ಪ್ರಧಾನಿ ನರೇಂದ್ರ ಮೋದಿ 
ವಿದೇಶ

ಆಸ್ಟ್ರೇಲಿಯಾ​ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಆನ್​ಲೈನ್​ನಲ್ಲಿ ಕೊಲೆ ಬೆದರಿಕೆ: ತನಿಖೆಗೆ ಆದೇಶ | PM Modi

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ(PM Modi) ತೆರಳುವ ಮೊದಲೇ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಆಸ್ಟ್ರೇಲಿಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಶನಿವಾರ(ಜು. 04) ವರದಿಯಾಗಿದೆ.
ಆಸ್ಟ್ರೇಲಿಯಾ ಮಾಧ್ಯಮಗಳ ವರದಿ ಪ್ರಕಾರ, ಜುಲೈ 9ರಂದು ಪ್ರಧಾನಿ ಮೋದಿ ಮೆಲ್ಬೋರ್ನ್‌ಗೆ ಭೇಟಿ ನೀಡುವ ಕೆಲವೇ ದಿನಗಳ ಮೊದಲು ಅವರನ್ನು ಗುರಿಯಾಗಿಸಿಕೊಂಡು ಆನ್‌ಲೈನ್‌ನಲ್ಲಿ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಬಗ್ಗೆ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಕೊಲೆ ಬೆದರಿಕೆ ಕಾಮೆಂಟ್ ಹಾಕಿದ ಆರೋಪಿಯ ಸಾಮಾಜಿಕ ಐಪಿ ವಿಳಾಸವನ್ನು ಪತ್ತೆಹಚ್ಚಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಪ್ರಧಾನಿ ಮೋದಿಯವರ ಭೇಟಿ ಸಮಯದಲ್ಲಿ ಮೆಲ್ಬೋರ್ನ್‌ನ ಮಾರ್ವೆಲ್ ಕ್ರೀಡಾಂಗಣದಲ್ಲಿ ನಡೆಯಲಿರುವ "ಮೆಲ್ಬೋರ್ನ್ ಮೀಟ್ಸ್ ಮೋದಿ" ಸಮುದಾಯ ಕಾರ್ಯಕ್ರಮದ ಪ್ರಚಾರದ ಫೇಸ್‌ಬುಕ್ ಪೋಸ್ಟ್‌ನ ಅಡಿಯಲ್ಲಿ ಆರೋಪಿ ಕೊಲೆ ಬೆದರಿಕೆ ಕಮೆಂಟ್ ಹಾಕಿದ್ದಾನೆ. ಈ ಕಾಮೆಂಟ್ ಅನ್ನು ಅಬು ಮುಸ್ತಫಾ ಎಂಬ ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಆರೋಪಿ ತನ್ನ ಕಮೆಂಟ್​ನಲ್ಲಿ ಈ ಕಾರ್ಯಕ್ರಮದ ಸಮಯದಲ್ಲಿ ಕ್ರೀಡಾಂಗಣದ ಛಾವಣಿಯನ್ನು ಮುಚ್ಚುವುದು ಉತ್ತಮ, ಇಲ್ಲದಿದ್ದರೆ ಅವರು ತಮ್ಮ ಮರಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಬರುತ್ತಾರೆ ಎಂದು ಬರೆದಿದ್ದಾನೆ. ತಕ್ಷಣ ಕಾರ್ಯಕ್ರಮದ ಸಂಘಟಕರು ಕಮೆಂಟ್​ ಬಗ್ಗೆ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೂ ತನಿಖೆಯ ಬಗ್ಗೆ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆರೋಪಿಗೆ ಸಂಬಂಧಿಸಿದ ಐಪಿ ವಿಳಾಸವನ್ನು ಗುರುತಿಸಿದ್ದಾರೆ. ಮತ್ತು ಸಂದೇಶದ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).