ಬ್ರಿಟನ್ ಪ್ರಧಾನಿಯಾಗಿ ಲೇಬರ್ ಪಕ್ಷದ ಆಂಡಿ ಬರ್ನ್‌ಹ್ಯಾಮ್ ಅಧಿಕಾರ ಸ್ವೀಕಾರ! 
ವಿದೇಶ

ಬ್ರಿಟನ್ ಗದ್ದುಗೆಗೆ ಹೊಸ ಬಾಸ್: ಯುಕೆ ನೂತನ ಪ್ರಧಾನಿಯಾಗಿ ಆಂಡಿ ಬರ್ನ್‌ಹ್ಯಾಮ್ ಅಧಿಕಾರ ಸ್ವೀಕಾರ! Andy Burnham UK Prime Minister

ಪ್ರಮುಖ ಮುಖ್ಯಾಂಶಗಳು

  • ಬ್ರಿಟನ್ ಪ್ರಧಾನಿಯಾಗಿ ಲೇಬರ್ ಪಕ್ಷದ ಆಂಡಿ ಬರ್ನ್‌ಹ್ಯಾಮ್ ಅಧಿಕಾರ ಸ್ವೀಕಾರ!
  • ಕೀರ್ ಸ್ಟಾರ್ಮರ್ ರಾಜೀನಾಮೆ ಬೆನ್ನಲ್ಲೇ ಕಿಂಗ್ ಚಾರ್ಲ್ಸ್ ಭೇಟಿಯಾದ ನೂತನ ಪ್ರಧಾನಿ
  • ಹತ್ತು ವರ್ಷಗಳಲ್ಲಿ ಬ್ರಿಟನ್​ಗೆ ಏಳನೇ ಪ್ರಧಾನಿ ಆಯ್ಕೆ
ಲಂಡನ್​: ಬ್ರಿಟನ್ ರಾಜಕಾರಣದಲ್ಲಿ ಮತ್ತೆ ಅಧಿಕಾರ ಸ್ಥಿತ್ಯಂತರವಾಗಿದ್ದು, ಗ್ರೇಟರ್ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಹಾಗೂ ಲೇಬರ್ ಪಕ್ಷದ ಹಿರಿಯ ನಾಯಕ ಆಂಡಿ ಬರ್ನ್‌ಹ್ಯಾಮ್ (Andy Burnham UK Prime Minister) ಸೋಮವಾರ (ಜು.20) ಅಧಿಕೃತವಾಗಿ ಯುನೈಟೆಡ್​​ ಕಿಂಗ್​​ಡಮ್​ನ ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ರಾಜ ಚಾರ್ಲ್ಸ್ III ಅವರನ್ನು ಭೇಟಿಯಾದ ಬರ್ನ್‌ಹ್ಯಾಮ್, ಹೊಸ ಸರ್ಕಾರ ರಚಿಸುವ ರಾಜನ ಆಹ್ವಾನವನ್ನು ಔಪಚಾರಿಕವಾಗಿ ಸ್ವೀಕರಿಸಿದ್ದಾರೆ.
ಬಕಿಂಗ್‌ಹ್ಯಾಮ್ ಅರಮನೆ ಬಿಡುಗಡೆ ಮಾಡಿರುವ ಫೋಟೋಗಳಲ್ಲಿ, ಕಪ್ಪು ಸೂಟ್ ಧರಿಸಿದ ಆಂಡಿ ಬರ್ನ್‌ಹ್ಯಾಮ್, ರಾಜ ಚಾರ್ಲ್ಸ್ III ಪಕ್ಕದಲ್ಲಿ ನಿಂತಿರುವುದು ಕಂಡುಬಂದಿದೆ. ಈ ಐತಿಹಾಸಿಕ ಕ್ಷಣದಲ್ಲಿ ಬರ್ನ್‌ಹ್ಯಾಮ್ ಅವರ ಪತ್ನಿ ಮೇರಿ-ಫ್ರಾನ್ಸ್ ವ್ಯಾನ್ ಹೀಲ್ ಕೂಡ ಹಾಜರಿದ್ದರು.

ಬರ್ನ್‌ಹ್ಯಾಮ್ ನೂತನ ಪ್ರಧಾನಿ!

ರಾಜ ಚಾರ್ಲ್ಸ್ III ಅವರು ಇಂದು ಮಧ್ಯಾಹ್ನ ಗೌರವಾನ್ವಿತ ಆಂಡಿ ಬರ್ನ್‌ಹ್ಯಾಮ್ ಅವರನ್ನು ಭೇಟಿಯಾಗಿ, ಹೊಸ ಆಡಳಿತವನ್ನು ಮುನ್ನಡೆಸುವಂತೆ ವಿನಂತಿಸಿದರು. ಬರ್ನ್‌ಹ್ಯಾಮ್ ಅವರು ರಾಜರ ಪ್ರಸ್ತಾಪವನ್ನು ಒಪ್ಪಿಕೊಂಡು, ಪ್ರಧಾನ ಮಂತ್ರಿ ಹಾಗೂ ಖಜಾನೆಯ ಮೊದಲ ಲಾರ್ಡ್ ಆಗಿ ಹಸ್ತಲಾಘವ ನೀಡುವ ಮೂಲಕ ಜವಾಬ್ದಾರಿ ವಹಿಸಿಕೊಂಡರು ಎಂದು ಅರಮನೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಕೀರ್ ಸ್ಟಾರ್ಮರ್ ರಾಜೀನಾಮೆ; ರಾಜಕೀಯ ಬಿಕ್ಕಟ್ಟಿಗೆ ತೆರೆ
ಕಳೆದ ಕೆಲವು ಸಮಯದಿಂದ ಲೇಬರ್ ಪಕ್ಷದೊಳಗೆ ನಡೆಯುತ್ತಿದ್ದ ಭಿನ್ನಮತ ಹಾಗೂ ರಾಜಕೀಯ ಏರುಪೇರುಗಳಿಗೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ.
ರಾಜಕೀಯ ನೀತಿಗಳ ವಿಚಾರದಲ್ಲಿ ಸ್ವಪಕ್ಷೀಯ ಮಂತ್ರಿಗಳ ವಿಶ್ವಾಸ ಕಳೆದುಕೊಂಡಿದ್ದ ಮಾಜಿ ಪ್ರಧಾನಿ ಕೀರ್ ಸ್ಟಾರ್ಮರ್, ಕಳೆದ ಶುಕ್ರವಾರವಷ್ಟೇ ತಮ್ಮ ಲೇಬರ್ ಪಕ್ಷದ ನಾಯಕತ್ವದಿಂದ ಹಿಂದೆ ಸರಿದಿದ್ದರು. ಇಂದು ಅವರು ರಾಜ ಚಾರ್ಲ್ಸ್ III ಅವರಿಗೆ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಸ್ಟಾರ್ಮರ್ ಅರಮನೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಆಂಡಿ ಬರ್ನ್‌ಹ್ಯಾಮ್ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ.
ಅರಮನೆಯಿಂದ ನೇರವಾಗಿ ಯುಕೆಯ ಪ್ರಧಾನಿ ಅಧಿಕೃತ ನಿವಾಸ '10 ಡೌನಿಂಗ್ ಸ್ಟ್ರೀಟ್'ಗೆ ಆಗಮಿಸಿದ ಬರ್ನ್‌ಹ್ಯಾಮ್, ಅಲ್ಲಿ ನೆರೆದಿದ್ದ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ದೇಶದ ಆರ್ಥಿಕತೆ ಮತ್ತು ಜನಸಾಮಾನ್ಯರ ಹಿತರಕ್ಷಣೆಗೆ ತಮ್ಮ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದ ಅವರು, ಶೀಘ್ರದಲ್ಲೇ ತಮ್ಮ ಹೊಸ ಕ್ಯಾಬಿನೆಟ್ ಮಂತ್ರಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
10 ವರ್ಷಗಳಲ್ಲಿ ಏಳನೇ ನಾಯಕ!
ಬ್ರಿಟನ್ ರಾಜಕೀಯ ಸದ್ಯ ತೀವ್ರ ಅಸ್ಥಿರತೆಯಿಂದ ಬಳಲುತ್ತಿದ್ದು, ಕಳೆದ 10 ವರ್ಷಗಳಲ್ಲಿ 7 ಜನ ಪ್ರಧಾನಿಗಳಾಗಿ ಆಯ್ಕೆ ಆಗಿದ್ದಾರೆ. ಇಂದು ಆಯ್ಕೆಯಾಗಿರುವ ಆಂಡಿ ಬರ್ನ್‌ಹ್ಯಾಮ್ ಈ ದಶಕದ 7ನೇ ಪ್ರಧಾನಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
2017 ರಲ್ಲಿ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಗ್ರೇಟರ್ ಮ್ಯಾಂಚೆಸ್ಟರ್‌ನ ಮೇಯರ್ ಆಗಿ ಹೊರಟುಹೋಗಿದ್ದ ಬರ್ನ್‌ಹ್ಯಾಮ್, ಕೇವಲ ಒಂದು ತಿಂಗಳ ಹಿಂದೆಯಷ್ಟೇ ಉಪಚುನಾವಣೆಯಲ್ಲಿ ಗೆದ್ದು ಮತ್ತೆ ಸಂಸತ್ತಿಗೆ ಪ್ರವೇಶಿಸಿದ್ದರು.
ಮಾಜಿ ಸಂಸದ, ಮಾಜಿ ಕ್ಯಾಬಿನೆಟ್ ಮಂತ್ರಿ ಹಾಗೂ ಯಶಸ್ವಿ ಮೇಯರ್ ಆಗಿ ಜನಪ್ರಿಯತೆ ಗಳಿಸಿರುವ ಆಂಡಿ ಬರ್ನ್‌ಹ್ಯಾಮ್ ಅವರ ಮುಂದಿನ ಹಾದಿ ಅಷ್ಟು ಸುಲಭವಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಆಂತರಿಕ ಕಲಹದಿಂದ ಕಂಗೆಟ್ಟಿರುವ ಲೇಬರ್ ಪಕ್ಷವನ್ನು ಒಗ್ಗೂಡಿಸಿ, ಬ್ರಿಟನ್ ಜನತೆಯ ವಿಶ್ವಾಸ ಗಳಿಸುವುದು ನೂತನ ಪ್ರಧಾನಿಗೆ ಇರುವ ಅತಿ ದೊಡ್ಡ ಸವಾಲಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ, (ಏಜನ್ಸೀಸ್).