ಪಾಕ್ ವಾಯುದಾಳಿಗೆ ನಿದ್ದೆಯಲ್ಲಿದ್ದ ಮಹಿಳೆ ಮಕ್ಕಳು ಸೇರಿ 28 ಜನ ದುರ್ಮರಣ
- ಪಾಕ್ ಸೇನೆಯ ನರಮೇಧ
- ಮಧ್ಯರಾತ್ರಿ ಬಲೂಚಿಸ್ತಾನ್ ಮೇಲೆ ಏರ್ಸ್ಟ್ರೈಕ್
- ಪಾಕ್ ವಾಯುದಾಳಿಗೆ ನಿದ್ದೆಯಲ್ಲಿದ್ದ ಮಹಿಳೆ ಮಕ್ಕಳು ಸೇರಿ 28 ಜನ ದುರ್ಮರಣ
ಬಲೂಚಿಸ್ತಾನ: ಬಲೂಚಿಸ್ತಾನದಲ್ಲಿ, ಪಾಕ್ ಸೇನೆಯ ಅಟ್ಟಹಾಸ ಮುಂದುವರಿದಿದ್ದು, ಭಯೋತ್ಪಾದನಾ ನಿಗ್ರಹದ ಹೆಸರಿನಲ್ಲಿ ಪಾಕ್ ಸೇನೆ ನಡೆಸಿದ ಮೃಗೀಯ ಕೃತ್ಯವೊಂದು ಇಡೀ ಮಾನವಕುಲವೇ ತಲೆತಗ್ಗಿಸುವಂತೆ ಮಾಡಿದೆ.
ಬಲೂಚಿಸ್ತಾನದ ಸುರಬ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಪಡೆಗಳು (Pakistan Army Attack on Balochistan) ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ 9 ಮಕ್ಕಳು ಮತ್ತು 7 ಮಹಿಳೆಯರು ಸೇರಿದಂತೆ ಬರೋಬ್ಬರಿ 28 ಅಮಾಯಕ ನಾಗರಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನಿದ್ರೆಯಲ್ಲಿದ್ದವರ ಮೇಲೆಯೇ ಬಾಂಬ್ ಮಳೆ!
ತಡರಾತ್ರಿ ಎರಡು ಗಂಟೆಯ ಸುಮಾರಿಗೆ ಗೊಂಡನ್ ಗ್ರಾಮದ ಮೇಲೆ ಪಾಕ್ ಸೇನೆ ಏಕಾಏಕಿ ಬಾಂಬ್ ದಾಳಿ ನಡೆಸಿದೆ. ಯಾವ ಮುನ್ಸೂಚನೆಯೂ ಇಲ್ಲದೆ, ಗಾಢ ನಿದ್ರೆಯಲ್ಲಿದ್ದ ಮುಗ್ಧ ಜನರನ್ನು ಗುರಿಯಾಗಿಸಿ ಈ ರಕ್ತಪಾತ ನಡೆಸಲಾಗಿದೆ. ಈ ಕ್ರೂರ ದಾಳಿಯಲ್ಲಿ 17ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮುಂದುವರಿಸಿದ್ದಾರೆ.
ಸೋಷಿಯಲ್ ಮೀಡಿಯಾನಲ್ಲಿ ಅಲ್ಲಿಯ ದೃಶ್ಯಗಳು ವೈರಲ್ ಆಗುತ್ತಿದ್ದು, ಮನೆಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಹಸುಗೂಸುಗಳ ಶವಗಳು ನೋಡುಗರ ಕರುಳನ್ನು ಚುಳ್ ಎನ್ನಿಸುತ್ತಿವೆ. ದಾಳಿಯ ತೀವ್ರತೆಗೆ ಮೃತಪಟ್ಟವರ ಶವಗಳು ಗುರುತು ಸಿಗದಷ್ಟು ಛಿದ್ರ-ಛಿದ್ರವಾಗಿರುವುದು ಪಾಕ್ ಸೈನ್ಯದ ರಾಕ್ಷಸಿ ಪ್ರವೃತ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಪಾಕ್ ಸೇನೆಯ ನಡವಳಿಕೆ ಮೇಲೆ ಗಂಭೀರ ಪ್ರಶ್ನೆ!
ಸ್ವಂತ ದೇಶದ ಜನರ ರಕ್ಷಣೆ ಮಾಡಬೇಕಾದ ಸೈನ್ಯವೇ ಉಗ್ರರ ಬೇಟೆಯ ಹೆಸರಿನಲ್ಲಿ ಮಹಿಳೆಯರು ಹಾಗೂ ಮಕ್ಕಳ ರಕ್ತ ಹರಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಸೆಪ್ಟೆಂಬರ್ 21-22ರಂದು ಖೈಬರ್ ಪಖ್ತುನ್ಖ್ವಾದ ಕಣಿವೆಯಲ್ಲೂ ಇದೇ ರೀತಿ ವೈಮಾನಿಕ ದಾಳಿ ನಡೆಸಿ 30 ನಾಗರಿಕರನ್ನು ಪಾಕ್ ಸೇನೆ ಬಲಿಪಡೆದಿತ್ತು. ಈಗ ಬಲೂಚಿಸ್ತಾನದಲ್ಲೂ ಅದೇ ದುರಂತ ಮರುಕಳಿಸಿದೆ. ವಿಶ್ವದ ಮುಂದೆ ತಾವು ಶಾಂತಿ ಪ್ರೀಯರೆಂದು ಪೋಸ್ ಕೊಡುತ್ತಿದ್ದ ಪಾಕಿಸ್ತಾನದ ನಿಜವಾದ ಮುಖ ಈಗ ಬಯಲಾಗಿದೆ, (ಏಜನ್ಸೀಸ್).