ದಿನೇ ದಿನೇ ಮುಳುಗುತ್ತಿದೆ ಜಗತ್ತಿನ ಅತೀ ಚಿಕ್ಕ ರಾಷ್ಟ್ರ! 2100ರ ವೇಳೆಗೆ ಭೂಮಿ ಮೇಲೇ ಇರಲ್ವಂತೆ ಈ ದ್ವೀಪ | Tuvalu  
ವಿದೇಶ

ದಿನೇ ದಿನೇ ಮುಳುಗುತ್ತಿದೆ ಜಗತ್ತಿನ ಅತೀ ಚಿಕ್ಕ ರಾಷ್ಟ್ರ! 2100ರ ವೇಳೆಗೆ ಭೂಮಿ ಮೇಲೇ ಇರಲ್ವಂತೆ ಈ ದ್ವೀಪ | Tuvalu

Tuvalu: ಎತ್ತ ನೋಡಿದರೂ ನೀಲಿ ಹಾಸಿಗೆಯಂತೆ ಕಾಣುವ ಕಡಲಿನ ಮಧ್ಯೆ ಹಸಿರು ಚುಕ್ಕೆಗಳಂತಿರುವ ಸುಂದರ ದ್ವೀಪಗಳು, ಕಣ್ಣಿಗೆ ಹಬ್ಬ ಅನಿಸುವ ಸಮುದ್ರದ ಕಿನ್ನಾರೆ, ಪ್ರಕೃತಿಯ ಅದ್ಭುತ ಸೌಂದರ್ಯ ಅನೇಕರ ಕಣ್ಮನ ಸೆಳೆಯುವಂತಿದೆ. ಆದರೆ, ಹೊರನೋಟಕ್ಕೆ ಸ್ವರ್ಗದಂತೆ ಕಾಣುವ ಈ ಪುಟ್ಟ ರಾಷ್ಟ್ರದ ಭವಿಷ್ಯ ಮಾತ್ರ ನಿಜಕ್ಕೂ ಬಹಳ ಶಾಕಿಂಗ್ ಆಗಿದೆ.

ದಿನದಿಂದ ದಿನಕ್ಕೆ ಏರುತ್ತಿರುವ ಸಮುದ್ರ ಮಟ್ಟ, ಕರಾವಳಿ ಸವೆತ ಮತ್ತು ಹವಾಮಾನ ಬದಲಾವಣೆಯಿಂದಾಗಿ ಇಡೀ ದೇಶವೇ ಸಮುದ್ರದ ಪಾಲಾಗುವ ಭೀತಿ ಎದುರಾಗಿದೆ. ಇಡೀ ಕಡಲಿನಲ್ಲಿ ಒಂದು ಪುಟ್ಟ ಜಾಗವನ್ನು ಪಡೆದಿರುವ ಈ ದ್ವೀಪವು ಜಗತ್ತಿನ ಅತ್ಯಂತ ಚಿಕ್ಕ ರಾಷ್ಟ್ರ ಎಂಬ ಪಟ್ಟಿಗೆ ಸೇರಿಕೊಂಡಿದೆ. ಅಷ್ಟಕ್ಕೂ ಈ ದೇಶ ಯಾವುದು? ಇಲ್ಲಿ ಜನರು ವಾಸವಿದ್ದಾರಾ? ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.

ಭೂಮಿಯ ಮೇಲಿನ ಅತಿದೊಡ್ಡ ಸಾಗರವೆಂದೇ ಗುರುತಿಸಿಕೊಂಡಿರುವ ಪೆಸಿಫಿಕ್ ಮಹಾಸಾಗರ ಭೂಮಿಯ ಒಟ್ಟು ಮೇಲ್ಮೈ ವಿಸ್ತೀರ್ಣದ ಶೇ.30ಕ್ಕೂ ಹೆಚ್ಚು ಭಾಗವನ್ನು ಆವರಿಸಿದೆ. ಈ ಸಾಗರದ ನೀಲಿ ವಿಸ್ತಾರದ ನಡುವೆ ಹಸಿರು ಚುಕ್ಕೆಗಳಂತೆ ಕಾಣುವ ನೂರಾರು ದ್ವೀಪಗಳು ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸಿವೆ. ಇಂತಹ ದ್ವೀಪಗಳ ನಡುವೆ ಇರುವ ಪುಟ್ಟ ಸ್ವತಂತ್ರ ರಾಷ್ಟ್ರವೇ ಟುವಾಲು. ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ಈ ದೇಶವು ಒಂಬತ್ತು ಹವಳದ ದ್ವೀಪಗಳು ಮತ್ತು ಅಟಾಲ್‌ಗಳಿಂದ ಕೂಡಿದೆ.

1978ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ಟುವಾಲು, ವಿಶ್ವದ ಎರಡನೇ ಅತಿ ಚಿಕ್ಕ ರಾಷ್ಟ್ರವೆಂಬ ಹೆಗ್ಗಳಿಕೆ ಹೊಂದಿದೆ. ಆಸ್ಟ್ರೇಲಿಯಾ ಮತ್ತು ಹವಾಯಿ ನಡುವಿನ ಪ್ರದೇಶದಲ್ಲಿರುವ ಈ ದೇಶದ ಒಟ್ಟು ವಿಸ್ತೀರ್ಣ ಕೇವಲ 26 ಚದರ ಕಿ.ಮೀ. ಇಲ್ಲಿನ ಜನಸಂಖ್ಯೆ 12 ಸಾವಿರಕ್ಕಿಂತ ಕಡಿಮೆ ಎನ್ನಲಾಗಿದೆ. ದೇಶದ ರಾಜಧಾನಿ ಫುನಾಫುಟಿ ದ್ವೀಪ. ಹಿಂದೆ ಈ ಪ್ರದೇಶವನ್ನು ಎಲ್ಲಿಸ್ ದ್ವೀಪಗಳು ಎಂದು ಕರೆಯಲಾಗುತ್ತಿತ್ತು.

ಮುಳುಗುವ ಭೀತಿಯಲ್ಲಿ ಸುಂದರ ದ್ವೀಪ

ಟುವಾಲು ಇಂದು ಎದುರಿಸುತ್ತಿರುವ ಅತಿದೊಡ್ಡ ಸವಾಲು ಎಂದರೆ ಅದುವೇ ಸಮುದ್ರ ಮಟ್ಟದ ಏರಿಕೆ. ಸಮುದ್ರ ಮಟ್ಟದಿಂದ ಸರಾಸರಿ ಕೇವಲ ಎರಡು ಮೀಟರ್ ಎತ್ತರದಲ್ಲಿರುವ ಈ ರಾಷ್ಟ್ರಕ್ಕೆ ಸಮುದ್ರ ಮಟ್ಟದಲ್ಲಿನ ಸಣ್ಣ ಏರಿಕೆಯೂ ದೊಡ್ಡ ಅಪಾಯವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚು. ವರ್ಷಗಳಿಂದ ಕಡಲಿನ ನೀರು ಕರಾವಳಿ ಪ್ರದೇಶಗಳನ್ನು ಆಕ್ರಮಿಸುತ್ತಿದ್ದು, ಕರಾವಳಿ ಸವೆತವೂ ಹೆಚ್ಚುತ್ತಿದೆ. ಕೆಲವು ಅಧ್ಯಯನಗಳ ಪ್ರಕಾರ, ಇದೇ ಪರಿಸ್ಥಿತಿ ಮುಂದುವರಿದರೆ ಈ ಶತಮಾನದ ಅಂತ್ಯದ ವೇಳೆಗೆ ಟುವಾಲುವಿನ ಬಹುಭಾಗ ಸಮುದ್ರದಡಿ ಮುಳುಗುವ ಅಪಾಯವಿದೆ.

ಇಲ್ಲಿನ ಕೆಲವು ದ್ವೀಪಗಳು ಈಗಾಗಲೇ ಸಮುದ್ರದ ನೀರಿನ ಪ್ರಭಾವಕ್ಕೆ ಒಳಗಾಗಿವೆ. ಉಳಿದ ದ್ವೀಪಗಳ ಭವಿಷ್ಯವೂ ಆತಂಕಕಾರಿಯಾಗಿದೆ. ಉಬ್ಬರವಿಳಿತದ ಸಂದರ್ಭದಲ್ಲಿ ಸಮುದ್ರದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗುವುದರಿಂದ ಜನರು ಸುರಕ್ಷಿತ ಸ್ಥಳಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಪ್ರತಿವರ್ಷ ಸಮುದ್ರ ಮಟ್ಟ ಸುಮಾರು 3.9 ಮಿಲಿಮೀಟರ್ ಏರಿಕೆಯಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಕೃಷಿಗೂ ಅಡ್ಡಿ ಉಪ್ಪು ನೀರು

ಸಮುದ್ರದ ನೀರು ಭೂಭಾಗಕ್ಕೆ ನುಗ್ಗುತ್ತಿರುವುದರಿಂದ ಇಲ್ಲಿನ ಜನರ ಜೀವನೋಪಾಯಕ್ಕೂ ಹೊಡೆತ ಬಿದ್ದಿದೆ. ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯದ ಮೂಲಗಳಾಗಿವೆ. ಆದರೆ, ಸಮುದ್ರದ ನೀರು ಕೃಷಿ ಭೂಮಿಗೆ ನುಗ್ಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಕಷ್ಟಕರವಾಗಿವೆ. ಅಂತರ್ಜಲದಲ್ಲೂ ಉಪ್ಪಿನ ಅಂಶ ಹೆಚ್ಚಿರುವುದರಿಂದ ಕುಡಿಯಲು ಯೋಗ್ಯವಾದ ಸಿಹಿನೀರಿನ ಕೊರತೆಯೂ ಜನರನ್ನು ಬೆಂಬಿಡದೆ ಕಾಡುತ್ತಿದೆ.

ಇಷ್ಟೆಲ್ಲ ನೈಸರ್ಗಿಕ ಸೌಂದರ್ಯ ಹೊಂದಿದ್ದರೂ ಟುವಾಲುವಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷಕ್ಕೆ ಎರಡು ಸಾವಿರಕ್ಕಿಂತ ಕಡಿಮೆ ಎನ್ನಲಾಗಿದೆ. ಸುಂದರ ಕಡಲತೀರಗಳು ಮತ್ತು ದ್ವೀಪಗಳಿದ್ದರೂ ಹವಾಮಾನ ಬದಲಾವಣೆಯ ಪರಿಣಾಮಗಳು ಈ ಪುಟ್ಟ ರಾಷ್ಟ್ರದ ಭವಿಷ್ಯವನ್ನೇ ಪ್ರಶ್ನಿಸುವಂತಾಗಿವೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಕೇವಲ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲ. ಅವು ಒಂದು ದೇಶದ ಅಸ್ತಿತ್ವವನ್ನೇ ಅಪಾಯಕ್ಕೆ ಸಿಲುಕಿಸಬಲ್ಲವು ಎಂಬುದಕ್ಕೆ ಟುವಾಲು ಒಂದು ಜ್ವಲಂತ ಸಾಕ್ಷಿ ಎಂದೇ ಹೇಳಬಹುದು,(ಏಜೆನ್ಸೀಸ್).