Iran US Conflict | ವಾಷಿಂಗ್ಟನ್ ಹೇಳಿಕೆ ತಳ್ಳಿಹಾಕಿದ ಇರಾನ್ 
ವಿದೇಶ

ನಮ್ಮ ರಕ್ಷಣೆಯೇ ಮೊದಲ ಆದ್ಯತೆ...ವಾಷಿಂಗ್ಟನ್ ಹೇಳಿಕೆ ತಳ್ಳಿಹಾಕಿದ ಇರಾನ್ | Iran US Conflict

Iran US Conflict: ಇರಾನ್​ ಮತ್ತು ಅಮೆರಿಕಾ ನಡುವಿನ ಸಂಘರ್ಷದ ವಿಷಯವಾಗಿ ಮಾತುಕತೆಗಳು ತುಂಬಾ ಚೆನ್ನಾಗಿ ಮುಂದುವರಿಯುತ್ತಿವೆ ಎಂಬ ವಾಷಿಂಗ್ಟನ್‌ನ ಪುನರಾವರ್ತಿತ ಹೇಳಿಕೆಗಳನ್ನು ತಳ್ಳಿಹಾಕಿರುವ ಇರಾನ್​, ಯುದ್ಧ ಆರಂಭವಾದಾಗಿನಿಂದ ಅಮೆರಿಕದೊಂದಿಗೆ ಯಾವುದೇ ನೇರ ಅಥವಾ ಪರೋಕ್ಷ ಮಾತುಕತೆಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಂಗಳವಾರ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಇರಾನ್ ವಿದೇಶಾಂಗ ಸಚಿವಾಲಯವು, ಕಳೆದ 31 ದಿನಗಳ ಸಂಘರ್ಷದ ಅವಧಿಯಲ್ಲಿ ಅಮೆರಿಕದೊಂದಿಗೆ ಯಾವುದೇ ರೀತಿಯ ರಾಜತಾಂತ್ರಿಕ ಸಂವಾದ ನಡೆದಿಲ್ಲ ಎಂದು ತಿಳಿಸಿದೆ. ವಾಷಿಂಗ್ಟನ್ ಕೇವಲ ಪಾಕಿಸ್ತಾನ ಸೇರಿದಂತೆ ಕೆಲವು ಮಧ್ಯವರ್ತಿಗಳ ಮೂಲಕ ಮಾತುಕತೆಗಾಗಿ ಪ್ರಸ್ತಾವನೆ ಮತ್ತು ವಿನಂತಿಗಳನ್ನು ಸಲ್ಲಿಸಿದೆ ಎಂಬ ಅಂಶವನ್ನು ವಕ್ತಾರ ಎಸ್ಮಾಯಿಲ್ ಬಕೈ ಖಚಿತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಕೈ, ಈ ಮೇಲಿನ ವಿಷಯಗಳನ್ನು ಸ್ಪಷ್ಟಪಡಿಸಿದ್ದು, ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಗಳು ತೀವ್ರವಾಗಿ ನಡೆಯುತ್ತಿರುವುದರಿಂದ, ಇರಾನ್ ತನ್ನನ್ನು ರಕ್ಷಿಸಿಕೊಳ್ಳುವತ್ತ ಮಾತ್ರ ಸಂಪೂರ್ಣ ಗಮನಹರಿಸಿದ್ದು, ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ರಾಜತಾಂತ್ರಿಕತೆಗೆ ಆದ ದ್ರೋಹಗಳನ್ನು ಇರಾನ್ ಮರೆತಿಲ್ಲ ಎಂದು ಹೇಳುವ ಮೂಲಕ ಅಮೆರಿಕದ ಮೇಲಿರುವ ಅಪನಂಬಿಕೆಯನ್ನು ಅವರು ಹೊರಹಾಕಿದ್ದಾರೆ.

ಅಮೆರಿಕಾ ಹೇಳಿದ್ದೇ ಬೇರೆ..

ಇರಾನ್‌ನ ಈ ಕಠಿಣ ನಿಲುವು ಶ್ವೇತಭವನದ ಹೇಳಿಕೆಗಳಿಗೆ ಸಂಪೂರ್ಣ ವಿರುದ್ಧವಾಗಿದ್ದು, ಅಮೆರಿಕದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಇರಾನ್ ಜೊತೆಗಿನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್ ಅಧಿಕಾರಿಗಳೊಂದಿಗೆ ನೇರ ಮತ್ತು ಪರೋಕ್ಷ ಸಂಪರ್ಕದಲ್ಲಿದ್ದೇವೆ ಹಾಗೂ ಶೀಘ್ರದಲ್ಲೇ ಒಂದು ಒಪ್ಪಂದ ಸಾಧ್ಯವಾಗಬಹುದು ಎಂದು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ.
ವಾಷಿಂಗ್ಟನ್ ಪ್ರಸ್ತುತ ಮೊಹಮ್ಮದ್ ಬಘರ್ ಗಾಲಿಬಾಫ್ ಅವರೊಂದಿಗೆ ಸಂವಹನ ನಡೆಸುತ್ತಿದ್ದು, ಒಂದು ವಾರದೊಳಗೆ ಅವರೊಂದಿಗೆ ಕೆಲಸ ಮಾಡಬಹುದೇ ಎಂಬುದನ್ನು ನಿರ್ಧರಿಸಲಾಗುವುದು, ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಈ ಭಿನ್ನ ಹೇಳಿಕೆಗಳು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಅಂತರವನ್ನು ಎತ್ತಿ ತೋರಿಸುತ್ತಿವೆ.
ಫೆಬ್ರವರಿ 28 ರಂದು ಆಪರೇಷನ್ ಎಪಿಕ್ ಫ್ಯೂರಿ ಅಡಿಯಲ್ಲಿ ಪ್ರಾರಂಭವಾದ ಇರಾನ್-ಅಮೆರಿಕ-ಇಸ್ರೇಲ್ ಯುದ್ಧವು ಈಗ ಎರಡನೇ ತಿಂಗಳಿಗೆ ಪ್ರವೇಶಿಸಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಪ್ರಾರಂಭವಾದ ಈ ಸಂಘರ್ಷವು ಇಡೀ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಯುದ್ಧವನ್ನು ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ 15 ಅಂಶಗಳ ಶಾಂತಿ ಯೋಜನೆಯನ್ನು ಪ್ರಸ್ತಾಪಿಸಿದ್ದರೂ, ಇರಾನ್ ಅದನ್ನು ತಿರಸ್ಕರಿಸಿದೆ. ಬದಲಾಗಿ ಇರಾನ್ ಐದು ಕಠಿಣ ಷರತ್ತುಗಳನ್ನು ವಿಧಿಸಿದೆ.
ಇದರಲ್ಲಿ ಯುದ್ಧ ಪರಿಹಾರ ನೀಡಬೇಕು, ಇರಾನ್ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕು ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಾರ್ವಭೌಮತ್ವವನ್ನು ಅಧಿಕೃತವಾಗಿ ಗುರುತಿಸಬೇಕು ಎಂಬ ಪ್ರಮುಖ ಬೇಡಿಕೆಗಳಿವೆ(ಏಜೆನ್ಸೀಸ್​​).