ಆರ್ಥಿಕ ಯುದ್ಧ ನಿಲ್ಲದಿದ್ದರೆ ಹೊರ್ಮುಜ್ ಜಲಸಂಧಿಯನ್ನು ಒಂದು ಹನಿ ತೈಲ ದಾಟಲ್ಲ ಎಂದಿರುವ ಇರಾನ್
- ಇರಾನ್ ಮೇಲೆ ಆರ್ಥಿಕ ಯುದ್ಧ ಸಾರಿದ ಅಮೆರಿಕ
- ಇರಾನ್ಗೆ ಆರ್ಥಿಕ ಸಹಾಯ ಮಾಡುವ ದೇಶಗಳ ಮೇಲೆ ಯುದ್ಧಕ್ಕೆ ಮುಂದಾದ ದೊಡ್ಡಣ್ಣ
- ಆರ್ಥಿಕ ಯುದ್ಧ ನಿಲ್ಲದಿದ್ದರೆ ಹೊರ್ಮುಜ್ ಜಲಸಂಧಿಯನ್ನು ಒಂದು ಹನಿ ತೈಲ ದಾಟಲ್ಲ ಎಂದಿರುವ ಇರಾನ್
- ಇರಾನ್ ಹೇಳಿಕೆಯಿಂದ ಜಾಗತಿಕ ತೈಲ ಮಾರುಕಟ್ಟೆ ತಲ್ಲಣ
ಟೆಹ್ರಾನ್: ಕಳೆದ ಆರೇಳು ತಿಂಗಳುಗಳಿಂದ ನಡೆಯುತ್ತಿರುವ ಮಧ್ಯಪ್ರಾಚ್ಯ ಮಹಾಯುದ್ಧ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಅಮೆರಿಕ, ಇರಾನ್ ಮೇಲೆ ಆರ್ಥಿಕ ಸಂಘರ್ಷವನ್ನು ಆರಂಭಿಸುತ್ತೇವೆ, ಅವರ ದೇಶಕ್ಕೆ ಬೇರೆ ದೇಶಗಳ ಹಣ ಹೂಡಿಕೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ ಹಿನ್ನಲೆ ಈಗ ಇರಾನ್ ಕೌಂಟ್ ಕೊಟ್ಟಿದೆ.
ನಮ್ಮ ಮೇಲೆ ಅಮೆರಿಕದ ಆರ್ಥಿಕ ಯುದ್ಧ ಹೀಗೆ ಮುಂದುವರಿದರೆ ಹೊರ್ಮುಜ್ ಜಲಸಂಧಿ (Iran Close Strait of Hormuz) ಯನ್ನು ಸಂಪೂರ್ಣವಾಗಿ ಬಂದ್ ಮಾಡುತ್ತೇವೆ, ಈ ಜಲಸಂಧಿ ಮೂಲಕ ಒಂದೇ ಒಂದು ಹನಿ ತೈಲ ಸರಬರಾಜಾದಂತೆ ನೋಡಿಕೊಳ್ಳುತ್ತೇವೆಂದು ಜಗತ್ತಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಅಮೆರಿಕ ಆರ್ಥಿಕ ದಾಳಿ; ಇರಾನ್ ಆಕ್ರೋಶ
ಇರಾನ್ ಮತ್ತು ಅದರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೊಸ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಲು ಅಮೆರಿಕ ಸಿದ್ಧತೆ ನಡೆಸಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಈ ಮುಂಬರುವ ಕ್ರಮಗಳನ್ನು ವಿರೋಧಿಯ ವಿರುದ್ಧ ಇದುವರೆಗೆ ನಡೆಸಲಾದ ಅತಿದೊಡ್ಡ ಆರ್ಥಿಕ ದಾಳಿ ಎಂದು ಬಣ್ಣಿಸಿದ್ದಾರೆ. ಇರಾನ್‌ನೊಂದಿಗೆ ವ್ಯಾಪಾರ ಸಂಬಂಧ ಮುಂದುವರಿಸುವ ದೇಶಗಳೇ ಅಮೆರಿಕದ ಟಾರ್ಗೆಟ್ ಎಂದು ಅವರು ಎಚ್ಚರಿಸಿದ್ದಾರೆ.
ಅಮೆರಿಕದ ಈ ತಂತ್ರಕ್ಕೆ ತಿರುಗೇಟು ನೀಡಿರುವ ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜೈ, ಅಮೆರಿಕದ ಈ ಆರ್ಥಿಕ ಯುದ್ಧದಲ್ಲಿ ಯಾವ ದೇಶವಾದರೂ ಭಾಗಿಯಾದರೆ ಅಥವಾ ಬೆಂಬಲಿಸಿದರೆ, ಅದನ್ನು ನೇರವಾಗಿ ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂದು ಎಕ್ಸ್ (X) ಪೋಸ್ಟ್ ಮೂಲಕ ಎಚ್ಚರಿಸಿದ್ದಾರೆ.
ಚೀನಾ ಮೇಲೆ ಅಮೆರಿಕ ಕಣ್ಣು?
ಅಮೆರಿಕದ ಈ ಆರ್ಥಿಕ ನಿರ್ಬಂಧಗಳ ಹಿಂದೆ ಚೀನಾವನ್ನು ಮಣಿಸುವ ತಂತ್ರವೂ ಇದೆ ಎನ್ನಲಾಗಿದೆ. ತನ್ನ ತೈಲ ಆಮದುಗಳಲ್ಲಿ ಅರ್ಧದಷ್ಟು ಭಾಗವನ್ನು ಗಲ್ಫ್ ಪ್ರದೇಶದಿಂದಲೇ ಪಡೆಯುವ ಚೀನಾ, ಅಮೆರಿಕದೊಂದಿಗೆ ಸಹಕರಿಸಬೇಕೆಂದು ಯುಎಸ್ ಒತ್ತಡ ಹೇರುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬೀಜಿಂಗ್, ನಿರ್ಬಂಧಗಳಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ, ರಾಜತಾಂತ್ರಿಕ ಮಾತುಕತೆ ನಡೆಯಲಿ ಎಂದು ತಿರುಗೇಟು ನೀಡಿದೆ.
ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮವೇನು?
ಒಂದು ವೇಳೆ ಅಮೆರಿಕ ಆರ್ಥಿಕ ಸಂಘರ್ಷ ಮುಂದುವರಿಸಿದರೆ, ಇರಾನ್ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುತ್ತದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಕಂಡು, ಸಹಜವಾಗಿ ಪೆಟ್ರೋಲ್-ಡೀಸೆಲ್ ದರ ಕೂಡ ಏರಿಕೆ ಕಾಣುತ್ತದೆ.
ಅಷ್ಟೇ ಅಲ್ಲದೇ, ಈ ಮಧ್ಯಪ್ರಾಚ್ಯ ಸಂಘರ್ಷದಿಂದ, ಬಹುಪಾಲು ಅರಬ್ ದೇಶಗಳು ಆರ್ಥಿಕ ತೊಂದರೆ ಎದುರಿಸುತ್ತಿರುವ ಹಿನ್ನಲೆ ದೇಶ ದಿವಾಳಿಯಾಗಿ ಅರಾಜಕತೆ ನಿರ್ಮಾಣವಾಗುವ ಸಾಧ್ಯತೆಯಿದೆ.
ಕಳೆದ 20 ವರ್ಷಗಳಿಂದ ಇರಾನ್ ಈ ರೀತಿಯ ಸತತ ನಿರ್ಬಂಧಗಳನ್ನು ಎದುರಿಸುತ್ತಲೇ ಬಂದಿದೆ. ಆದರೆ ಈ ಬಾರಿ ಅಮೆರಿಕ ಆರ್ಥಿಕ ನಿಬಂಧನೆ ಮೂಲಕ ದೇಶವನ್ನೇ ಬುಡಮೇಲು ಮಾಡಲು ಹೊರಟಿದ್ದು, ಇರಾನ್ ಕೂಡ ಈ ಜಗತ್ತೇ ಬೆಚ್ಚಿಬೀಳುವ ತಿರುಗೇಟನ್ನು ಕೊಡುವುದಾಗಿ ಬೆದರಿಕೆ ಹಾಕಿದೆ. ಆದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ತೈಲ ಪೂರೈಕೆ ಹಾಗೂ ಜಾಗತಿಕ ರಾಜಕಾರಣದಲ್ಲಿ ಭಾರೀ ಸಂಚನಲದ ಸಾಧ್ಯತೆಯಿದೆ ಎನ್ನುವುದು ಅಂತಾರಾಷ್ಟ್ರೀಯ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ
, (ಏಜನ್ಸೀಸ್).