- ನೇಪಾಳದಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಭೋಟೇಕೋಶಿ ನದಿಯ ನೀರಿನ ಮಟ್ಟ ದಿಢೀರ್ ಹೆಚ್ಚಳ ಕಾಣುವ ಮುನ್ಸೂಚನೆ
- ರಣ ಭೀಕರ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 734ಕ್ಕೆ ಏರಿಕೆ
ಕಾಠ್ಮಂಡು: ನೇಪಾಳದಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಭೋಟೇಕೋಶಿ ನದಿಯ ನೀರಿನ ಮಟ್ಟ ದಿಢೀರ್ ಹೆಚ್ಚಳ ಕಾಣುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪಡೆಗಳಿಗೆ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ (Nepal Floods).
ಕೆಲ ದಿನಗಳ ಹಿಂದೆಯಷ್ಟೇ ಸಂಭವಿಸಿದ ರಣ ಭೀಕರ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 734ಕ್ಕೆ ಏರಿದ್ದು, ಇನ್ನೂ 2,400ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಲಾಗಿದೆ. ವಿಕೋಪದಿಂದ ಚೇತರಿಸಿಕೊಳ್ಳುವ ಮುನ್ನವೇ, ನೇಪಾಳದ ಭೋಟೇಕೋಶಿ ನದಿಯಲ್ಲಿ ಭಾನುವಾರ ಮತ್ತೆ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ತನಿಖೆ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ತಂಡಗಳು ಹಾಗೂ ನದಿ ತೀರದ ಸ್ಥಳೀಯರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸರ್ಕಾರಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಹಿಮಾಲಯದ ಗಡಿ ಭಾಗದಿಂದ ದಕ್ಷಿಣದತ್ತ ಹರಿಯುವ ಈ ನದಿಯು ಬುಧವಾರ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಮಧ್ಯ ನೇಪಾಳದಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದು ಗೊತ್ತೇ ಇದೆ. ಆದರೀಗ, ಮತ್ತೆ ಮಳೆ ಶುರುವಾಗಿ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಮತ್ತೆ ಸ್ಥಗಿತಗೊಂಡಿದೆ. ಇದರಿಂದ ಮಿಸ್ಸಿಂಗ್ ಪಟ್ಟಿಯಲ್ಲಿರುವ ಅನೇಕರ ಸುಳಿವು ಈಗ ಮತ್ತಷ್ಟು ವಿಳಂಬವಾಗಲಿದೆ.
ಹಲವು ಜಿಲ್ಲೆಗಳಿಗೆ ಹೈ ಅಲರ್ಟ್
ಭೋಟೇಕೋಶಿ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುತ್ತಿದ್ದು, ನದಿ ತೀರದಲ್ಲಿ ನಿವಾಸಿಗಳು ಹಾಗೂ ರಕ್ಷಣಾ ತಂಡಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ನೇಪಾಳದ ರಾಷ್ಟ್ರೀಯ ವಿಕೋಪ ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಎಚ್ಚರಿಸಿದೆ. ರಸುವಾ, ನುವಾಕೋಟ್, ಧಾಡಿಂಗ್ ಹಾಗೂ ಚಿತ್ವಾನ್ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ.
ದೊಡ್ಡ ಮಟ್ಟದ ಡ್ಯಾಮೇಜ್
ಹಠಾತ್ ಪ್ರವಾಹದ ರಭಸಕ್ಕೆ ನೇಪಾಳದ ಮುಖ್ಯ ಹಾಗೂ ಹೆಸರಾಂತ ರಸ್ತೆಗಳು, ಸೇತುವೆಗಳು, ವಸತಿ ಪ್ರದೇಶಗಳು ಹಾಗೂ ಜಲವಿದ್ಯುತ್ ಯೋಜನೆ, ಘಟಕಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ. ಇನ್ನು, ತ್ರಿಶೂಲಿ ಜಲವಿದ್ಯುತ್ ಯೋಜನೆ ಪ್ರದೇಶದ ಸುರಂಗದೊಳಗೆ ಸಿಲುಕಿರುವವರನ್ನು ಹೊರತರಲು ನೇಪಾಳ ಸೇನೆಯು ಭಾರತದ ಸುರಂಗ ಮಾರ್ಗ ತಜ್ಞರ ನೆರವಿನೊಂದಿಗೆ ಶನಿವಾರ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದೆ.
ಘೋರ ದುರಂತಕ್ಕೆ ಕಾರಣವೇನು?
ನೇಪಾಳ-ಟಿಬೆಟ್ ಗಡಿ ಭಾಗದಲ್ಲಿ ಹಿಮ ಮತ್ತು ಬಂಡೆಗಳು ಕುಸಿದುಬಿದ್ದ ಪರಿಣಾಮ ಈ ಭೀಕರ ಪ್ರವಾಹ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ವಿವರಿಸಲಾಗಿದೆ. ಈ ಕುಸಿತದಿಂದಾಗಿ ಭೋಟೇಕೋಶಿ ಮತ್ತು ತ್ರಿಶೂಲಿ ನದಿಗಳ ಪಾತ್ರಕ್ಕೆ ಏಕಾಏಕಿ ಹಾಗೂ ಅಪಾರ ಪ್ರಮಾಣದ ನೀರು, ಕೆಸರು ಮತ್ತು ಕಲ್ಲು ಬಂಡೆಗಳು ಹರಿದುಬಂದ ಹಿನ್ನೆಲೆ ಹಠಾತ್ ಪ್ರವಾಹ ಅಪ್ಪಳಿಸಿ, ಸಾವಿರಾರೂ ಜನರ ಜೀವ, ಆಸ್ತಿ-ಪಾಸ್ತಿಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ,(ಏಜೆನ್ಸೀಸ್).