ ಹೈಲೆವೆಲ್ ಸಭೆ ಅಥವಾ ರಾಜತಾಂತ್ರಿಕ ಗೌರವ ನೀಡಬಾರದು ಎಂದು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ (USCIRF) ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಯುಎಸ್‌ಸಿಐಆರ್‌ಎಫ್ ಅಧ್ಯಕ್ಷ ಆಸಿಫ್ ಮಹಮೂದ್, ಪ್ರಧಾನಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ನ ಸದಸ್ಯರಾಗಿದ್ದಾರೆ ಎಂದು ಹೇಳಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿರುವ ಸಂಘಟನೆಗಳೊಂದಿಗೆ ಆರ್ಎಸ್ಎಸ್ಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.
ಮೋಹನ್ ಭಾಗವತ್ ಅಮೆರಿಕ ಪ್ರವಾಸ
ಈ ಹೇಳಿಕೆಗಳು ಮಹತ್ವ ಪಡೆದಿರುವುದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ. ಆಗಸ್ಟ್ 29ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ‘ಸಾರ್ವತ್ರಿಕ ಏಕತೆ ಆಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾಗವತ್ ಅಮೆರಿಕಕ್ಕೆ ತೆರಳಲಿದ್ದಾರೆ.
ಆರ್‌ಎಸ್‌ಎಸ್ ನಾಯಕರಿಗೆ ಹೈಲೆವೆಲ್ ಸಭೆ ಬೇಡ
ಯುಎಸ್‌ಸಿಐಆರ್‌ಎಫ್ ಕಮಿಷನರ್ ಜೀನ್ ಮಿಲ್ಸ್, ಭಾರತ ಸರ್ಕಾರದೊಂದಿಗೆ ಸಂಪರ್ಕವಿರುವ ಆರ್‌ಎಸ್‌ಎಸ್ ನಾಯಕರು ಅಮೆರಿಕಕ್ಕೆ ಭೇಟಿ ನೀಡಿದ ಅವರಿಗೆ ಹೈಲೆವೆಲ್ ಸಭೆ ಅಥವಾ ರಾಜತಾಂತ್ರಿಕ ಗೌರವ ನೀಡಬಾರದು ಎಂದು ಹೇಳಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗೆ ಕಾರಣರಾದ ಆರ್‌ಎಸ್‌ಎಸ್ ಸದಸ್ಯರ ವಿರುದ್ಧ ಅಮೆರಿಕ ಸರ್ಕಾರ ನಿರ್ಬಂಧ ವಿಧಿಸಬೇಕು ಹೇಳಿದ್ದಾರೆ.
ಭಾರತದಿಂದ USCIRFಗೆ ತಿರುಗೇಟು
ಇತ್ತ, ಮಾರ್ಚ್‌ನಲ್ಲಿ ಯುಎಸ್‌ಸಿಐಆರ್‌ಎಫ್ ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆರೋಪ ಮಾಡಲಾಗಿತ್ತು. ಆರ್‌ಎಸ್‌ಎಸ್ ಹಾಗೂ ಆರ್ಎಡಬ್ಲ್ಯೂಸೇರಿದಂತೆ ಕೆಲವರ ವಿರುದ್ಧ ನಿರ್ಬಂಧಕ್ಕೆ ಶಿಫಾರಸು ಮಾಡಿತ್ತು. ಆದರೆ ಭಾರತ ಸರ್ಕಾರ ಈ ವರದಿಯನ್ನು ತಿರಸ್ಕರಿಸಿ, ಯುಎಸ್‌ಸಿಐಆರ್‌ಎಫ್ ಭಾರತವನ್ನು ‘ವಿಕೃತ ರೀತಿಯಲ್ಲಿ ಬಿಂಬಿಸುತ್ತಿದೆ’ ಎಂದು ತಿರುಗೇಟು ನೀಡಿತ್ತು,(ಏಜೆನ್ಸೀಸ್).