Nobel Prize in Literature: ಪ್ರಸಕ್ತ ಸಾಲಿನ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಕೆನಡಾದ ಲೇಖಕಿ ಅನ್ನೆ ಕಾರ್ಸನ್‌ಗೆ ನೀಡಿ ಗೌರವಿಸಲಾಗಿದೆ.
ಸಾಹಿತ್ಯದ ಶಾಸ್ತ್ರೀಯ ಶೈಲಿಗೆ ನಿಷ್ಠರಾಗಿ, ಸಮಕಾಲೀನ ಸಾಹಿತ್ಯಕ್ಕೆ ಹೊಸ ಆಯಾಮಗಳನ್ನು ನೀಡಿದ ಅವರ ದಿಟ್ಟ ಮತ್ತು ವೈವಿಧ್ಯಮಯ ಬರವಣಿಗೆಗೆ ಈ ಪ್ರಶಸ್ತಿ ಸಂದಿದೆ. ಕೆನಡಾದ ಕವಯತ್ರಿ ಮತ್ತು ಅನುವಾದಕಿ ಅನ್ನಿ ಪ್ರಾಚೀನ ಗ್ರೀಕ್ ಪುರಾಣಗಳನ್ನು ಸಾಂಪ್ರದಾಯಿಕ ಸಾಹಿತ್ಯದ ಗಡಿಗಳನ್ನು ಮೀರಿದ ಆಧುನಿಕ ಬರವಣಿಗೆಯ ಶೈಲಿಗಳೊಂದಿಗೆ ಸಂಯೋಜಿಸುವಲ್ಲಿ ಪ್ರವರ್ತಕರಾಗಿದ್ದಾರೆ. ಅವರ ಬರಹಗಳಲ್ಲಿ ಮೂಡಿದ ಕವನ, ಪ್ರಬಂಧಗಳು, ತತ್ವಶಾಸ್ತ್ರ ಮತ್ತು ಸಾಹಿತ್ಯ ವಿಮರ್ಶೆಗಳು ಓದುಗರ ಗಮನ ಸೆಳೆದಿವೆ.
2019ರ 'ನಾರ್ಮಾ ಜೀನ್ ಬೇಕರ್ ಆಫ್ ಟ್ರಾಯ್ ಎಂಬ ನಾಟಕೀಯ ಕೃತಿಯಲ್ಲಿ ಯುರಿಪಿಡಿಸ್ನ 'ಹೆಲನ್' ಮತ್ತು ನಟಿ ಮರ್ಲಿನ್ ಮನ್ರೋ ಅವರ ಜೀವನದ ಕಥೆಗಳನ್ನು ಸೇರಿಸಿದ್ದಾರೆ. ಅಲೆಕ್ಸಾಂಡರ್ ಸೋಲ್ಝೆನಿಟ್ಸಿನ್, ಆಲಿಸ್ ಮುನ್ರೊ ಮತ್ತು ಅರ್ನೆಸ್ಟ್ ಹೆಮಿಂಗ್ವೇ ಅವರಂತಹ ಜಾಗತಿಕ ಸಾಹಿತ್ಯ ದೈತ್ಯರ ಸಾಲಿನಲ್ಲಿ ನಿಲ್ಲುವ ಇವರು ಸಾಹಿತ್ಯ ರಂಗದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1901ರಿಂದ, ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಶಯಗಳಿಗೆ ಅನುಗುಣವಾಗಿ ಮಾನವಕುಲಕ್ಕೆ ಮಹತ್ತರವಾದ ಪ್ರಗತಿ, ಕೊಡುಗೆಗಳನ್ನು ನೀಡಿದ ಪುರುಷರು, ಮಹಿಳೆಯರು ಮತ್ತು ಸಂಸ್ಥೆಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಂತೆಯೇ, 2026ರ ಪ್ರಶಸ್ತಿ ಪ್ರಕಟಣೆ ಕೂಡ ನಡೆಯುತ್ತಿದೆ. ಪ್ರತಿಯೊಬ್ಬ ನೊಬೆಲ್ ಪ್ರಶಸ್ತಿ ವಿಜೇತರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಅಂದರೆ ಸುಮಾರು 1.2 ಮಿಲಿಯನ್ ಡಾಲರ್) ದೊರೆಯಲಿದೆ. ಅದೇ ಭಾರತೀಯ ಕರೆನ್ಸಿಯಲ್ಲಿ 11.5 ಕೋಟಿ ರೂ. ಸಿಗಲಿದೆ,(ಏಜೆನ್ಸೀಸ್).