Pakistan Airstrike | ಚಿತ್ರಕೃಪೆ- (Reuters Photo) 
ವಿದೇಶ

ಸೇಡಿನ ಕಿಚ್ಚಿನಲ್ಲಿ ಬೆಂದ ಅಫ್ಘಾನಿಸ್ತಾನ.. ಪಾಕ್ ಸೈನಿಕರ ಹತ್ಯೆ ಬೆನ್ನಲ್ಲೇ ಅಫ್ಘಾನ್ ಪ್ರಮುಖ ನಗರಗಳ ಮೇಲೆ ವಾಯುದಾಳಿ! | Pakistan Airstrike

ಕಾಬೂಲ್/ಇಸ್ಲಾಮಾಬಾದ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ದಶಕಗಳ ಗಡಿ ವಿವಾದ ಈಗ ಸ್ಫೋಟಕ ಹಂತಕ್ಕೆ ತಲುಪಿದ್ದು, ಶುಕ್ರವಾರ ಮುಂಜಾನೆ ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಪ್ರಮುಖ ಪ್ರಾಂತ್ಯಗಳ ಮೇಲೆ ಭೀಕರ ವಾಯುದಾಳಿ ನಡೆಸುವ ಮೂಲಕ ಯುದ್ಧದ ಕಾರ್ಮೋಡವನ್ನು ಮತ್ತಷ್ಟು ದಟ್ಟವಾಗಿಸಿದೆ.
ಕಾಬೂಲ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎನ್ನಲಾಗಿದ್ದು, ಅಫ್ಘಾನ್ ರಾಜಧಾನಿಯಲ್ಲಿ ದಾಳಿ ನಡೆದ ನಿಖರವಾದ ಸ್ಥಳ ಅಥವಾ ಯಾವುದೇ ಸಂಭಾವ್ಯ ಸಾವುನೋವುಗಳ ಬಗ್ಗೆ ತಕ್ಷಣದ ಮಾಹಿತಿ ಇಲ್ಲ ಎನ್ನಲಾಗಿದೆ.
ಈ ಘಟನೆಯ ಕುರಿತಂತೆ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿದ್ದು, ಹೇಡಿತನದ ಪಾಕಿಸ್ತಾನಿ ಸೇನೆಯು ಜನವಸತಿ ಮತ್ತು ರಕ್ಷಣಾ ನೆಲೆಗಳ ಮೇಲೆ ದಾಳಿ ಮಾಡಿದೆ. ಅದೃಷ್ಟವಶಾತ್ ಈ ದಾಳಿಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದಿದ್ದು, ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಈ ದಾಳಿಯನ್ನು ದೃಢಪಡಿಸಿದ್ದು, ತಾಲಿಬಾನ್ ರಕ್ಷಣಾ ಗುರಿಗಳನ್ನೇ ನಾವು ಗುರಿಯಾಗಿಸಿದ್ದೇವೆ ಎಂದು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.
ವಾಯುದಾಳಿ ಇದೇನಾ ಕಾರಣ..?
ವಾಯುದಾಳಿ ಮುಖ್ಯ ಕಾರಣ ಗುರುವಾರ ರಾತ್ರಿ ತಾಲಿಬಾನ್ ಪಡೆಗಳು ನಡೆಸಿದ ಭೀಕರ ಗಡಿ ಕಾರ್ಯಾಚರಣೆ ಎನ್ನಲಾಗಿದ್ದು, ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ವರದಿಯ ಪ್ರಕಾರ, ಫೆಬ್ರವರಿ 26 ರಂದು ರಾತ್ರಿ 8 ಗಂಟೆಗೆ ಡುರಾಂಡ್ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಸೇನೆಯ ವಿರುದ್ಧ ತಾಲಿಬಾನ್ ಮುಜಾಹಿದ್ದೀನ್‌ಗಳು ಬೃಹತ್ ದಾಳಿ ನಡೆಸಿದರು ಎಂದು ವರದಿಯಾಗಿದೆ.
ಕೇವಲ ನಾಲ್ಕು ಗಂಟೆಗಳ ಕಾಲ ನಡೆದ ಭೀಕರ ಕಾಳಗದಲ್ಲಿ 55 ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈಯಲಾಗಿದೆ ಎಂದು ತಾಲಿಬಾನ್ ಪ್ರತಿಪಾದಿಸಿದೆ. ಡುರಾಂಡ್ ರೇಖೆಯುದ್ದಕ್ಕೂ ಇದ್ದ ಪಾಕಿಸ್ತಾನದ 19 ಸೇನಾ ಪೋಸ್ಟ್‌ಗಳು ಮತ್ತು ಎರಡು ಪ್ರಮುಖ ಗ್ಯಾರಿಸನ್‌ಗಳನ್ನು ತಾಲಿಬಾನ್ ಪಡೆಗಳು ಧ್ವಂಸಗೊಳಿಸಿವೆ. ಕೆಲವು ಪಾಕಿಸ್ತಾನಿ ಸೈನಿಕರನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು, ಸತ್ತ ಸೈನಿಕರ ಶವಗಳನ್ನು ಅಫ್ಘಾನಿಸ್ತಾನಕ್ಕೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರತೀಕಾರದ ಕಿಚ್ಚು; ಹಿನ್ನೆಲೆ ಏನು?

ಈ ಸಂಘರ್ಷವು ಭಾನುವಾರ ಪಾಕಿಸ್ತಾನ ನಡೆಸಿದ್ದ ವಾಯುದಾಳಿಯಿಂದ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಗಡಿ ಭಾಗದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದ ತಾಲಿಬಾನ್, ರಂಜಾನ್ ಮಾಸದ ಪವಿತ್ರ ದಿನಗಳಂದೇ ಪಾಕಿಸ್ತಾನದ ಮೇಲೆರಗಿದೆ. ಪಕ್ತಿಕಾ, ಪಕ್ತಿಯಾ, ಖೋಸ್ಟ್, ನಂಗರ್ಹಾರ್, ಕುನಾರ್ ಮತ್ತು ನುರಿಸ್ತಾನ್ ಪ್ರಾಂತ್ಯಗಳ ಗಡಿಯಲ್ಲಿ ಏಕಕಾಲಕ್ಕೆ ಈ ದಾಳಿಗಳು ನಡೆದಿವೆ.
ಅಫ್ಘಾನ್ ಅಧಿಕಾರಿಗಳ ಪ್ರಕಾರ, ಈ ಸಂಘರ್ಷದಲ್ಲಿ ಎಂಟು ತಾಲಿಬಾನ್ ಹೋರಾಟಗಾರರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ, ನಂಗರ್ಹಾರ್‌ನ ನಿರಾಶ್ರಿತರ ಶಿಬಿರದ ಮೇಲೆ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿಯಲ್ಲಿ 13 ನಾಗರಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ವಿವಾದಿತ 'ಡುರಾಂಡ್ ರೇಖೆ'

ಈ ಎಲ್ಲಾ ಸಂಘರ್ಷದ ಮೂಲ ಇರುವುದು 2,611 ಕಿಲೋಮೀಟರ್ ಉದ್ದದ ಡುರಾಂಡ್ ರೇಖೆಯಲ್ಲಿ. ಬ್ರಿಟಿಷರ ಕಾಲದಲ್ಲಿ ಎಳೆಯಲಾದ ಈ ಗಡಿರೇಖೆಯನ್ನು ಅಫ್ಘಾನಿಸ್ತಾನವು ಎಂದಿಗೂ ಅಧಿಕೃತವಾಗಿ ಅಂಗೀಕರಿಸಿಲ್ಲ. ಗಡಿಯ ಎರಡೂ ಬದಿಗಳಲ್ಲಿ ಪಶ್ತೂನ್ ಸಮುದಾಯದವರು ವಾಸಿಸುತ್ತಿದ್ದು, ಪಾಕಿಸ್ತಾನವು ಈ ಗಡಿಗೆ ಬೇಲಿ ಹಾಕಲು ಪ್ರಯತ್ನಿಸುತ್ತಿರುವುದು ಮತ್ತು ಗಡಿ ದಾಟಿ ದಾಳಿ ಮಾಡುತ್ತಿರುವುದು ತಾಲಿಬಾನ್ ಸರ್ಕಾರವನ್ನು ಕೆರಳುವಂತೆ ಮಾಡಿದೆ(ಏಜೆನ್ಸೀಸ್​​).