ಇರಾನ್​ ವಿರುದ್ಧದ ಯುದ್ಧಕ್ಕೆ ಕೇವಲ 24 ಗಂಟೆಯಲ್ಲಿ ಅಮೆರಿಕ ಖರ್ಚು ಮಾಡಿದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ! America  
ವಿದೇಶ

ಇರಾನ್​ ವಿರುದ್ಧದ ಯುದ್ಧಕ್ಕೆ ಕೇವಲ 24 ಗಂಟೆಯಲ್ಲಿ ಅಮೆರಿಕ ಖರ್ಚು ಮಾಡಿದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ! America

ಪ್ರಮುಖ ಮುಖ್ಯಾಂಶಗಳು

  • ಎಪಿಕ್​ ಪ್ಯೂರಿ ಹೆಸರಿನಲ್ಲಿ ಇರಾನ್​ ವಿರುದ್ಧ ಯುದ್ಧ ನಡೆಸುತ್ತಿರುವ ಅಮೆರಿಕ
  • ತನ್ನ ಬಳಿ ಇರುವ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಯುನೈಟೆಡ್​ ಸ್ಟೇಟ್ಸ್​
  • ಅಮೆರಿಕ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಇರಾನ್​, ಅದರ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ
  • ಇದೀಗ ಸಹಜವಾಗಿ ಮೂಡಿರುವ ಪ್ರಶ್ನೆ ಏನೆಂದರೆ ಈ ಯುದ್ಧಕ್ಕೆ ಅಮೆರಿಕ ಎಷ್ಟು ಹಣ ಖರ್ಚು ಮಾಡುತ್ತಿದೆ?
ವಾಷಿಂಗ್ಟನ್​: ಎಪಿಕ್​ ಪ್ಯೂರಿ ಹೆಸರಿನಲ್ಲಿ ಇರಾನ್​ ವಿರುದ್ಧ ಯುದ್ಧ ನಡೆಸುತ್ತಿರುವ ಅಮೆರಿಕ ( America ), ತನ್ನ ಬಳಿ ಇರುವ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ. ಫೆ.28ರಂದು ಆರಂಭವಾದ ಯುದ್ಧ ಇಂದಿಗೂ ಮುಂದುವರಿಯುತ್ತಲೇ ಇದೆ. ಅಮೆರಿಕ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಇರಾನ್​, ಅದರ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿ ಮಾಡುತ್ತಲೇ ಇದೆ. ಇದೀಗ ಸಹಜವಾಗಿ ಮೂಡಿಬಂದಿರುವ ಪ್ರಶ್ನೆ ಏನೆಂದರೆ, ಈ ಯುದ್ಧಕ್ಕೆ ಅಮೆರಿಕ ಎಷ್ಟು ಹಣ ಖರ್ಚು ಮಾಡುತ್ತಿದೆ? ಅನ್ನೋದು.
ಈ ಯುದ್ಧ ನಾಲ್ಕರಿಂದ ಐದು ವಾರಗಳ ಕಾಲ ಮುನ್ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ. ಆದರೆ, ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ಈ ಯುದ್ಧ ಇನ್ನು ಹೆಚ್ಚಿನ ವಾರಗಳವರೆಗೂ ನಡೆಯಬಹುದು ಮತ್ತು ಆ ಸಾಮರ್ಥ್ಯ ನಮ್ಮಲಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಯುದ್ಧ ಯಾವಾಗ ನಿಲ್ಲುತ್ತದೆ ಅನ್ನೋದು ಗೊತ್ತಿಲ್ಲದೇ ಇರುವುದರಿಂದ ಈ ಯುದ್ಧಕ್ಕೆ ಒಟ್ಟು ಎಷ್ಟು ಖರ್ಚಾಗುತ್ತದೆ ಎಂದು ಅಂದಾಜಿಸಲಾಗದು. ಆದರೆ, ಯುದ್ಧದ ಆರಂಭಿಕ ಚಿತ್ರಣವನ್ನು ನೋಡಿದರೆ, ಯುದ್ಧದ ಖರ್ಚು ಈಗಾಗಲೇ ವೇಗವಾಗಿ ಬೆಟ್ಟದಷ್ಟು ಏರಿದೆ. 
ಅಂದಹಾಗೆ, ಟರ್ಕಿಯ ಅನಡೋಲು ಸುದ್ದಿ ಸಂಸ್ಥೆ ಉಲ್ಲೇಖಿಸಿದ ಅಂದಾಜಿನ ಪ್ರಕಾರ, ಆಪರೇಷನ್ ಎಪಿಕ್ ಫ್ಯೂರಿಯ ಮೊದಲ 24 ಗಂಟೆಗಳಲ್ಲೇ ಅಮೆರಿಕ ಸುಮಾರು 779 ಮಿಲಿಯನ್ ಡಾಲರ್​ ಖರ್ಚು ಮಾಡಿರಬಹುದು ಎಂದು ಅಂದಾಜು ಮಾಡಿದೆ. ಭಾರತೀಯ ಕರೆನ್ಸಿ ಪ್ರಕಾರ, ಸುಮಾರು 71,300 ಕೋಟಿ ರೂಪಾಯಿಗಳು. ವಿಮಾನಗಳ ಮರುಸ್ಥಾಪನೆ, ಒಂದು ಡಜನ್‌ಗಿಂತಲೂ ಹೆಚ್ಚು ನೌಕಾ ಹಡಗುಗಳ ನಿಯೋಜನೆ ಮತ್ತು ಪ್ರಾದೇಶಿಕ ಸ್ವತ್ತುಗಳನ್ನು ಸಜ್ಜುಗೊಳಿಸುವುದು ಒಳಗೊಂಡಂತೆ ದಾಳಿಗೂ ಮುನ್ನವೇ ಮಿಲಿಟರಿ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಅಂದಾಜು 630 ಮಿಲಿಯನ್ ಡಾಲರ್​ ವೆಚ್ಚವಾಗಿದೆ ಎಂದು ಅಲ್ಜಜೀರಾ ವರದಿ ಮಾಡಿದೆ.
ಅಮೆರಿಕದ ಸೆಂಟ್ರಲ್​ ಕಮಾಂಡ್​ (ಸೆಂಟ್‌ಕಾಮ್) ನ ಫೈಟರ್ ವಿಮಾನಗಳ ಸಂಖ್ಯೆಯ ಹೆಚ್ಚಳವು (ನಿರ್ಮಾಣ ಅಥವಾ ಸಂಗ್ರಹ) ಆರಂಭಿಕ ವೆಚ್ಚಗಳಿಗೆ ಗಣನೀಯ ಕೊಡುಗೆ ನೀಡಿದೆ ಎಂದು ಅನಡೋಲು ಮಾಡಿದೆ. ಅಂದಹಾಗೆ, ಇರಾನ್​ ಮೇಲೆ ಅಮೆರಿಕ ನಡೆಸಿದ ಆರಂಭಿಕ ದಾಳಿಗಳಲ್ಲಿ F-18, F-16, F-22 ಮತ್ತು F-35 ವಿಮಾನಗಳ ನಿಯೋಜನೆಯು ಬೆನ್ನೆಲುಬಾಗಿತ್ತು ಎಂದು ವರದಿಯಾಗಿದೆ.
ಇನ್ನು 2025 ಮತ್ತು 2026ರ ಯುಎಸ್ ರಕ್ಷಣಾ ಇಲಾಖೆಯ ಬಜೆಟ್​ನಲ್ಲಿ ವಿವರಿಸಿರುವಂತೆ, ವಿಮಾನಗಳ ಹಾರಾಟದ ಅವಧಿ, ಅದರ ನಿರ್ವಹಣಾ ವೆಚ್ಚಗಳು ಮತ್ತು ಯುದ್ಧಸಾಮಗ್ರಿ ಬಳಕೆಯ ಆಧಾರದ ಮೇಲೆ, ಈ ಫೈಟರ್ ಜೆಟ್​ಗಳ ಹಾರಾಟಕ್ಕೆ ಸುಮಾರು 271.34 ಮಿಲಿಯನ್ ಡಾಲರ್​ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಯುದ್ಧದಲ್ಲಿ ಮುಂಚೂಣಿಯ ಯುದ್ಧ ವಿಮಾನಗಳಲ್ಲದೆ, ವಿಶೇಷ ವಿಮಾನಗಳು ಸಹ ಭಾಗಿಯಾಗಿದ್ದವು. ಇವುಗಳಲ್ಲಿ EA-18G ಗ್ರೋಲರ್ ಎಲೆಕ್ಟ್ರಾನಿಕ್ ಯುದ್ಧ ವಿಮಾನಗಳು, A-10C ಥಂಡರ್ಬೋಲ್ಟ್ ದಾಳಿ ವಿಮಾನಗಳು ಮತ್ತು MQ-9 ರೀಪರ್ ಡ್ರೋನ್‌ಗಳು, ಇದರ ಜೊತೆಗೆ ಕಡಿಮೆ-ವೆಚ್ಚದ ಮಾನವರಹಿತ ಯುದ್ಧ ದಾಳಿ ವ್ಯವಸ್ಥೆ (LUCAS)ಯೂ ಸೇರಿವೆ. ಹೀಗಾಗಿ, ವೆಚ್ಚವು ಸಹಜವಾಗಿಯೇ ಏರಿಕೆಯಾಗಿದೆ.
ಇನ್ನು ಯಾವುದೇ ದೊಡ್ಡ ಪ್ರಮಾಣದ ನೆಲದ ಕಾರ್ಯಾಚರಣೆಗಳು ಇಲ್ಲದೇ ಹೋದರು ಸಹ ಅಮೆರಿಕದ ಪ್ರಮುಖ ನೌಕಾಪಡೆಯನ್ನು ನಿರ್ವಹಿಸುವುದು ದುಬಾರಿಯಾಗಿದೆ. ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್​ನಂತಹ ಕ್ಯಾರಿಯರ್​ ಗ್ರೂಪ್​ ಅನ್ನು ನಿರ್ವಹಿಸಲು ದಿನಕ್ಕೆ ಸರಿಸುಮಾರು 6.5 ಮಿಲಿಯನ್ ಡಾಲರ್​ ವೆಚ್ಚವಾಗುತ್ತದೆ ಎಂದು ಸೆಂಟರ್ ಫಾರ್ ನ್ಯೂ ಅಮೇರಿಕನ್ ಸೆಕ್ಯುರಿಟಿ ಅಂದಾಜಿಸಿದೆ. ಈ ಗ್ರೂಪ್​ ಇನ್ನು ಕೆಲ ವಾರಗಳವರೆಗೆ ಯುದ್ಧ ಭೂಮಿಯಲ್ಲೇ ಉಳಿದರೆ, ಅದರ ನಿರ್ವಹಣೆಗಾಗಿ ನೂರು ಮಿಲಿಯನ್​ ಡಾಲರ್ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ವಾಯು ಕಾರ್ಯಾಚರಣೆಗಳು, ಕ್ಷಿಪಣಿ ರಕ್ಷಣಾ ಪ್ರತಿಬಂಧಕಗಳು, ಡ್ರೋನ್ ನಿಯೋಜನೆಗಳು ಮತ್ತು ಗುಪ್ತಚರ ಸ್ವತ್ತುಗಳು ಒಟ್ಟು ವೆಚ್ಚವನ್ನು ಇನ್ನಷ್ಟು ಹೆಚ್ಚು ಮಾಡುತ್ತವೆ, (ಏಜೆನ್ಸೀಸ್​).