Nobel Prize in Physics: ವಿಶ್ವದ ಅತ್ಯಂತ ನಿಗೂಢ ಕಣಗಳಲ್ಲಿ ಒಂದಾದ 'ಅಧಿಕ-ಶಕ್ತಿಯ ನ್ಯೂಟ್ರಿನೊ'ಗಳನ್ನು ಪತ್ತೆಹಚ್ಚಲು ವೀಕ್ಷಣಾಲಯವನ್ನು ಸ್ಥಾಪಿಸಿದ ಹಾಗೂ ಅವುಗಳ ಮೂಲದ ಕುರಿತು ಅಧ್ಯಯನಗಳನ್ನು ನಡೆಸಿದ ಸಾಧನೆಗಾಗಿ 2026ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಫ್ರಾನ್ಸಿಸ್ ಹಾಲ್ಜೆನ್ ಅವರಿಗೆ ನೀಡಿ ಗೌರವಿಸಲಾಗಿದೆ.
ನ್ಯೂಟ್ರಿನೊಗಳು ಯಾವುದೇ ಕುರುಹು ಇಲ್ಲದೆ ಭೂಮಿ ಮತ್ತು ಮಾನವ ದೇಹದ ಮೂಲಕ ಹಾದುಹೋಗಬಲ್ಲ ಸಾಮರ್ಥ್ಯವನ್ನು ಹೊಂದಿರುವುದರಿಂದ, ಇವುಗಳನ್ನು 'ಭೂತದ ಕಣಗಳು' (Ghost Particles) ಎಂದು ಕರೆಯಲಾಗುತ್ತದೆ. ದಕ್ಷಿಣ ಧ್ರುವದಲ್ಲಿರುವ ಅಂಟಾರ್ಕ್ಟಿಕ್ ಮಂಜುಗಡ್ಡೆಯ ಪದರಗಳನ್ನು ಬಳಸಿಕೊಂಡು ನ್ಯೂಟ್ರಿನೊಗಳನ್ನು ಪತ್ತೆಹಚ್ಚಬಹುದು ಎಂಬುದನ್ನು ಮೊದಲು ಅರಿತುಕೊಂಡವರೇ ಫ್ರಾನ್ಸಿಸ್ ಹಾಲ್ಜೆನ್. ಈ ಸಂಶೋಧನೆಯನ್ನು ಅಂಟಾರ್ಕ್ಟಿಕಾದಲ್ಲಿ ಸ್ಥಾಪಿಸಲಾದ 'ಐಸ್‌ಕ್ಯೂಬ್' ವೀಕ್ಷಣಾಲಯದ ಮೂಲಕ ನಡೆಸಿದ ಭೌತವಿಜ್ಞಾನಿ ಫ್ರಾನ್ಸಿಸ್. ನಕ್ಷತ್ರಗಳ ಸ್ಫೋಟಗಳು ಮತ್ತು ದೂರದ ಗ್ಯಾಲಕ್ಸಿಗಳ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟ ಅವರ ಕಾರ್ಯವನ್ನು ನೊಬೆಲ್ ಸಮಿತಿಯು ಶ್ಲಾಘಿಸಿದೆ.
ಜಗತ್ತಿನ ಅತ್ಯುನ್ನತ ಪ್ರಶಸ್ತಿ ಫ್ರಾನ್ಸಿಸ್ ಪಾಲಾಗಿದ್ದು, ಇದರ ಬಹುಮಾನದ ಮೊತ್ತವು 1.2 ಮಿಲಿಯನ್ ಡಾಲರ್ ಎನ್ನಲಾಗಿದೆ. ಈ ಮೊತ್ತವನ್ನು ವಿಜೇತರಿಗೆ ಹಂಚಿಕೆ ಮಾಡಲಾಗುವುದು. ಇನ್ನು, ಮುಂದಿನ ದಿನಗಳಲ್ಲಿ ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುವುದು. ಈ ವರ್ಷದ ಡಿಸೆಂಬರ್ 10ರಂದು ನಡೆಯುವ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
1901ರಿಂದ, ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಶಯಗಳಿಗೆ ಅನುಗುಣವಾಗಿ ಮಾನವಕುಲಕ್ಕೆ ಮಹತ್ತರವಾದ ಪ್ರಗತಿ, ಕೊಡುಗೆಗಳನ್ನು ನೀಡಿದ ಪುರುಷರು, ಮಹಿಳೆಯರು ಮತ್ತು ಸಂಸ್ಥೆಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಂತೆಯೇ, 2026ರ ಪ್ರಶಸ್ತಿ ಪ್ರಕಟಣೆ ಕೂಡ ನಡೆಯುತ್ತಿದೆ. ಪ್ರತಿಯೊಬ್ಬ ನೊಬೆಲ್ ಪ್ರಶಸ್ತಿ ವಿಜೇತರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಅಂದರೆ ಸುಮಾರು 1.2 ಮಿಲಿಯನ್ ಡಾಲರ್) ದೊರೆಯಲಿದೆ,(ಏಜೆನ್ಸೀಸ್).