ಅಮೆರಿಕ-ಇರಾನ್ ಸಂಧಾನಕ್ಕೆ ಪಾಕ್ ಮಧ್ಯಸ್ಥಿಕೆ? ನೆತನ್ಯಾಹು ಗರಂ: ನಂಬಲಸಾಧ್ಯ ದ್ರೋಹಿ ಎಂದು ಜರಿದ ಇಸ್ರೇಲ್!
ನವದೆಹಲಿ: ಇರಾನ್ ವಿರುದ್ಧದ ಮಹಾಯುದ್ಧವು ನಿರ್ಣಾಯಕ ಹಂತ ತಲುಪಿದ್ದು, ತೆರೆಮರೆಯ ರಾಜತಾಂತ್ರಿಕ ಆಟಗಳು ಚುರುಕುಗೊಂಡಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಇರಾನ್ ಮುಂದೆ 15 ಅಂಶಗಳ ಶಾಂತಿ ಪ್ರಸ್ತಾವನೆಯನ್ನು ಇಟ್ಟಿದೆ ಎನ್ನಲಾಗುತ್ತಿದೆ. ಆದರೆ, ಈ ಪ್ರಸ್ತಾವನೆಯು ಪಾಕಿಸ್ತಾನದ(Pakistan Mediator) ಮೂಲಕ ರವಾನೆಯಾಗಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನವನ್ನು ಸಂಧಾನಕಾರನಾಗಿ ಒಪ್ಪಲು ಇಸ್ರೇಲ್ ಸಾರಾಸಗಟಾಗಿ ನಿರಾಕರಿಸಿದೆ.
ಪಾಕಿಸ್ತಾನದ ಮೇಲೆ ಇಸ್ರೇಲ್ ಸಂಶಯವೇಕೆ..?
ಇಸ್ರೇಲ್‌ನ ಮಾಜಿ ವಕ್ತಾರ ಈಲಾನ್ ಲೇವಿ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ದೇಶವನ್ನೇ ಅಧಿಕೃತವಾಗಿ ಗುರುತಿಸದ, ದಶಕಗಳಿಂದ ಶತ್ರುತ್ವ ಹೊಂದಿರುವ ಪಾಕಿಸ್ತಾನವು ಹೇಗೆ ತಾನೇ ತಟಸ್ಥ ಸಂಧಾನಕಾರನಾಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇಸ್ರೇಲ್‌ನ ಆತಂಕಕ್ಕೆ ಪ್ರಮುಖ ಕಾರಣಗಳು
ಗುರುತಿಸುವಿಕೆಯ ಕೊರತೆ: ಪಾಕಿಸ್ತಾನವು ಇಸ್ರೇಲ್ ಅನ್ನು ಒಂದು ದೇಶ ಎಂದು ಒಪ್ಪಿಕೊಂಡಿಲ್ಲ.
ಸೌದಿ-ಟರ್ಕಿ ಮೈತ್ರಿ: ಸೌದಿ ಅರೇಬಿಯಾ, ಟರ್ಕಿ ಮತ್ತು ಕತಾರ್ ದೇಶಗಳೊಂದಿಗೆ ಪಾಕಿಸ್ತಾನ ಹೊಂದಿರುವ ನಿಕಟ ಸಂಬಂಧವು ಇಸ್ರೇಲ್‌ಗೆ ಅಸುರಕ್ಷಿತ ಭಾವನೆ ಮೂಡಿಸಿದೆ.
ವಿಶ್ವಾಸಾರ್ಹತೆಯ ಪ್ರಶ್ನೆ: ಇಸ್ರೇಲ್ ದೃಷ್ಟಿಯಲ್ಲಿ ಪಾಕಿಸ್ತಾನವು ಗುಡ್ ಫೇಯ್ತ್ ಆಕ್ಟರ್ ಅಲ್ಲ.
ಜೆಡಿ ವ್ಯಾನ್ಸ್ ಎಂಟ್ರಿ: ಇರಾನ್ ಹೊಸ ಬೇಡಿಕೆ
ಅಮೆರಿಕಾದ ಕಡೆಯಿಂದ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಅಥವಾ ಜೇರೆಡ್ ಕುಶ್ನರ್ ಅವರ ಬದಲಿಗೆ, ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ನೇರ ಮಾತುಕತೆ ನಡೆಸಲು ಇರಾನ್ ಆಸಕ್ತಿ ತೋರಿದೆ ಎಂಬ ವರದಿಗಳು ಹರಿದಾಡುತ್ತಿವೆ. ಡೊನಾಲ್ಡ್ ಟ್ರಂಪ್ ಕೂಡ ಮಾರ್ಕೊ ರೂಬಿಯೊ ಮತ್ತು ವ್ಯಾನ್ಸ್ ಅವರ ನೇತೃತ್ವದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ಸುಳಿವು ನೀಡಿದ್ದಾರೆ.
ರಣಕಳದಲ್ಲಿ ತಗ್ಗದ ತೀವ್ರತೆ
ಒಂದೆಡೆ ಸಂಧಾನದ ಮಾತುಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಕ್ಷಿಪಣಿಗಳ ಅಬ್ಬರ ಕಡಿಮೆಯಾಗಿಲ್ಲ.
ಇರಾನ್ ಅಟ್ಯಾಕ್: ಮಂಗಳವಾರ ಇರಾನ್ ಇಸ್ರೇಲ್ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸಿದೆ.
ಲೆಬನಾನ್ ದಾಳಿ: ಲೆಬನಾನ್ ಉಗ್ರರು ನಡೆಸಿದ ರಾಕೆಟ್ ದಾಳಿಗೆ ಇಸ್ರೇಲ್‌ನ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಇದು ಈ ಸಂಘರ್ಷದಲ್ಲಿ ಲೆಬನಾನ್ ಗಡಿಯಿಂದ ಸಂಭವಿಸಿದ ಮೊದಲ ಇಸ್ರೇಲಿ ನಾಗರಿಕನ ಸಾವಾಗಿದೆ.
ಇಸ್ರೇಲ್ ಪ್ರತಿಕಾರ: ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆಯು ಇರಾನ್‌ನ ಪ್ರಮುಖ ಉತ್ಪಾದನಾ ಕೇಂದ್ರಗಳ ಮೇಲೆ ವಾಯುದಾಳಿ ನಡೆಸಿ ಧ್ವಂಸಗೊಳಿಸಿದೆ.
ಯುದ್ಧದ ಅಂತ್ಯವೋ ಅಥವಾ ಹೊಸ ಸಂಘರ್ಷವೋ?
ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರಿಗೆ ಯುದ್ಧವನ್ನು ಆದಷ್ಟು ಬೇಗ ನಿಲ್ಲಿಸಿ ತೈಲ ಬೆಲೆಯನ್ನು ಸ್ಥಿರಗೊಳಿಸಬೇಕಿದೆ. ಆದರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಇರಾನ್‌ನ ಪರಮಾಣು ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸದೆ ಹಿಂದೆ ಸರಿಯುವ ಇಚ್ಛೆಯಿಲ್ಲ. ಪಾಕಿಸ್ತಾನದಂತಹ ದೇಶಗಳು ಮಧ್ಯಪ್ರವೇಶಿಸಿ ಅಮೆರಿಕವನ್ನು ಒಪ್ಪಿಸಿದರೆ, ಇಸ್ರೇಲ್ ತನ್ನ ಮಿತ್ರ ರಾಷ್ಟ್ರದಿಂದಲೇ ದೂರವಾಗುವ ಸಾಧ್ಯತೆಯಿದೆ.
ಪಾಕಿಸ್ತಾನವು ಇರಾನ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ ಎಂಬುದು ನಮ್ಮ ನಂಬಿಕೆ ಇದೆ. ಅಂತಹ ದೇಶದ ಮೂಲಕ ಬರುವ ಯಾವುದೇ ಶಾಂತಿ ಪ್ರಸ್ತಾವನೆಯನ್ನು ನಾವು ಸಂಶಯದಿಂದಲೇ ನೋಡುತ್ತೇವೆ ಎಂದು ಇಸ್ರೇಲಿ ಮೂಲಗಳು ತಿಳಿಸಿವೆ,(ಏಜೆನ್ಸೀಸ್).