ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ವಿರೋಧ ಪಕ್ಷದ ನಾಯಕ ಗಡಿ ಐಸೆನ್‌ಕೋಟ್ 
ವಿದೇಶ

ಪ್ರಧಾನಿ ಹುದ್ದೆ ಬಿಟ್ಟುಕೊಡಲು ಮುಂದಾದ ನೆತನ್ಯಾಹು: 'ಅಧಿಕಾರ ಹಂಚಿಕೆ' ಹಿಂದಿನ ರಾಜಕೀಯ ಲೆಕ್ಕಾಚಾರವೇನು?Benjamin Netanyahu

ಜೆರುಸಲೆಮ್: ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಫಲಿತಾಂಶದ ಬೆನ್ನಲ್ಲೇ ಇಸ್ರೇಲ್​​ನಲ್ಲಿ ಹೊಸ ಸರ್ಕಾರ ರಚಿಸುವ ಕಸರತ್ತು ತೀವ್ರಗೊಂಡಿದ್ದು, ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೊಸದೊಂದು ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ.

ತಮ್ಮ ಪಕ್ಷದ ಬೆಂಬಲವಿಲ್ಲದೆ, ವಿಪಕ್ಷಗಳು ಸೇರಿ ಹೊಸ ಸರ್ಕಾರ ರಚಿಸಲು ಮುಂದಾಗುತ್ತಿರುವುದನ್ನು ತಡೆಯಲು, ವಿರೋಧ ಪಕ್ಷದ ನಾಯಕ ಗಡಿ ಐಸೆನ್‌ಕೋಟ್ ಅವರಿಗೆ ಪರ್ಯಾಯ ಪ್ರಧಾನಿ ಆಫರ್ ನೀಡಲು ನೆತನ್ಯಾಹು ಯೋಚಿಸುತ್ತಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಈ ಒಪ್ಪಂದದ ಪ್ರಕಾರ, ಮೊದಲ ಅವಧಿಗೆ ಐಸೆನ್‌ಕೋಟ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದರೆ, ಎರಡನೇ ಅವಧಿಗೆ ನೆತನ್ಯಾಹು ಮತ್ತೆ ಪ್ರಧಾನಿ ಕುರ್ಚಿ ಏರಲಿದ್ದಾರೆ.

ನಂಬರ್ ಗೇಮ್ ಮತ್ತು ಸರ್ಕಾರ ರಚನೆಯ ಡೆಡ್‌ಲೈನ್!

ಅಕ್ಟೋಬರ್ 27ರಂದು ನಡೆದ ಚುನಾವಣೆಯಲ್ಲಿ 120 ಸದಸ್ಯ ಬಲದ ಇಸ್ರೇಲ್ ಸಂಸತ್ತಿನಲ್ಲಿ ಯಾವೊಂದು ಬಣಕ್ಕೂ ಬಹುಮತಕ್ಕೆ ಬೇಕಾದ 61 ಸ್ಥಾನಗಳು ಸಿಕ್ಕಿಲ್ಲ. ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷ 27 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾದರೂ, ಅವರ ಮೈತ್ರಿಕೂಟಕ್ಕೆ ಸಿಕ್ಕಿದ್ದು ಕೇವಲ 53 ಸ್ಥಾನಗಳು ಮಾತ್ರ.

ಇತ್ತ ನವೆಂಬರ್ 8ರಂದು ಅಧ್ಯಕ್ಷ ಐಸಾಕ್ ಹರ್ಜೋಗ್ ಅವರು 67 ಶಾಸಕರ ಶಿಫಾರಸಿನ ಮೇರೆಗೆ ಐಸೆನ್‌ಕೋಟ್ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಆದರೆ, ಐಸೆನ್‌ಕೋಟ್ ನೇತೃತ್ವದ ನಾಲ್ಕು ಪಕ್ಷಗಳ ಮೈತ್ರಿಕೂಟದ ಬಳಿ ಸದ್ಯ 48 ಸ್ಥಾನಗಳಷ್ಟೇ ಇದ್ದು, ಬಹುಮತಕ್ಕೆ ಇನ್ನೂ 13 ಸ್ಥಾನಗಳ ಕೊರತೆಯಿದೆ. ಡಿಸೆಂಬರ್ 6ರಂದು ಅವರ ಗಡುವು ಮುಗಿಯಲಿದ್ದು, ಅಷ್ಟರೊಳಗೆ ಸರ್ಕಾರ ರಚಿಸದಿದ್ದರೆ ಇಸ್ರೇಲ್ ಮತ್ತೊಂದು ಚುನಾವಣೆ ಎದುರಿಸಬೇಕಾಗುತ್ತದೆ.

ನೆತನ್ಯಾಹು ಆಫರ್ ಹಿಂದಿನ ರಾಜಕೀಯವೇನು?

ಅನಧಿಕೃತ ಮಾರ್ಗಗಳ ಮೂಲಕ ನೆತನ್ಯಾಹು ಕಳುಹಿಸಿರುವ ಈ ಆಫರ್ ಬಗ್ಗೆ ಐಸೆನ್‌ಕೋಟ್ ಅವರಿಗೆ ಅನುಮಾನವಿದೆ. ಅಷ್ಟೇ ಅಲ್ಲದೆ, ಮೈತ್ರಿಕೂಟದ ನಾಯಕ ಅವಿಗ್ದೋರ್ ಲಿಬರ್ಮನ್ ಅವರು "ಇದೊಂದು ನೆತನ್ಯಾಹು ಅವರ ರಾಜಕೀಯ ಬಲೆ" ಎಂದು ಎಚ್ಚರಿಸಿದ್ದಾರೆ.

ನೆತನ್ಯಾಹು ದೇಶದಲ್ಲಿ ಹೊಸ ಮೈತ್ರಿಕೂಟ ರಚನೆಯಾಗುವುದನ್ನು ತಡೆಯಲು ಈ ತಂತ್ರ ಮಾಡುತ್ತಿದ್ದಾರೆ. ಮಾತುಕತೆ ನೆಪದಲ್ಲಿ ಸಮಯ ವ್ಯರ್ಥ ಮಾಡಿ, ಕೊನೆಗೆ ಸರ್ಕಾರ ಬೀಳಿಸಿ ಮತ್ತೆ ಚುನಾವಣೆಗೆ ಹೋಗುವುದು ನೆತನ್ಯಾಹು ಪ್ಲಾನ್ ಎಂದು ಲಿಬರ್ಮನ್ ಆರೋಪಿಸಿದ್ದಾರೆ.

ಸೇನಾ ನೇಮಕಾತಿ ಮತ್ತು ತನಿಖೆಯೇ ದೊಡ್ಡ ಕಗ್ಗಂಟು

ಮತ್ತೊಂದೆಡೆ, ಲಿಕುಡ್ ಪಕ್ಷದೊಂದಿಗೆ ಒಕ್ಕೂಟ ಸರ್ಕಾರ ರಚಿಸಲು ತಾವು ಸಿದ್ಧರಿದ್ದರೂ, ಅವರು ಗಂಭೀರ ಮಾತುಕತೆಗೆ ಬರುತ್ತಿಲ್ಲ ಎಂದು ಐಸೆನ್‌ಕೋಟ್ ದೂರಿದ್ದಾರೆ.

ಅಕ್ಟೋಬರ್ 7, 2023ರ ಹಮಾಸ್ ದಾಳಿಯ ವೈಫಲ್ಯದ ಬಗ್ಗೆ ತನಿಖಾ ಆಯೋಗ ರಚಿಸಲು, ಸರ್ಕಾರದಿಂದ ಉಗ್ರಗಾಮಿ ಧೋರಣೆಯವರನ್ನು ಕೈಬಿಡಲು ಮತ್ತು ಎಲ್ಲಾ ನಾಗರಿಕರಿಗೆ ಕಡ್ಡಾಯ ಸೇನಾ ಸೇವೆ ಜಾರಿಗೊಳಿಸಲು ಲಿಕುಡ್ ಪಕ್ಷ ಒಪ್ಪುತ್ತಿಲ್ಲ. ಇದೇ ವಿಚಾರವಾಗಿ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದು, ಮುಂದಿನ ನಡೆ ಬಗ್ಗೆ ಚರ್ಚಿಸಲು ಐಸೆನ್‌ಕೋಟ್ ಮತ್ತು ನಾಫ್ತಾಲಿ ಬೆನೆಟ್ ಭಾನುವಾರ ಮಹತ್ವದ ಸಭೆ ನಡೆಸಲಿದ್ದಾರೆ, (ಏಜೆನ್ಸೀಸ್​).