ವಾಷಿಂಗ್ಟನ್: ಲೆಬನಾನ್‌ನಲ್ಲಿ ಇಸ್ರೇಲ್ (Israel-Lebanon War)ನಡೆಸುತ್ತಿರುವ ಸರಣಿ ದಾಳಿ ಹಾಗೂ ಯುದ್ಧದ ತೀವ್ರತೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಇರಾನ್ ಜೊತೆಗಿನ ಮಧ್ಯಪ್ರಾಚ್ಯ ಶಾಂತಿ ಮಾತುಕತೆಗೆ ಇಸ್ರೇಲ್ ಅಡ್ಡಿಪಡಿಸುತ್ತಿದೆ ಎಂದು ಆಕ್ರೋಶ ಹೊರಹಾಕಿರುವ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಅಮೆರಿಕದ ಪ್ರಸಿದ್ಧ ಮಾಧ್ಯಮ ‘ಆಕ್ಸಿಯೋಸ್’ (Axios) ವರದಿ ಮಾಡಿದೆ.
ಮಾತುಕತೆಯ ವೇಳೆ ತೀವ್ರ ಕೋಪಗೊಂಡ ಟ್ರಂಪ್, "ನಿನಗೆ ಹುಚ್ಚು ಹಿಡಿದಿದೆ. ನಾನಿಲ್ಲದಿದ್ದರೆ ನೀನು ಈ ಹೊತ್ತಿಗೆ ಜೈಲಿನಲ್ಲಿರಬೇಕಿತ್ತು. ನಾನು ನಿನ್ನನ್ನು ರಕ್ಷಿಸುತ್ತಿದ್ದೇನೆ. ಆದರೆ ಈಗ ನಿನ್ನ ಈ ನಡೆಯಿಂದಾಗಿ ಇಡೀ ಜಗತ್ತೇ ನಿನ್ನನ್ನು ಮತ್ತು ಇಸ್ರೇಲ್ ಅನ್ನು ದ್ವೇಷಿಸುವಂತಾಗಿದೆ" ಎಂದು ಅತ್ಯಂತ ಕಠಿಣ ಪದಗಳಲ್ಲಿ ನೆತನ್ಯಾಹು ವಿರುದ್ಧ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ನೆತನ್ಯಾಹುಗೆ ತಾವು ನೀಡಿದ ರಾಜತಾಂತ್ರಿಕ ಬೆಂಬಲವನ್ನು ಟ್ರಂಪ್ ಈ ವೇಳೆ ನೆನಪಿಸಿದ್ದಾರೆ ಎನ್ನಲಾಗಿದೆ.
ಬೈರೂತ್ ಮೇಲಿನ ದಾಳಿಗೆ ಬ್ರೇಕ್
ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ಹಮ್ಮಿಕೊಂಡಿದ್ದ ಭಾರಿ ವೈಮಾನಿಕ ದಾಳಿಯ ಯೋಜನೆಗೆ ಟ್ರಂಪ್ ಸದ್ಯ ಬ್ರೇಕ್ ಹಾಕಿದ್ದಾರೆ. ಇಸ್ರೇಲ್ ತನ್ನ ರಕ್ಷಣೆಗಾಗಿ ಹೆಜ್ಬೊಲ್ಲಾ ಉಗ್ರರ ವಿರುದ್ಧ ಹೋರಾಡುವುದರಲ್ಲಿ ತಪ್ಪಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಮಿತಿಮೀರಿ ವರ್ತಿಸುತ್ತಿದೆ. ಕೇವಲ ಒಬ್ಬ ಹೆಜ್ಬೊಲ್ಲಾ ಕಮಾಂಡರ್ ಅನ್ನು ಕೊಲ್ಲಲು ಇಡೀ ವಸತಿ ಸಮುಚ್ಚಯ ಹಾಗೂ ಕಟ್ಟಡಗಳನ್ನು ಧ್ವಂಸಗೊಳಿಸುತ್ತಿರುವುದಕ್ಕೆ ಮತ್ತು ಇದರಿಂದ ಅಮಾಯಕ ಲೆಬನಾನ್ ನಾಗರಿಕರು ಸಾಯುತ್ತಿರುವುದಕ್ಕೆ ಟ್ರಂಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೈರೂತ್ ಮೇಲೆ ಬಾಂಬ್ ದಾಳಿ ಮುಂದುವರಿಸಿದರೆ ಜಾಗತಿಕ ಮಟ್ಟದಲ್ಲಿ ಇಸ್ರೇಲ್ ಸಂಪೂರ್ಣ ಒಂಟಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಸಂಧಾನ ಯಶಸ್ವಿ?
ಭಾರಿ ವಾಕ್ಸಮರದ ಬಳಿಕ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ನೆತನ್ಯಾಹು ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ ಎಂದಿದ್ದಾರೆ. ಬೈರೂತ್ ಮೇಲಿನ ದಾಳಿಯನ್ನು ನಿಲ್ಲಿಸಲು ನೆತನ್ಯಾಹು ಒಪ್ಪಿದ್ದು, ಇಸ್ರೇಲ್ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅತ್ತ ಹೆಜ್ಬೊಲ್ಲಾ ಉಗ್ರರು ಸಹ ಇಸ್ರೇಲ್ ಮೇಲಿನ ದಾಳಿ ನಿಲ್ಲಿಸಲು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಆದರೆ, ಇಸ್ರೇಲ್ ಪ್ರಧಾನಿ ನೆತನ್ಯಾಹು ಮಾತ್ರ, "ಇದು ಟ್ರಂಪ್ ನೀಡಿದ ಎಚ್ಚರಿಕೆಯಷ್ಟೇ. ಒಂದು ವೇಳೆ ಹೆಜ್ಬೊಲ್ಲಾ ದಾಳಿ ನಿಲ್ಲಿಸದಿದ್ದರೆ ನಾವು ಬೈರೂತ್ ಮೇಲೆ ಮತ್ತೆ ದಾಳಿ ಮಾಡುತ್ತೇವೆ" ಎಂದು ಹೇಳುವ ಮೂಲಕ ತಮ್ಮ ಆಕ್ರಮಣಕಾರಿ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಏಪ್ರಿಲ್ ಮಧ್ಯಭಾಗದಿಂದ ಕದನ ವಿರಾಮ ಜಾರಿಯಲ್ಲಿದ್ದರೂ, ಉಭಯ ದೇಶಗಳ ನಡುವೆ ಸಣ್ಣ ಮಟ್ಟದ ಸಂಘರ್ಷ ಮುಂದುವರಿದಿದ್ದು, ಮಧ್ಯಪ್ರಾಚ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ,(ಏಜೆನ್ಸೀಸ್).