ರೈತನ 1.95 ಕೋಟಿ, ಗುತ್ತಿಗೆದಾರನ 1.36 ಕೋಟಿ ನುಂಗಿದ ಆನ್‌ಲೈನ್ ಗೇಮಿಂಗ್: ಒಂದೇ ಊರಿನಲ್ಲಿ ನಡೆದ ಮಹಾವಂಚನೆ! Online Betting

Farmers and contractors from Masabinala village in Vijayapura district have lost crores of rupees after trusting links to online betting and investment websites. (Representative image).
ವಿಜಯಪುರ ಜಿಲ್ಲೆಯ ಮಸಬಿನಾಳ ಗ್ರಾಮದ ರೈತರು ಮತ್ತು ಗುತ್ತಿಗೆದಾರರು ಆನ್‌ಲೈನ್ ಬೆಟ್ಟಿಂಗ್ ಹಾಗೂ ಹೂಡಿಕೆ ವೆಬ್‌ಸೈಟ್‌ಗಳ ಲಿಂಕ್ ನಂಬಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. (ಸಾಂಕೇತಿಕ ಚಿತ್ರ).
Published on: 

ವಿಜಯಪುರ: ಆನ್‌ಲೈನ್ ಬೆಟ್ಟಿಂಗ್, ಮನಿ ಗೇಮಿಂಗ್, ಕ್ಯಾಸಿನೊ, ರಮ್ಮಿ ಸೇರಿ ವಿವಿಧ ಜೂಜಾಟದ ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳ ವಿರುದ್ಧ ಸಮರ ಸಾರಿರುವ ಸೈಬರ್ ಪೊಲೀಸರಿಗೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ರಾಜ್ಯಾದ್ಯಂತ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ವಿಜಯಪುರ ಜಿಲ್ಲೆಯೊಂದರಲ್ಲೇ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 1,315 ಯುಆರ್‌ಎಲ್‌ಗಳು ಪತ್ತೆಯಾಗಿವೆ. ಅದರಲ್ಲಿ ಒಂದೇ ಗ್ರಾಮದಲ್ಲಿ ಆರೇಳು ಪ್ರಕರಣಗಳಿದ್ದು, ರೈತ-ಕೂಲಿಕಾರ್ಮಿಕರು ಹಾಗೂ ಗುತ್ತಿಗೆದಾರರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ಮಾಹಿತಿ ಕಲೆ ಹಾಕಲಾಗಿ ಕಳೆದೊಂದು ವರ್ಷದಿಂದ ಪ್ರಸಕ್ತ ನವೆಂಬರ್‌ವರೆಗೆ ಹಲವರು ಹಣ ಕಳೆದುಕೊಂಡಿರುವ ಬಗ್ಗೆ ಒಪ್ಪಿಕೊಂಡು ದೂರು ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ ಸಕ್ರಿಯಗೊಂಡಿರುವ ಆನ್‌ಲೈನ್ ಬೆಟ್ಟಿಂಗ್, ಮನಿ ಗೇಮಿಂಗ್, ಕ್ಯಾಸಿನೊ, ರಮ್ಮಿ ಸೇರಿ ವಿವಿಧ ಜೂಜಾಟದ ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಪತ್ತೆಯಾಗಿರುವ 1,315 ಯುಆರ್‌ಎಲ್‌ಗಳನ್ನು ಶಾಶ್ವತವಾಗಿ ನಿಷ್ಕ್ರೀಯಗೊಳಿಸಲು ಕ್ರಮ ಕೈಗೊಂಡಿದ್ದಾರೆ.

ರೂ.1.95 ಕೋಟಿ ಕಳೆದುಕೊಂಡ ರೈತ

ಮಸಬಿನಾಳ ಗ್ರಾಮದ ರೈತ ರಮೇಶ ಶ್ರೀಶೈಲ ಗಚ್ಚಿನವರ ಎಂಬುವರ ಮೊಬೈಲ್‌ಗೆ 2025ರ ಜ.1ರಂದು ವೆಬ್‌ಸೈಟ್ ಲಿಂಕ್ ಬಂದಿದ್ದು, ಅದನ್ನು ಕ್ಲಿಕ್ ಮಾಡಿದ್ದಾರೆ. ಬಳಿಕ ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಬಂದ ಸಂದೇಶ ನಂಬಿ ರಮೇಶ ಅವರು ತಮ್ಮ ಹಾಗೂ ಗೆಳೆಯರ ಒಟ್ಟು 11 ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 1,95,17,921 ರೂಪಾಯಿ ವರ್ಗಾಯಿಸಿದ್ದಾರೆ.

ಆರಂಭದಲ್ಲಿ ಐದು ಕೋಟಿ ರೂಪಾಯಿ ಲಾಭಾಂಶ ತೋರಿಸಿದೆ. ಇದರಿಂದ ಸಂತಸಗೊಂಡ ರಮೇಶ ಲಾಭದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಹಣ ವರ್ಗಾವಣೆಯಾಗಿಲ್ಲ. ಈ ಕುರಿತು ವೆಬ್‌ಸೈಟ್‌ನ ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿಚಾರಿಸಿದರೂ ಸಮರ್ಪಕ ಉತ್ತರ ದೊರೆತಿಲ್ಲ. ಬಳಿಕ ಅವರ ಖಾತೆಯನ್ನೇ ಬ್ಲಾಕ್ ಮಾಡಲಾಗಿದೆ. ಆಗಲೇ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ.

ಗುತ್ತಿಗೆದಾರನ ರೂ.1.36 ಕೋಟಿ ಗುಳುಂ

ಮಸಬಿನಾಳ ಗ್ರಾಮದ ಗುತ್ತಿಗೆದಾರ ಆನಂದಕುಮಾರ ಶಿವಾನಂದ ಅಳ್ಳಗಿ ಎಂಬುವರು 2025ರ ಜೂ. 11ರಂದು ಮನೆಯಲ್ಲಿರಬೇಕಾದರೆ ಮೊಬೈಲ್‌ನಲ್ಲಿ ಕಾಣಿಸಿಕೊಂಡ ವೆಬ್‌ಸೈಟ್ ಲಿಂಕ್ ಓಪನ್ ಮಾಡಿದ್ದಾರೆ. ಅದರಲ್ಲಿ ಒಟಿಪಿ ಹಾಕಿ, ಪಾಸ್‌ವರ್ಡ್ ನೀಡಲಾಗಿ ಹೆಚ್ಚಿನ ಲಾಭ ನೀಡುವ ಹೂಡಿಕೆಯ ಹಲವು ಪ್ಲಾಟ್‌ಫಾರ್ಮ್ ಕಾಣಿಸಿಕೊಂಡಿವೆ. ಅದರಲ್ಲಿ ಹಣ ಹೂಡಿಕೆ ಮಾಡುತ್ತಾ ಹೋದ ಆನಂದಕುಮಾರ 2026 ನ.3ರವರೆಗಿನ ಅವಧಿಯಲ್ಲಿ ಬರೋಬ್ಬರಿ 1,36,68,468 ರೂಪಾಯಿ ಹೂಡಿಕೆ ಮಾಡಿದ್ದಾರೆ. ಸುಮಾರು 4 ಕೋಟಿ ರೂಪಾಯಿಗೂ ಅಧಿಕ ಲಾಭಾಂಶ ತೋರಿಸಲಾಗಿ ಹಣ ಪಡೆಯಲು ಹೋದಾಗ ಯಾವುದೇ ರೀತಿಯಲ್ಲಿ ಹಣ ಬಂದಿಲ್ಲ. ಬದಲಾಗಿ ನಂಬರ್ ಬ್ಲಾಕ್ ಆಗಿದೆ. ಮೋಸದ ಅರಿವಾಗಿ ಆನಂದಕುಮಾರ ಅವರು ನ.27 ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕೃಷಿಕ-ಕೂಲಿ ಕಾರ್ಮಿಕನಿಗೂ ವಂಚನೆ

ಮಸಬಿನಾಳದ ಗ್ರಾಮದ ರೈತ ದಾನೇಶ ಮಹಾಂತೇಶ ರಂಜಣಗಿ ಎಂಬುವರು ಹೆಚ್ಚಿನ ಲಾಭದಾಸೆಗೆ ವೆಬ್‌ಸೈಟ್ ಲಿಂಕ್ ಬಳಸಿ 5813737.25 ರೂಪಾಯಿ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ 2 ಕೋಟಿ ರೂಪಾಯಿಗೂ ಅಧಿಕ ಲಾಭಾಂಶ ತೋರಿಸಿದೆ. ಹಣ ಹಿಂಪಡೆಯಲು ಹೋದಾಗ ವಾಪಸ್ ಬರದ ಕಾರಣಕ್ಕೆ ಹೆಲ್ಪ್‌ಲೈನ್‌ಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ನಂಬರ್ ಸಹ ಬ್ಲಾಕ್ ಮಾಡಲಾಗಿದೆ. ವಂಚನೆಗೆ ಒಳಗಾಗಿರುವ ಅರಿವಾಗುತ್ತಿದ್ದಂತೆ 2026 ರ ನ.27 ರಂದು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ವರದಿ: ಪರಶುರಾಮ ಭಾಸಗಿ

ಆನ್‌ಲೈನ್ ಬೆಟ್ಟಿಂಗ್, ಮನಿ ಗೇಮಿಂಗ್, ಕ್ಯಾಸಿನೊ, ರಮ್ಮಿ ಸೇರಿ ವಿವಿಧ ಜೂಜಾಟದ ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಅಂಥ 1,315 ಯುಆರ್‌ಎಲ್‌ಗಳನ್ನು ಪತ್ತೆ ಹಚ್ಚಲಾಗಿದೆ. ಎಫ್‌ಐಆರ್ ದಾಖಲಿಸಿ ಅಂಥ ತಂತ್ರಾಂಶ ಬ್ಯಾನ್ ಮಾಡಲು ಸಹಯೋಗ ಪೋರ್ಟಲ್‌ನಲ್ಲಿ ಹಾಕಲಾಗುತ್ತಿದೆ. ಹಾಗೆ ಮಾಡುವುದರಿಂದ ಯುಆರ್‌ಎಲ್‌ಗಳು ನಿಷ್ಕ್ರೀಯಗೊಳ್ಳಲಿವೆ.

ಲಕ್ಷ್ಮಣ ನಿಂಬರಗಿ, ಎಸ್‌ಪಿ