European Flights: ಯುರೋಪ್ ಖಂಡದಾದ್ಯಂತ ಹಾರಾಟ ನಡೆಸುತ್ತಿದ್ದ ಹಲವಾರು ಪ್ರಮುಖ ವಿಮಾನಗಳಿಗೆ ಸರಣಿ ಬಾಂಬ್ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನಗಳನ್ನು ಹಾರಾಟದ ಮಧ್ಯದಲ್ಲೇ ತುರ್ತಾಗಿ ಮಾರ್ಗಬದಲಾವಣೆ ಮಾಡಲಾಗಿದೆ. ಈ ಸರಣಿ ಬೆದರಿಕೆ ಕರೆಗಳು ಯುರೋಪ್ ಖಂಡದ ವಿಮಾನಯಾನ ವಲಯದಲ್ಲಿ ತೀವ್ರ ಆತಂಕ ಹಾಗೂ ಭದ್ರತಾ ಗೊಂದಲವನ್ನು ಸೃಷ್ಟಿಸಿವೆ.
ಖ್ಯಾತ ವಿಮಾನಯಾನ ಸಂಸ್ಥೆಗಳಾದ ವೋಜ್ ಏರ್, ಏರ್ ಲಿಂಗಸ್ ಮತ್ತು ಎಲ್ಒಟಿ ಪೋಲಿಷ್ ಏರ್ಲೈನ್ಸ್ ಸೇರಿ ಹಲವು ವಿಮಾನಗಳು ಈ ಘಟನೆಯಿಂದ ಬಾಧಿತವಾಗಿವೆ. ಸದ್ಯಕ್ಕೆ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ನಡೆಸಲಾದ ಪ್ರಾಥಮಿಕ ತಪಾಸಣೆಗಳಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮೊದಲ ಘಟನೆಯಲ್ಲಿ, ಐರ್ಲೆಂಡ್ನ ಡಬ್ಲಿನ್ನಿಂದ ಇಟಲಿಯ ರೋಮ್ ನಗರಕ್ಕೆ ಹೊರಟಿದ್ದ ಏರ್ ಲಿಂಗಸ್ ಸಂಸ್ಥೆಯ ಏರ್ಬಸ್ ಎ320 ವಿಮಾನಕ್ಕೆ ಹಾರಾಟದ ಮಧ್ಯದಲ್ಲೇ ಬಾಂಬ್ ಬೆದರಿಕೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನದ ಸಿಬ್ಬಂದಿ, ಫ್ರಾನ್ಸ್ನ ಎವ್ರೆಕ್ಸ್ ವಾಯುಪಡೆ ಮಿಲಿಟರಿ ನೆಲೆಗೆ ವಿಮಾನವನ್ನು ತುರ್ತಾಗಿ ಮಾರ್ಗಬದಲಾಯಿಸಿದರು.
ಫ್ರೆಂಚ್ ಪ್ರಧಾನಮಂತ್ರಿ ಕಚೇರಿಯ ಮಾಹಿತಿಯಂತೆ, 151 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ವಿಮಾನ ಇಳಿಯುತ್ತಿದ್ದಂತೆ ಫ್ರೆಂಚ್ ಮಿಲಿಟರಿಯ ಬಾಂಬ್ ನಿಷ್ಕ್ರಿಯ ದಳದ ತಜ್ಞರು ವಿಮಾನವನ್ನು ವಶಕ್ಕೆ ಪಡೆದು ಸಂಪೂರ್ಣ ತಪಾಸಣೆ ನಡೆಸಿದರು. ಟ್ರ್ಯಾಕಿಂಗ್ ವೆಬ್ಸೈಟ್ಗಳ ಪ್ರಕಾರ, ಈ ವಿಮಾನವು ಪ್ಯಾರಿಸ್ ನಗರವನ್ನು ತಲುಪುವಷ್ಟರಲ್ಲಿ ಹಠಾತ್ತಾಗಿ ಮಾರ್ಗ ಬದಲಾಯಿಸಿ, ಗಾಳಿಯಲ್ಲೇ ಹಲವು ಸುತ್ತುಗಳನ್ನು ಹೊಡೆದು ಎವ್ರೆಕ್ಸ್ ವಾಯುನೆಲೆಯತ್ತ ತೆರಳಿರುವುದು ಕಂಡುಬಂದಿದೆ.
ಇತ್ತ ಇಟಲಿಯ ಮಿಲನ್ ನಗರದಿಂದ ಪೋಲೆಂಡ್ನ ವಾರ್ಸಾಗೆ ತೆರಳುತ್ತಿದ್ದ ವೋಜ್ ಏರ್ ವಿಮಾನಕ್ಕೂ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ, ಅದನ್ನು ಆಸ್ಟ್ರಿಯಾದ ವಿಯೆನ್ನಾ ವಿಮಾನ ನಿಲ್ದಾಣಕ್ಕೆ ಮಾರ್ಗಬದಲಾಯಿಸಿ ಸುರಕ್ಷಿತವಾಗಿ ಇಳಿಸಲಾಯಿತು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಮತ್ತೊಂದೆಡೆ, ಪೋಲೆಂಡ್ನ ವಾರ್ಸಾದಿಂದ ಪ್ಯಾರಿಸ್ಗೆ ಟೇಕ್-ಆಫ್ ಆಗಬೇಕಿದ್ದ ಎಲ್ಒಟಿ ಪೋಲಿಷ್ ಏರ್ಲೈನ್ಸ್ ವಿಮಾನವನ್ನು ರನ್ವೇಯಲ್ಲಿ ಸಾಗುತ್ತಿದ್ದಾಗಲೇ ತಡೆದು, ತಕ್ಷಣವೇ ಪ್ರತ್ಯೇಕ ಪಾರ್ಕಿಂಗ್ ಬೇಗೆ ಸ್ಥಳಾಂತರಿಸಿ ಕಠಿಣ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು.
ಬುಲ್ಗೇರಿಯಾ ದೇಶದಲ್ಲೂ ಈ ಬೆದರಿಕೆಯ ಅಲೆಗಳು ಅಪ್ಪಳಿಸಿದ್ದು, ಒಟ್ಟು ಮೂರು ವಿಮಾನಗಳು ಅಲ್ಲಿನ ವಿವಿಧ ವಿಮಾನ ನಿಲ್ದಾಣಗಳಲ್ಲಿ ತುರ್ತು ಭೂಸ್ಪರ್ಶ ಮಾಡಿವೆ. ಡೆನ್ಮಾರ್ಕ್ನ ಕೋಪನ್ಹೇಗನ್ ಮತ್ತು ಸ್ಪೇನ್ನ ಮಾಡ್ರಿಡ್ ನಗರಗಳಿಂದ ಬಂದಿದ್ದ ಎರಡು ವಿಮಾನಗಳು ಸೋಫಿಯಾ ವಿಮಾನ ನಿಲ್ದಾಣದಲ್ಲಿ ಇಳಿದರೆ, ಲಂಡನ್ನಿಂದ ಹೊರಟಿದ್ದ ಮತ್ತೊಂದು ವಿಮಾನವು ಪ್ಲೋವ್ಡಿವ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ತಪಾಸಣೆಯ ನಂತರ ಬುಲ್ಗೇರಿಯಾ ದೇಶದ ಭದ್ರತಾ ವಿಭಾಗವು ಯಾವುದೇ ಆತಂಕಕಾರಿ ಅಥವಾ ಸ್ಫೋಟಕ ವಸ್ತುಗಳು ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಶೇಷವೆಂದರೆ, ಈ ಘಟನೆಗೆ ಕೇವಲ ಎರಡು ದಿನಗಳ ಮುನ್ನ (ಮಂಗಳವಾರ) ಯುರೋಪ್ನಾದ್ಯಂತ ಇದೇ ರೀತಿಯ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದವು. ಆ ಸಮಯದಲ್ಲಿ ರಯಾನ್ ಏರ್, ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್, ಎಲ್ಒಟಿ ಪೋಲಿಷ್ ಮತ್ತು ವೋಜ್ ಏರ್ ಸಂಸ್ಥೆಗಳ ಸುಮಾರು 10 ವಿಮಾನಗಳು ಬೆದರಿಕೆಗೆ ಒಳಗಾಗಿದ್ದವು. ಪರಿಣಾಮವಾಗಿ ವಾರ್ಸಾ ವಿಮಾನ ನಿಲ್ದಾಣವನ್ನು ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು.
ಪರಿಸ್ಥಿತಿ ಎಷ್ಟರ ಮಟ್ಟಿಗೆ ಗಂಭೀರವಾಗಿತ್ತೆಂದರೆ, ಒಂದು ವಿಮಾನವನ್ನು ಇಟಲಿ ವಾಯುಪಡೆಯ ಯುದ್ಧ ವಿಮಾನಗಳು ಭೂಸ್ಪರ್ಶದವರೆಗೆ ಸುರಕ್ಷಿತವಾಗಿ ಬೆಂಗಾವಲಾಗಿ ಕರೆತಂದಿದ್ದವು. ಲಂಡನ್ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳಿಗೂ ಬೆದರಿಕೆ ಕರೆಗಳು ಬಂದಿರುವುದಾಗಿ ಲಂಡನ್ ಪೊಲೀಸರು ದೃಢಪಡಿಸಿದ್ದರು. ಸತತವಾಗಿ ಬರುತ್ತಿರುವ ಈ ಬೆದರಿಕೆಗಳು ಯುರೋಪ್ ಖಂಡದ ವಿಮಾನಯಾನ ಕ್ಷೇತ್ರ ಹಾಗೂ ಪ್ರಯಾಣಿಕರಲ್ಲಿ ಭಾರಿ ಅಭದ್ರತೆಯನ್ನು ಸೃಷ್ಟಿಸಿವೆ(ಏಜೆನ್ಸೀಸ್).