9 ಕೋಟಿ ರೂಪಾಯಿಗೆ ಹರಾಜಾದ ಈ ಲೈಫ್​ ಜಾಕೆಟ್​ 
ವಿದೇಶ

ದಾಖಲೆ ಬೆಲೆಗೆ ಹರಾಜಾದ ಟೈಟಾನಿಕ್ ಲೈಫ್ ಜಾಕೆಟ್: ಕೋಟಿ ಬೆಲೆ ಬಾಳುವ ಈ ವಸ್ತುವಿನ ಹಿಂದಿದೆ ರೋಚಕ ಕಥೆ! RMS Titanic

ಪ್ರಮುಖ ಮುಖ್ಯಾಂಶಗಳು

  • 1912ರಲ್ಲಿ ಮುಳುಗಡೆಯಾದ ಟೈಟಾನಿಕ್ ಹಡಗು
  • ಆ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ಲೈಫ್​ ಜಾಕೆಟ್​ ತೊಟ್ಟಿದ್ದ ಲಾರಾ ಮಾಬೆಲ್ ಫ್ರಾಂಕಟೆಲ್ಲಿ
  • 9 ಕೋಟಿ ರೂಪಾಯಿಗೆ ಹರಾಜಾದ ಈ ಲೈಫ್​ ಜಾಕೆಟ್​
ಲಂಡನ್​: ತನ್ನ ಮೊದಲ ಸಮುದ್ರಯಾನದಲ್ಲೇ ಮುಳುಗಡೆಯಾದ ದುರಂತ ಹಡಗೆಂದು ಕರೆಸಿಕೊಳ್ಳುವ ಆರ್​.ಎಮ್​.ಎಸ್​. ಟೈಟಾನಿಕ್​ (RMS Titanic) ಹಡಗು ಮುಳುಗಡೆಯಾದ ಸಂದರ್ಭದಲ್ಲಿ ಪ್ರಯಾಣಿಕರು ಬಳಸಿದ್ದ ಜೀವ ರಕ್ಷಕ ಜಾಕೆಟ್​ (LIfe Jacket) ಈದೀಗ ಬರೊಬ್ಬರಿ 6,70,00 ಪೌಂಡ್​ ಅಂದರೆ ಸುಮಾರು 9 ಕೋಟಿ ರೂಪಾಯಿಗಳಿಗೆ ಹರಾಜಾಗಿದೆ ಎಂದು ವರದಿಯಾಗಿದೆ.
ಈ ಜಾಕೆಟ್​ನ್ನು ಟೈಟಾನಿಕ್​ ಹಡಗಿನಲ್ಲಿ ಪ್ರಯಾಣಿಸಿದ್ದ, ಲಾರಾ ಮಾಬೆಲ್ ಫ್ರಾಂಕಟೆಲ್ಲಿ ಎನ್ನುವ ಮಹಿಳೆ ಧರಿಸಿದ್ದರೆಂದು ತಿಳಿದು ಬಂದಿದೆ. ಈ ರೀತಿಯ ದಾಖಲೆಯ ಬೆಲೆಗೆ ವಸ್ತುಗಳು ಮಾರಾಟವಾದಾಗ ಮಾತ್ರ ಹಳೆಯ ಘಟನೆಗಳು ಸದಾ ನೆನಪಿನಲ್ಲಿರುತ್ತದೆ ಎಂದು ಹರಾಜುದಾರ ಆಂಡ್ರ್ಯೂ ಆಲ್ಡ್ರಿಡ್ಜ್ ಹೇಳಿದರು.
ಈ ಲಾರಾ ಮಾಬೆಲ್ ಫ್ರಾಂಕಟೆಲ್ಲಿ ತನ್ನ ಮಾಲಕಿ ಲೂಸಿ ಡಫ್ ಗಾರ್ಡನ್ ಮತ್ತು ಲೂಸಿಯ ಪತಿ ಕಾಸ್ಮೊ ಡಫ್ ಗಾರ್ಡನ್ ಜೊತೆಗೆ ಟೈಟಾನಿಕ್​ನ್ನು ಏರಿದ್ದಳು. ಆದರೆ ಹಡಗು ಮುಳುಗಿದ ಪರಿಣಾಮ ಇವರು ಸಣ್ಣ ದೋಣಿಯನ್ನು ಏರುವ ಮೂಲಕ ಪ್ರಾಣವನ್ನು ಉಳಿಸಿಕೊಂಡರು. ಆ ಸಂದರ್ಭದಲ್ಲಿ ಲಾರಾ ಧರಿಸಿದ್ದ ಲೈಫ್​ ಜಾಕೆಟ್​ ಇಂದು ಕೋಟಿ ಬೆಲೆಗೆ ಮಾರಾಟವಾಗಿದೆ.

ಟೈಟಾನಿಕ್ ಹಡಗು; ದುರಂತದ ಕಥೆ

ಆರ್.ಎಂ.ಎಸ್. ಟೈಟಾನಿಕ್ (RMS Titanic) ತನ್ನ ಕಾಲದ ಅತ್ಯಂತ ಬೃಹತ್ ಮತ್ತು ಐಷಾರಾಮಿ ಪ್ರಯಾಣಿಕ ಹಡಗಾಗಿತ್ತು. ಇದನ್ನು ಎಂದಿಗೂ ಮುಳುಗದ ಹಡಗು ಎಂದೇ ಬಣ್ಣಿಸಲಾಗಿತ್ತು. ಬ್ರಿಟನ್‌ನ ಸೌತಾಂಪ್ಟನ್‌ನಿಂದ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ತನ್ನ ಚೊಚ್ಚಲ ಪ್ರಯಾಣವನ್ನು ಆರಂಭಿಸಿದ ಈ ಹಡಗು, 1912ರ ಏಪ್ರಿಲ್ 14ರ ಮಧ್ಯರಾತ್ರಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಬೃಹತ್ ಹಿಮಪರ್ವತಕ್ಕೆ (Iceberg) ಡಿಕ್ಕಿ ಹೊಡೆಯಿತು. ಡಿಕ್ಕಿಯಾದ ಕೇವಲ ಮೂರು ಗಂಟೆಗಳ ಅವಧಿಯಲ್ಲಿ, ಅಂದರೆ ಏಪ್ರಿಲ್ 15ರ ಮುಂಜಾನೆ ಹಡಗು ಸಂಪೂರ್ಣವಾಗಿ ಸಮುದ್ರದ ಪಾಲಾಯಿತು.
ಈ ಭೀಕರ ದುರಂತದ ಸಮಯದಲ್ಲಿ ಹಡಗಿನಲ್ಲಿ ಸುಮಾರು 2,200ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಆದರೆ, ಹಡಗಿನಲ್ಲಿ ಸಾಕಷ್ಟು ಸಂಖ್ಯೆಯ ಜೀವ ರಕ್ಷಕ ದೋಣಿಗಳು (Lifeboats) ಇಲ್ಲದ ಕಾರಣ ಮತ್ತು ತೀವ್ರ ಚಳಿಯಿಂದಾಗಿ ಸುಮಾರು 1,500ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಸಮುದ್ರಯಾನದ ಇತಿಹಾಸದಲ್ಲಿಯೇ ಇದು ಅತ್ಯಂತ ದೊಡ್ಡ ಶಾಂತಿಕಾಲದ ದುರಂತ ಎಂದು ಪರಿಗಣಿಸಲಾಗಿದೆ. ಹಡಗಿನ ಅವಶೇಷಗಳು ಸಮುದ್ರದ ಸುಮಾರು 12,500 ಅಡಿ ಆಳದಲ್ಲಿ ಇಂದಿಗೂ ಇವೆ. ಈ ದುರಂತವು ಮುಂದೆ ಹಡಗುಗಳ ಸುರಕ್ಷತಾ ನಿಯಮಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಕಾರಣವಾಯಿತು,(ಏಜನ್ಸೀಸ್​).