ನೇಪಾಳ ಜಲಪ್ರಳಯ: ಜೀವದ ಹಂಗು ತೊರೆದು 1.5 ಕೋಟಿ ನಗದು, 50 ಕೋಟಿ ಮೌಲ್ಯದ ಚಿನ್ನಾಭರಣ ರಕ್ಷಿಸಿದ ಪೊಲೀಸರು! Nepal Floods  
ವಿದೇಶ

ನೇಪಾಳ ಜಲಪ್ರಳಯ: ಜೀವದ ಹಂಗು ತೊರೆದು 1.5 ಕೋಟಿ ನಗದು, 50 ಕೋಟಿ ಮೌಲ್ಯದ ಚಿನ್ನಾಭರಣ ರಕ್ಷಿಸಿದ ಪೊಲೀಸರು! Nepal Floods

ಪ್ರಮುಖ ಮುಖ್ಯಾಂಶಗಳು

  • ನೇಪಾಳ ಜಲಪ್ರಳಯ ಪೊಲೀಸರಿಂದ 50 ಕೋಟಿ ಮೌಲ್ಯದ ಚಿನ್ನಾಭರಣ, 1.5 ಕೋಟಿ ನಗದು ರಕ್ಷಣೆ
  • ಪ್ರವಾಹದ ನಡುವೆಯೂ ಬ್ಯಾಂಕ್ ಲಾಕರ್​ ಅನ್ನು ಸುರಕ್ಷಿತವಾಗಿ ತಂದ ಸಾಹಸಿ ಪೊಲೀಸರು
  • ನೇಪಾಳದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತ ಸಾವುನೋವು 939ಕ್ಕೆ ಏರಿಕೆ
  • ಚಿತ್ವನ್ ಅರಣ್ಯದಲ್ಲಿ ಅನಾಮಧೇಯ ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ
ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ( Nepal Floods ) ಮತ್ತು ಭೂಕುಸಿತದ ಅನಾಹುತಗಳ ನಡುವೆಯೂ, ನೇಪಾಳ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರವಾಹದ ನೀರು ನುಗ್ಗಿ ಜಲಾವೃತವಾಗಿದ್ದ ಕೃಷಿ ವಿಕಾಸ ಬ್ಯಾಂಕಿನ ಲಾಕರ್‌ನಿಂದ ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನವನ್ನು ಪೊಲೀಸರು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ನುವಾಕೋಟ್ ಜಿಲ್ಲೆಯ ತ್ರಿಶೂಲಿ ಧುಂಕೆ ಪ್ರದೇಶದಲ್ಲಿರುವ ಈ ಬ್ಯಾಂಕಿನಲ್ಲಿ ಪ್ರವಾಹದ ನೀರು ತುಂಬಿಕೊಳ್ಳುತ್ತಿದ್ದಂತೆ ಧಾವಿಸಿದ ಪೊಲೀಸರು, ಸುಮಾರು ಎಂಟು ಗಂಟೆಗಳ ಕಾಲ ಸತತವಾಗಿ ಶ್ರಮಿಸಿ ಈ ಸಾಹಸ ಮೆರೆದಿದ್ದಾರೆ.
ಪೊಲೀಸರ ಈ ರೋಚಕ ಕಾರ್ಯಾಚರಣೆಗೆ ಸಂಬಂಧಿಸಿದ ವಿಡಿಯೋವನ್ನು ನೇಪಾಳ ಪೊಲೀಸರು ತಮ್ಮ ಅಧಿಕೃತ 'ಎಕ್ಸ್' (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಾಣದ ಹಂಗನ್ನು ತೊರೆದು ಪ್ರವಾಹದ ನಡುವೆ ಬ್ಯಾಂಕ್ ಪ್ರವೇಶಿಸಿದ ಸಿಬ್ಬಂದಿ, ಸುಮಾರು 1.5 ಕೋಟಿ ರೂ. ನೇಪಾಳಿ ಕರೆನ್ಸಿ ಹಾಗೂ ಸರಿಸುಮಾರು 50 ಕೋಟಿ ನೇಪಾಳಿ ಕರೆನ್ಸಿ ಮೌಲ್ಯದ ಚಿನ್ನಾಭರಣಗಳನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ನಗದು ಮತ್ತು ಚಿನ್ನದ ಜೊತೆಗೆ ಬ್ಯಾಂಕಿಗೆ ಅತ್ಯಂತ ಅಗತ್ಯವಿರುವ ಗೌಪ್ಯ ದಾಖಲೆಗಳನ್ನು ಸಹ ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಮತ್ತೊಂದೆಡೆ, ನೇಪಾಳದಲ್ಲಿ ಪ್ರಕೃತಿ ಸೃಷ್ಟಿಸಿದ ಈ ದುರಂತದಲ್ಲಿ ಸಾವಿಗೀಡದವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದ್ದು, ಇದುವರೆಗೆ ಒಟ್ಟು 939 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕೃತ ಮಾಹಿತಿಯ ಪ್ರಕಾರ, ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ನಾಪತ್ತೆಯಾಗಿರುವವರ ಸಂಖ್ಯೆ ಬರೋಬ್ಬರಿ 4,247 ಕ್ಕೆ ತಲುಪಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆರನೇ ದಿನವೂ ತೀವ್ರ ಶೋಧನಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾಗಿರುವವರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗುತ್ತಿಲ್ಲ.
ಪ್ರಾಕೃತಿಕ ವಿಕೋಪದ ತೀವ್ರತೆಯು ವಿದೇಶಿ ಪ್ರಜೆಗಳ ಮೇಲೆಯೂ ಪರಿಣಾಮ ಬೀರಿದ್ದು, ನಾಪತ್ತೆಯಾದವರ ಪಟ್ಟಿಯಲ್ಲಿ ಅಮೆರಿಕದ 85 ನಾಗರಿಕರೂ ಸೇರಿದ್ದಾರೆ ಎಂದು ಅಮೆರಿಕ ಸರಕಾರ ತಿಳಿಸಿದೆ. ಭೀಕರ ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ಅನೇಕ ಜನರ ಮೃತದೇಹಗಳು ಕೊಳೆತುಹೋಗಿದ್ದು, ಗುರುತಿಸಲು ಸಾಧ್ಯವಿಲ್ಲದಷ್ಟು ವಿರೂಪಗೊಂಡಿವೆ. ಸಾರ್ವಜನಿಕ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿರುವುದರಿಂದ, ಅಧಿಕಾರಿಗಳು ಅನಿವಾರ್ಯವಾಗಿ ಸಾಮೂಹಿಕ ಅಂತ್ಯಸಂಸ್ಕಾರದ ಮಾರ್ಗವನ್ನು ಹಿಡಿದಿದ್ದಾರೆ.
ಅತ್ಯಂತ ಕೆಟ್ಟ ರೀತಿಯಲ್ಲಿ ಬಾಧಿತವಾಗಿರುವ ರಾಸುವಾ ಪ್ರದೇಶದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಚಿತ್ವನ್ ಜಿಲ್ಲೆಯ ದೇವಘಾಟ್ ಅರಣ್ಯ ಪ್ರದೇಶದಲ್ಲಿ ಈ ಸಾಮೂಹಿಕ ಅಂತ್ಯಸಂಸ್ಕಾರಗಳು ಆರಂಭವಾಗಿವೆ. ಯಾರೂ ಗುರುತಿಸಲು ಸಾಧ್ಯವಾಗದ ನೂರಾರು ಅನಾಮಧೇಯ ಶವಗಳನ್ನು ಹೂಳಲು ಈ ಅರಣ್ಯದಲ್ಲಿ ವಿಶೇಷ ತಾತ್ಕಾಲಿಕ ಸಮಾಧಿಗಳನ್ನು ನಿರ್ಮಿಸಲಾಗಿದೆ. ಹಿಂದೆ ಸ್ಥಳೀಯರು ಪ್ರಶಾಂತವಾಗಿ ಬೆಳಗಿನ ನಡಿಗೆ ಮತ್ತು ಇತರೆ ಚಟುವಟಿಕೆಗಳಿಗೆ ಬಳಸುತ್ತಿದ್ದ ಸುಂದರವಾದ ಅರಣ್ಯದ ಹಾದಿಗಳು ಇಂದು ತಾತ್ಕಾಲಿಕ ಸ್ಮಶಾನಗಳಾಗಿ ರೂಪಾಂತರಗೊಂಡಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ, (ಏಜೆನ್ಸೀಸ್​).