1 ಬಿಲಿಯನ್ ಡಾಲರ್ ಜತೆಗೆ ಅತ್ಯಂತ ಸುಂದರ ಯುವತಿಯನ್ನು ಕೊಡಿ: ಟರ್ಕಿಗೆ ಉಗಾಂಡಾ ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ! Muhoozi Kainerugaba

ಸೊಮಾಲಿಯಾದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಲು ಉಗಾಂಡಾ ನೀಡುತ್ತಿರುವ ಸೇನಾ ಕೊಡುಗೆಗೆ ಪ್ರತಿಯಾಗಿ ಟರ್ಕಿಯು 1 ಬಿಲಿಯನ್ ಡಾಲರ್ ಹಣ ನೀಡಬೇಕು ಎಂಬುದು ಸೇನಾ ಮುಖ್ಯಸ್ಥನ ಮೊದಲ ಬೇಡಿಕೆಯಾಗಿದೆ. ಇದರ ಜತೆಗೆ, ಟರ್ಕಿ ದೇಶದ ಅತ್ಯಂತ ಸುಂದರ ಯುವತಿಯನ್ನು ತಮಗೆ ಒಪ್ಪಿಸಬೇಕು ಮತ್ತು ತಾವು ಆಕೆಯನ್ನು ವಿವಾಹವಾಗುವುದಾಗಿ ಘೋಷಿಸುವ ಮೂಲಕ ಮುಹೂಜಿ ಕೈನೆರುಗಾಬಾ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ.
Muhoozi Kainerugaba
ಉಗಾಂಡಾದ ಸೇನಾ ಮುಖ್ಯಸ್ಥ ಜನರಲ್ ಮುಹೂಜಿ ಕೈನೆರುಗಾಬಾ
Published on: 

ಕಂಪಾಲ: ಟರ್ಕಿ ದೇಶದ ಮುಂದೆ ಉಗಾಂಡಾದ ಸೇನಾ ಮುಖ್ಯಸ್ಥ ಜನರಲ್ ಮುಹೂಜಿ ಕೈನೆರುಗಾಬಾ ( Muhoozi Kainerugaba ) ಇಟ್ಟಿರುವ ವಿಚಿತ್ರ ಬೇಡಿಕೆಯೊಂದು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸೊಮಾಲಿಯಾದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಲು ಉಗಾಂಡಾ ನೀಡುತ್ತಿರುವ ಸೇನಾ ಕೊಡುಗೆಗೆ ಪ್ರತಿಯಾಗಿ ಟರ್ಕಿಯು 1 ಬಿಲಿಯನ್ ಡಾಲರ್ ಹಣ ನೀಡಬೇಕು ಎಂಬುದು ಸೇನಾ ಮುಖ್ಯಸ್ಥನ ಮೊದಲ ಬೇಡಿಕೆಯಾಗಿದೆ. ಇದರ ಜತೆಗೆ, ಟರ್ಕಿ ದೇಶದ ಅತ್ಯಂತ ಸುಂದರ ಯುವತಿಯನ್ನು ತಮಗೆ ಒಪ್ಪಿಸಬೇಕು ಮತ್ತು ತಾವು ಆಕೆಯನ್ನು ವಿವಾಹವಾಗುವುದಾಗಿ ಘೋಷಿಸುವ ಮೂಲಕ ಮುಹೂಜಿ ಕೈನೆರುಗಾಬಾ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಉಗಾಂಡಾ ಅಧ್ಯಕ್ಷ ಯೋವೇರಿ ಮುಸೆವೇನಿ ಅವರ ಪುತ್ರನೂ ಆಗಿರುವ ಮುಹೂಜಿ, ಸೊಮಾಲಿಯಾದ ಮೂಲಸೌಕರ್ಯ ಒಪ್ಪಂದಗಳು ಹಾಗೂ ರಾಜಧಾನಿ ಮೊಗಾದಿಶುವಿನ ಬಂದರು ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಂದ ಟರ್ಕಿ ಭಾರಿ ಲಾಭ ಗಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದ್ದರಿಂದ, ಭದ್ರತಾ ಲಾಭಾಂಶದ ರೂಪದಲ್ಲಿ ಟರ್ಕಿ ತಮಗೆ 1 ಬಿಲಿಯನ್ ಡಾಲರ್ ಪಾವತಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

Also Read
ಪೋರ್ನ್​​ ವೆಬ್‌ಸೈಟ್​ನಲ್ಲಿ ತನ್ನ ವಿಡಿಯೋಗಳನ್ನು ನೋಡಿ ಯುವತಿ ಶಾಕ್​: ಕಳಚಿತು ಲಿವಿಂಗ್​ ಸಂಗಾತಿಯ ಕರಾಳ ಮುಖ! Bengaluru Man
Muhoozi Kainerugaba

ಒಂದು ವೇಳೆ ಮುಂದಿನ 30 ದಿನಗಳಲ್ಲಿ ಟರ್ಕಿ ಈ ಎರಡೂ ಬೇಡಿಕೆಗಳನ್ನು ಈಡೇರಿಸದಿದ್ದರೆ, ಉಗಾಂಡಾ ರಾಜಧಾನಿ ಕಂಪಾಲಾದಲ್ಲಿರುವ ಟರ್ಕಿ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿ ಮುಹೂಜಿ ನೇರ ಬೆದರಿಕೆ ಹಾಕಿದ್ದಾರೆ.

ಅಷ್ಟೇ ಅಲ್ಲದೆ, ಟರ್ಕಿ ತನ್ನ ಬೇಡಿಕೆಗಳಿಗೆ ಮಣಿಯದಿದ್ದರೆ ಉಗಾಂಡಾದ ವಾಯುಪ್ರದೇಶದಲ್ಲಿ 'ಟರ್ಕಿಶ್ ಏರ್‌ಲೈನ್ಸ್' ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಮತ್ತು ಟರ್ಕಿಯೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲಾಗುವುದು ಎಂದು ಮುಹೂಜಿ ಎಚ್ಚರಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಉಗಾಂಡಾದ ನಾಗರಿಕರು ಟರ್ಕಿಗೆ ಯಾವುದೇ ರೀತಿಯ ಪ್ರಯಾಣ ಬೆಳೆಸದಂತೆ ಅವರು ಸಲಹೆ ನೀಡಿದ್ದಾರೆ. ಸೇನಾ ಮುಖ್ಯಸ್ಥರ ಈ ಉದ್ಧಟತನದ ಹೇಳಿಕೆಗಳಿಂದ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡುವ ಆತಂಕ ಎದುರಾಗಿದೆ.

ಜನರಲ್ ಮುಹೂಜಿ ಕೈನೆರುಗಾಬಾ ಇಂತಹ ವಿಚಿತ್ರ, ಅಸಂಬದ್ಧ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2022ರಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ವಿವಾಹವಾಗಲು 100 ಹಸುಗಳನ್ನು ನೀಡುವುದಾಗಿ ಹೇಳಿ ಅವರು ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗರಕ್ಕೀಡಾಗಿದ್ದರು. ಆ ಸಂದರ್ಭದಲ್ಲಿ ತಮ್ಮ ಪುತ್ರನ ಬೇಜವಾಬ್ದಾರಿ ಹೇಳಿಕೆಗಾಗಿ ಉಗಾಂಡಾ ಅಧ್ಯಕ್ಷ ಯೋವೇರಿ ಮುಸೆವೇನಿ ಅವರು ಇಟಲಿ ಸರ್ಕಾರದ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

Also Read
ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಾಗಲೇ ಕಂಪಿಸಿದ ಭೂಮಿ: ನೋಡುಗರ ಎದೆ ಝಲ್ ಎನಿಸುವ ಭೀಕರ ದೃಶ್ಯ ವೈರಲ್..! Earthquake
Muhoozi Kainerugaba

ಅಧ್ಯಕ್ಷ ಮುಸೆವೇನಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಮುಹೂಜಿ, 2022ರಲ್ಲಿ ನೆರೆಯ ರಾಷ್ಟ್ರ ಕೀನ್ಯಾದ ಮೇಲೆ ಆಕ್ರಮಣ ಮಾಡುವುದಾಗಿಯೂ ಬಹಿರಂಗ ಬೆದರಿಕೆ ಹಾಕಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಟರ್ಕಿಯ ವಿರುದ್ಧ ಹಣ ಮತ್ತು ಹೆಣ್ಣಿನ ಬೇಡಿಕೆಯಿಟ್ಟು ಗಡುವು ನೀಡಿರುವುದು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಆದರೆ, ಉಗಾಂಡಾ ಸೇನಾ ಮುಖ್ಯಸ್ಥರ ಈ ವಿವಾದಾತ್ಮಕ ಹೇಳಿಕೆಗಳಿಗೆ ಟರ್ಕಿ ಸರ್ಕಾರ ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ, (ಏಜೆನ್ಸೀಸ್​).