ಚೀನಾಕ್ಕೆ ಕತ್ತೆ ಮಾಂಸ ರಫ್ತು ಮಾಡಲು ಶೆಹಬಾಜ್ ಶರೀಫ್ ಸರ್ಕಾರ ನಿರ್ಧಾರ 
ವಿದೇಶ

ಪಾಕಿಸ್ತಾನದ ಆರ್ಥಿಕತೆಯ ಜವಾಬ್ದಾರಿ ಹೊತ್ತ ಕತ್ತೆಗಳು: ಚೀನಾಗೆ ಡಾಂಕಿ ಬಿರಿಯಾನಿ ಬಡಿಸಲು ಸಜ್ಜಾದ ಶೆಹಬಾಜ್​ ಶರೀಫ್​! Pakistan Donkey Export

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಬಡವರ ಸಂಖ್ಯೆ 7 ಕೋಟಿ ದಾಟಿದೆ
  • ಪಾಕ್‌ನಲ್ಲಿ ಕತ್ತೆಗಳ ಸಂಖ್ಯೆ 62 ಲಕ್ಷಕ್ಕೆ ಏರಿಕೆ
  • ಚೀನಾಕ್ಕೆ ಕತ್ತೆ ಮಾಂಸ ಮತ್ತು ಚರ್ಮ ರಫ್ತು ಮಾಡಲು ಶೆಹಬಾಜ್ ಶರೀಫ್ ಸರ್ಕಾರ ನಿರ್ಧಾರ
ಇಸ್ಲಾಮಾಬಾದ್​: ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ನೆರೆರಾಷ್ಟ್ರ ಪಾಕಿಸ್ತಾನ, ಇದೀಗ ತನ್ನ ಖಾಲಿ ಖಜಾನೆಯನ್ನು ತುಂಬಿಸಿಕೊಳ್ಳಲು ಒಂದು ವಿಚಿತ್ರ ಮತ್ತು ಶಾಕಿಂಗ್ ನಿರ್ಧಾರಕ್ಕೆ ಕೈಹಾಕಿದೆ. ಅದೆನೆಂದರೆ ದೇಶದಲ್ಲಿರುವ ಕತ್ತೆಗಳನ್ನು ಚೀನಾಕ್ಕೆ ರಫ್ತು ಮಾಡಿ (Pakistan Donkey Export), ಹಣ ಗಳಿಸಲು ಪಾಕ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.
ಗುರುವಾರ (ಜೂನ್ 11) ಪಾಕಿಸ್ತಾನದ ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್ ಬಿಡುಗಡೆ ಮಾಡಿದ ಪಾಕಿಸ್ತಾನ ಆರ್ಥಿಕ ಸಮೀಕ್ಷೆ 2025-26 ಅಧಿಕೃತ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಚೀನಾಕ್ಕೆ ಕತ್ತೆ ಮಾಂಸದ ಬಿರಿಯಾನಿ!

ವರದಿಯಲ್ಲಿ ಕತ್ತೆ ಮಾಂಸ ಮತ್ತು ಇತರ ಉತ್ಪನ್ನಗಳಿಗೆ ಹೊಸ ರಫ್ತು ಅವಕಾಶಗಳು ಎಂಬ ಪ್ರತ್ಯೇಕ ವಿಭಾಗವನ್ನೇ ಮಾಡಲಾಗಿದೆ. ಚೀನಾದಲ್ಲಿ ಕತ್ತೆ ಮಾಂಸ, ಕತ್ತೆ ಹಾಲು ಮತ್ತು ಅದರ ಚರ್ಮದಿಂದ ತಯಾರಿಸುವ ಎಜಿಯಾವೊ (ಒಂದು ರೀತಿಯ ಜೆಲಾಟಿನ್) ಔಷಧೀಯ ಗುಣಗಳಿಗಾಗಿ ಭಾರಿ ಬೇಡಿಕೆ ಹೊಂದಿದೆ. ಈ ಬೇಡಿಕೆಯನ್ನು ಬಳಸಿಕೊಂಡು ಚೀನಾಕ್ಕೆ ಕತ್ತೆ ಮಾಂಸ ಮತ್ತು ಚರ್ಮವನ್ನು ರಫ್ತು ಮಾಡಲು ಪಾಕಿಸ್ತಾನ ನಿರ್ಧರಿಸಿದೆ.
ಇದಕ್ಕಾಗಿ ಚೀನಾ ಸರ್ಕಾರದ ಜೊತೆ ಕೈಜೋಡಿಸಿರುವ ಪಾಕಿಸ್ತಾನ, ಕತ್ತೆಗಳನ್ನು ಕೊಲ್ಲಲು ಕಸಾಯಿಖಾನೆ ನಿರ್ಮಾಣಕ್ಕೆ ಮೆಸರ್ಸ್ ಶಹಜಾದ್ ಮತ್ತು ಶಾವೊ ಕಂಪನಿಗೆ ಹೊಸದಾಗಿ ಪರವಾನಗಿ ನೀಡಿದೆ. ಇದರೊಂದಿಗೆ ಪಾಕ್‌ನಲ್ಲಿ ಕತ್ತೆ ಮಾಂಸ ರಫ್ತು ಮಾಡುವ ಕಂಪನಿಗಳು ಜನ್ಮತಾಳಿವೆ

ದೇಶದಲ್ಲಿ ಹೆಚ್ಚುತ್ತಿದೆ ಕತ್ತೆಗಳ ಸಂಖ್ಯೆ!

ಒಂದೆಡೆ ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದ್ದರೆ, ದೇಶದಲ್ಲಿ ಕತ್ತೆಗಳ ಸಂಖ್ಯೆ ಮಾತ್ರ ರಾಕೆಟ್ ವೇಗದಲ್ಲಿ ಬೆಳೆಯುತ್ತಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ, 2023-24ರಲ್ಲಿ ಪಾಕಿಸ್ತಾನದಲ್ಲಿ 59 ಲಕ್ಷ ಇದ್ದ ಕತ್ತೆಗಳು 2025 ರಲ್ಲಿ 60 ಲಕ್ಷ ತಲುಪಿದ್ದವು. ಆದರೆ ಈಗ 2026 ರ ಅಂತ್ಯಕ್ಕೆ 62 ಲಕ್ಷ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಪಾಕಿಸ್ತಾನದ ಗ್ರಾಮೀಣ ಭಾಗದಲ್ಲಿ ಬಡ ರೈತರು ಮರ, ಮೇವು ಮತ್ತು ಬೆಳೆಗಳನ್ನು ಸಾಗಿಸಲು ಕತ್ತೆಗಳನ್ನು ಬಳಸುತ್ತಿದ್ದರು. ಆದರೆ ಈಗ ಪಾಕ್​ ಸರ್ಕಾರ ಇವುಗಳನ್ನು ಚೀನಾಕ್ಕೆ ಮಾರಿ ಕಾಸು ಮಾಡಲು ನಿಂತಿರುವುದು ಚಿಂತೆಗೆ ಕಾರಣವಾಗಿದೆ.

ಕತ್ತೆಗಳ ಜೊತೆ ಬಡವರ ಸಂಖ್ಯೆ ಹೆಚ್ಚಳ

ಈ ಆರ್ಥಿಕ ಸಮೀಕ್ಷೆಯಲ್ಲಿ ಕತ್ತೆಗಳ ಕಥೆಯ ಜೊತೆಗೆ ಪಾಕಿಸ್ತಾನದ ಜನರ ಕರುಣಾಜನಕ ಸ್ಥಿತಿಯೂ ಬಯಲಾಗಿದೆ. ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಬಡತನದ ಪ್ರಮಾಣ ಶೇಕಡಾ 7 ರಷ್ಟು ಏರಿಕೆಯಾಗಿದೆ. ಕೇವಲ ಆರೇ ವರ್ಷಗಳಲ್ಲಿ ಸುಮಾರು 2.7 ಕೋಟಿ ಜನರು ಹೊಸದಾಗಿ ಬಡತನದ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ. ಇದರೊಂದಿಗೆ ಪಾಕಿಸ್ತಾನದಲ್ಲಿರುವ ಒಟ್ಟು ಬಡವರ ಸಂಖ್ಯೆ ಬರೋಬ್ಬರಿ 7 ಕೋಟಿ ದಾಟಿದೆ.
ನಗರ-ಗ್ರಾಮ ಎಲ್ಲೆಡೆ ಬಡತನದ ತಾಂಡವ!
2018-19ರಲ್ಲಿ ಪಾಕಿಸ್ತಾನದಲ್ಲಿ ಬಡತನದ ಮಟ್ಟ ಶೇ. 21.9 ರಷ್ಟಿತ್ತು. ಆದರೆ ಈಗ (2025-26) ಅದು ಶೇ. 28.9 ಕ್ಕೆ ಜಿಗಿದಿದೆ. ಗ್ರಾಮೀಣ ಭಾಗದಲ್ಲಿ ಬಡತನ ಶೇ. 28.2 ರಿಂದ ಶೇ. 36.2 ಕ್ಕೆ ಏರಿದರೆ, ಸಿಟಿಗಳಲ್ಲೂ ಬಡತನ ಶೇ. 11 ರಿಂದ ಶೇ. 17.4 ಕ್ಕೆ ತಲುಪಿದೆ. ಹೀಗಾಗಿ ಶೀಘ್ರವಾಗಿ ಹಣ ಮಾಡುವ ಸಲುವಾಗಿ ದೇಶದಲ್ಲಿರುವ ಕತ್ತೆಗಳನ್ನು ಚೀನಾಗೆ ಬಲಿಕೊಡಲು ಶೆಹಬಾಜ್​ ಶರೀಫ್​ ಸರ್ಕಾರ ಮುಂದಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ, (ಏಜನ್ಸೀಸ್​).