ಗಲ್ಫ್: ಸಾಮಾನ್ಯವಾಗಿ ವಿಮಾನ ನಿಲ್ದಾಣ ಎಂದಾಗ ಅಲ್ಲಿನ ವಿಮಾನಗಳು, ಏರ್ಪೋರ್ಟ್ ಒಳಾಂಗಣದ ವಿನ್ಯಾಸ ಸೇರಿದಂತೆ ಇನ್ನಿತರ ಆಕರ್ಷಕ ಅಥವಾ ನಮ್ಮ ಗಮನ ಸೆಳೆಯುವ ವಿಷಯಗಳನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತೇವೆ. ಇದನ್ನು ಅನೇಕರು ತಮ್ಮ ಗ್ಯಾಲರಿ, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್ ಸ್ಟೇಟಸ್, ಸ್ಟೋರಿಗಳಲ್ಲಿ ಹಂಚಿಕೊಳ್ಳುತ್ತಾರೆ. ಆದರೆ, ಕುವೈತ್ನ ಏರ್ಪೋರ್ಟ್, ಭದ್ರತೆ ಮತ್ತು ಪ್ರಯಾಣಿಕರ ಗೌಪ್ಯತೆಯನ್ನು ಕಾಪಾಡುphotographyವ ಉದ್ದೇಶದಿಂದ ಇದೀಗ ತನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಸಂಪೂರ್ಣ ನಿರ್ಬಂಧವನ್ನು ಹೇರಿದೆ.
ಕುವೈತ್ ನಾಗರಿಕ ವಿಮಾನಯಾನ ಪ್ರಾಧಿಕಾರ (Civil Aviation Authority) ಈ ಆದೇಶ ಹೊರಡಿಸಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಈ ನಿಯಮ ಕಟ್ಟುನಿಟ್ಟಿನಲ್ಲಿ ಅನ್ವಯವಾಗಲಿದೆ. ಮೊಬೈಲ್ ಫೋನ್, ಕ್ಯಾಮರಾ ಸೇರಿದಂತೆ ಯಾವುದೇ ತಾಂತ್ರಿಕ ಸಾಧನಗಳನ್ನು ಬಳಸಿ ಫೋಟೋ ತೆಗೆಯುವುದು, ವಿಡಿಯೋ ಚಿತ್ರೀಕರಿಸುವುದು ಹಾಗೂ ಲೈವ್ ಸ್ಟ್ರೀಮಿಂಗ್ ಮಾಡುವುದನ್ನು ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಟರ್ಮಿನಲ್ಗಳು, ವಿಮಾನಗಳ ನಿಲುಗಡೆ ಪ್ರದೇಶಗಳು, ಆಡಳಿತಾತ್ಮಕ ಕಚೇರಿಗಳು ಹಾಗೂ ತಾಂತ್ರಿಕ ಕಟ್ಟಡಗಳಲ್ಲಿಯೂ ಈ ನಿರ್ಬಂಧ ಜಾರಿಯಲ್ಲಿರಲಿದೆ. ಇದಲ್ಲದೆ, ಏರ್ಪೋರ್ಟ್ನ ಆಂತರಿಕ ದಾಖಲೆಗಳು, ಅಧಿಕೃತ ಪತ್ರವ್ಯವಹಾರ, ಭದ್ರತಾ ವ್ಯವಸ್ಥೆಗಳು, ತಪಾಸಣಾ ಕೇಂದ್ರಗಳು, ಸಿಸಿಟಿವಿ ಕ್ಯಾಮರಾಗಳು ಹಾಗೂ ವಿಮಾನಗಳ ಚಲನವಲನ ಮತ್ತು ಕಾರ್ಯಾಚರಣೆಗಳನ್ನು ಚಿತ್ರೀಕರಿಸಿ, ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದನ್ನು ಬ್ಯಾನ್ ಮಾಡಲಾಗಿದೆ.
ವಿಮಾನ ನಿಲ್ದಾಣದ ಭದ್ರತಾ ಮಾಹಿತಿಗಳು ಬಹಿರಂಗವಾಗುವುದನ್ನು ತಡೆಯುವುದು ಹಾಗೂ ಸಿಬ್ಬಂದಿ ಮತ್ತು ಪ್ರಯಾಣಿಕರ ಖಾಸಗಿತನವನ್ನು ರಕ್ಷಿಸುವುದು ಈ ನಿಯಮದ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕುವೈತ್ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ,(ಏಜೆನ್ಸೀಸ್).