ಕಣ್ಣಿಗೆ ಕಣ್ಣಲ್ಲ, ಕಣ್ಣಿಗೆ ತಲೆ ಉರುಳಿಸುತ್ತೇವೆ! ಅಮೆರಿಕವನ್ನು ಸಮುದ್ರದಲ್ಲಿ ಮುಳುಗಿಸುತ್ತೇವೆ: ಟ್ರಂಪ್‌ಗೆ ಇರಾನ್‌ನಿಂದ ಭೀಕರ ಎಚ್ಚರಿಕೆ
ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ದಾಳಿಗೆ ಐದು ದಿನಗಳ ವಿರಾಮ ಘೋಷಿಸಿದ ಬೆನ್ನಲ್ಲೇ, ಇರಾನ್‌ನಿಂದ ಅತ್ಯಂತ ಉಗ್ರವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಮಿಲಿಟರಿ ಸಲಹೆಗಾರ ಮೊಹ್ಸೆನ್ ರೆಜೈ (Mohsen Rezaei), ಅಮೆರಿಕ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇರುವ ಸಮಯ ಮುಗಿಯುತ್ತಿದೆ ಎಂದು ಗುಡುಗಿದ್ದಾರೆ.
ಈ ಬಗ್ಗೆ ಟೆಹ್ರಾನ್‌ನ ಸರ್ಕಾರಿ ಮಾಧ್ಯಮ IRNA ಜೊತೆ ಮಾತನಾಡಿದ ರೆಜೈ, ಅಮೆರಿಕಕ್ಕೆ ನೇರ ಯುದ್ಧದ ಎಚ್ಚರಿಕೆ ನೀಡಿದ್ದಾರೆ.
ಕಣ್ಣಿಗೆ ತಲೆ: ಇರಾನ್‌ನ ನೂತನ ಯುದ್ಧ ನೀತಿ
ಇಷ್ಟು ದಿನ ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ನೀತಿಯನ್ನು ಅನುಸರಿಸುತ್ತಿದ್ದ ಇರಾನ್, ಈಗ ತನ್ನ ವರಸೆಯನ್ನು ಬದಲಿಸಿದೆ. ನೀವು ನಮ್ಮ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ, ನಾವು ಕೇವಲ ಪ್ರತಿದಾಳಿ ಮಾಡುವುದಿಲ್ಲ. ಬದಲಾಗಿ ನಿಮ್ಮ ತಲೆಯನ್ನೇ ಉರುಳಿಸುತ್ತೇವೆ. ನಿಮ್ಮನ್ನು ಪಾರ್ಶ್ವವಾಯು ಪೀಡಿತರನ್ನಾಗಿ ಮಾಡುತ್ತೇವೆ ಮತ್ತು ಪರ್ಷಿಯನ್ ಕೊಲ್ಲಿಯಲ್ಲೇ ಅಮೆರಿಕದ ಅಹಂಕಾರವನ್ನು ಮುಳುಗಿಸುತ್ತೇವೆ ಎಂದು ರೆಜೈ ಎಚ್ಚರಿಸಿದ್ದಾರೆ.
ಇರಾನ್ ವಿಧಿಸಿರುವ ಪ್ರಮುಖ ಷರತ್ತುಗಳು
ಪೂರ್ಣ ಪರಿಹಾರ: ಯುದ್ಧದಿಂದ ಇರಾನ್‌ಗೆ ಉಂಟಾದ ಎಲ್ಲಾ ನಷ್ಟಗಳಿಗೆ ಅಮೆರಿಕ ಹಣಕಾಸಿನ ಪರಿಹಾರ ನೀಡಬೇಕು.
ನಿರ್ಬಂಧಗಳ ತೆರವು: ಇರಾನ್ ಮೇಲಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು.
ಹಸ್ತಕ್ಷೇಪಕ್ಕೆ ತಡೆ: ಇರಾನ್‌ನ ಆಂತರಿಕ ವಿಷಯಗಳಲ್ಲಿ ಅಮೆರಿಕ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಲಿಖಿತ ಗ್ಯಾರಂಟಿ ನೀಡಬೇಕು.
ಈ ಷರತ್ತುಗಳು ಈಡೇರುವವರೆಗೂ ಯುದ್ಧ ಮುಂದುವರಿಯಲಿದೆ ಎಂದು ರೆಜೈ ಸ್ಪಷ್ಟಪಡಿಸಿದ್ದಾರೆ.
ಮಧ್ಯಸ್ಥಿಕೆಗೆ ಮುಂದಾದ ಪಾಕ್: ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ?
ಒಂದೆಡೆ ಟ್ರಂಪ್ ಮತ್ತು ಇರಾನ್ ನಡುವೆ ವಾಗ್ಯುದ್ಧ ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಈ ಬಿಕ್ಕಟ್ಟನ್ನು ಶಮನಗೊಳಿಸಲು ಸಂಧಾನಕಾರನಾಗಿ ಹೊರಹೊಮ್ಮಿದೆ. ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗೆ ಆತಿಥ್ಯ ವಹಿಸಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.
ಟ್ರಂಪ್ ವಾದ: ಇರಾನ್ ನಾಯಕರ ಜೊತೆ ಸಕಾರಾತ್ಮಕ ಮಾತುಕತೆ ನಡೆದಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ.
ಇರಾನ್ ವಾದ: ಟ್ರಂಪ್ ಹೇಳುತ್ತಿರುವುದು ಕೇವಲ ಫೇಕ್ ನ್ಯೂಸ್ ಮತ್ತು ಜಾಗತಿಕ ಮಾರುಕಟ್ಟೆಯನ್ನು ಮ್ಯಾನಿಪುಲೇಟ್ ಮಾಡುವ ತಂತ್ರ ಎಂದು ಇರಾನ್ ಕಿಡಿಕಾರಿದೆ.
ಟ್ರಂಪ್‌ರ ಸೈಕಲಾಜಿಕಲ್ ವಾರ್ ವಿರುದ್ಧ ಇರಾನ್ ಪಟ್ಟು
ಅಧ್ಯಕ್ಷ ಟ್ರಂಪ್ ಅವರು ಮಾನಸಿಕ ಯುದ್ಧದ ಮೂಲಕ ಇರಾನ್ ಅನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರೆಜೈ ಆರೋಪಿಸಿದ್ದಾರೆ. ಟ್ರಂಪ್ ಅವರ ಈ ವ್ಯತಿರಿಕ್ತ ನಡವಳಿಕೆಯಿಂದ ಇರಾನ್ ವಿಚಲಿತವಾಗುವುದಿಲ್ಲ ಮತ್ತು ವಿಜಯ ಸಿಗುವವರೆಗೂ ಪ್ರತಿರೋಧ ಮುಂದುವರಿಯಲಿದೆ ಎಂದು ರೆಜೈ ಸಾರಿದ್ದಾರೆ.
ಜಾಗತಿಕ ಪರಿಣಾಮ
ಇರಾನ್‌ನ ಈ ಉಗ್ರ ಎಚ್ಚರಿಕೆಯು ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಮತ್ತಷ್ಟು ಭೀಕರ ರೂಪ ತಾಳುವ ಮುನ್ಸೂಚನೆ ನೀಡಿದೆ. ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಅಮೆರಿಕದ ನೌಕಾಪಡೆಗಳಿಗೆ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಭಯ ಎದುರಾಗಿದೆ,(ಏಜೆನ್ಸೀಸ್).