

ಚೆನ್ನೈ: ಕಾಲಿವುಡ್ನ ಜನಪ್ರಿಯ ನಟ ಹಾಗೂ ತಮಿಳುನಾಡಿನ ಹಾಲಿ ಸಿಎಂ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ( Jason Sanjay ) ಸದ್ಯ ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾ 'ಸಿಗ್ಮಾ' (Sigma) ಮೂಲಕ ಸಿನಿವಲಯದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಸಂದೀಪ್ ಕಿಶನ್ ನಾಯಕನಾಗಿ ಹಾಗೂ ಪ್ರಿಯಾ ಅಭಿಲ್ಲಾ ನಾಯಕಿಯಾಗಿ ನಟಿಸಿರುವ ಈ ಚಿತ್ರವು ತಮಿಳುನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತೋಷದ ನಡುವೆಯೇ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಜೇಸನ್ ಸಂಜಯ್ ಅವರು ಇದುವರೆಗೆ ಯಾರಿಗೂ ತಿಳಿಯದ ತಮ್ಮ ವೈಯಕ್ತಿಕ ಜೀವನದ ರಹಸ್ಯ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ತಮ್ಮ ಬಾಲ್ಯ ಹಾಗೂ ಯೌವನದ ಕುರಿತು ಮಾತನಾಡಿದ ಸಂಜಯ್, ತಾವು ಪೋಲಿಸರ ಕೈಗೆ ಸಿಕ್ಕಿಬಿದ್ದ ಘಟನೆಯೊಂದನ್ನು ಮೆಲುಕು ಹಾಕಿದರು. ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದ್ದ ಕರೊನಾ ಲಾಕ್‌ಡೌನ್ ಸಮಯದಲ್ಲಿ ಮನೆಯೊಳಗೆಯೇ ಕೂತು ಕೂತು ಬೇಸತ್ತಿದ್ದ ಸಂಜಯ್, ಹೇಗಾದರೂ ಮಾಡಿ ಹೊರಗೆ ಹೋಗಬೇಕೆಂದು ನಿರ್ಧರಿಸಿದ್ದರು. ಇದಕ್ಕಾಗಿ ತಮ್ಮ ಕುಟುಂಬದ ವೈದ್ಯರೊಬ್ಬರ ಪಾಸ್ ಅನ್ನು ರಹಸ್ಯವಾಗಿ ತೆಗೆದುಕೊಂಡು ಕಾರಿನಲ್ಲಿ ಹೊರಟಾಗ ಮಾರ್ಗಮಧ್ಯೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಲಾಠಿಚಾರ್ಜ್ ಹಾಗೂ ವಿಚಾರಣೆಯನ್ನು ಎದುರಿಸಬೇಕಾಯಿತು ಎಂದು ಸಂಜಯ್ ತಿಳಿಸಿದ್ದಾರೆ.
ಪೊಲೀಸರು ನನ್ನನ್ನು ಹಿಡಿದು ಮನೆಯವರಿಗೆ ವಿಚಾರ ಮುಟ್ಟಿಸಿದರು. ಖಂಡಿತ ಬೈಗುಳಗಳನ್ನು ಕೇಳಬೇಕಾಗುತ್ತದೆ ಅಂದುಕೊಂಡೆ. ಆದರೆ, ಅಲ್ಲಿ ನಡೆದಿದ್ದೇ ಬೇರೆ. ನನ್ನ ಪೋಷಕರು ಕೋಪಗೊಳ್ಳುವ ಬದಲು ನನ್ನನ್ನು ನೋಡಿ ಜೋರಾಗಿ ನಕ್ಕರು ಎಂದು ಜೇಸನ್ ಸಂಜಯ್ ನಗುನಗುತ್ತಾ ಹಂಚಿಕೊಂಡಿದ್ದಾರೆ.
ಕೇವಲ ಪೊಲೀಸರಿಗೆ ಸಿಕ್ಕಿಬಿದ್ದ ಕತೆಯಷ್ಟೇ ಅಲ್ಲದೆ, ತಮ್ಮ ಲಂಡನ್ ವಿದ್ಯಾಭ್ಯಾಸದ ಸಮಯದಲ್ಲಿ ಅನುಭವಿಸಿದ ಪ್ರೇಮವೈಫಲ್ಯದ ಕುರಿತು ಮಾತನಾಡುವಾಗ ಸಂಜಯ್ ಭಾವುಕರಾದರು. ಲಂಡನ್‌ನಲ್ಲಿ ಓದುತ್ತಿದ್ದಾಗ ಯುವತಿಯೊಬ್ಬಳೊಂದಿಗೆ ಒಂದೂವರೆ ವರ್ಷಗಳ ಕಾಲ ಗಾಢವಾದ ಪ್ರೇಮದಲ್ಲಿದ್ದೆ ಎಂದು ಜೇಸನ್ ಸಂಜಯ್ ಬಹಿರಂಗಪಡಿಸಿದ್ದಾರೆ.
ಕಾಲಕ್ರಮೇಣ ನಮ್ಮಿಬ್ಬರ ನಡುವಿನ ಅಭಿಪ್ರಾಯ ವ್ಯತ್ಯಾಸಗಳಿಂದ ಪರಸ್ಪರ ಮಾತುಕತೆಯ ಮೂಲಕವೇ ಪ್ರೇಮಬಂಧನದಿಂದ ಹೊರಬಂದು ದೂರಾಗಲು ನಿರ್ಧರಿಸಿದೆವು. ಬ್ರೇಕ್‌ಅಪ್ ನಂತರದ ದಿನಗಳಲ್ಲಿ ತೀವ್ರ ಖಾಲಿ ಭಾವ ಕಾಡುತ್ತಿತ್ತು. ಆ ಕಷ್ಟದ ಸಮಯದಲ್ಲಿ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರ ವಿರಹಗೀತೆಗಳೇ ನನಗೆ ಏಕಾಂಗಿತನದಿಂದ ಹೊರಬರಲು ಆಸರೆಯಾಗಿದ್ದವು ಎಂದು ಸಂಜಯ್ ನೆನಪಿಸಿಕೊಂಡಿದ್ದಾರೆ.
ತಮ್ಮಲ್ಲಿನ ಸ್ವಲ್ಪ ಮಟ್ಟಿನ ಅಹಂಕಾರದಿಂದಾಗಿ ಆ ಯುವತಿಯೊಂದಿಗೆ ಮತ್ತೊಮ್ಮೆ ಮಾತನಾಡಲು ಅಥವಾ ಪ್ರೇಮ ಪ್ರಸಂಗವನ್ನು ಮುಂದುವರಿಸಲು ನಾನು ಹೋಗಲಿಲ್ಲ ಎಂದು ಸಂಜಯ್ ಸ್ಪಷ್ಟಪಡಿಸಿದ್ದಾರೆ. ಅಂದು ತೆಗೆದುಕೊಂಡ ಆ ಕಠಿಣ ನಿರ್ಧಾರ ಇಂದಿಗೂ ಸರಿಯಾಗಿದೆ ಎಂದು ಜೇಸನ್ ಸಂಜಯ್ ಹೇಳಿಕೊಂಡಿದ್ದಾರೆ. ವಿಜಯ್ ಪುತ್ರನ ಈ ಮುಕ್ತ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ, (ಏಜೆನ್ಸೀಸ್).