ಚೀನಾ: 2 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಚಿನ್ನದ ನಿಕ್ಷೇಪವನ್ನು ಇದೀಗ ಚೀನಾ ಪತ್ತೆಹಚ್ಚಿದ್ದು, ಒಂದು ಪ್ರಮುಖ ಆವಿಷ್ಕಾರದಲ್ಲಿ ಎರಡು ಪ್ರಾಂತ್ಯಗಳ ಭೂಮಿಯ ಅಡಿಯಲ್ಲಿ ಇದನ್ನು ಕಂಡುಹಿಡಿದಿರುವುದಾಗಿ ವರದಿಗಳು ಉಲ್ಲೇಖಿಸಿವೆ.
ಹಳದಿ ಲೋಹಕ್ಕೆ ಜಾಗತಿಕವಾಗಿ ಭಾರಿ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಚೀನಾದಲ್ಲಿ ಪತ್ತೆಯಾಗಿರುವ ಬೃಹತ್ ಪ್ರಮಾಣದ ನಿಕ್ಷೇಪ ಸದ್ಯ ಹಲವರ ಹುಬ್ಬೇರಿಸಿದೆ. ದೇಶದ ಎರಡು ಪ್ರಮುಖ ಪ್ರದೇಶಗಳಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪಗಳ ಒಟ್ಟು ಮೌಲ್ಯ ಬರೋಬ್ಬರಿ 300 ಬಿಲಿಯನ್ ಡಾಲರ್ (ಸುಮಾರು 25 ಲಕ್ಷ ಕೋಟಿ ರೂ.ಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ. ಈ ಪೈಕಿ ಒಂದು ನಿಕ್ಷೇಪ ಹುನಾನ್ ಪ್ರಾಂತ್ಯದಲ್ಲಿದ್ದರೆ, ಮತ್ತೊಂದು ಲಿಯಾವೊನಿಂಗ್ ಪ್ರಾಂತ್ಯದ ದಾಡೊಂಗೌ ಪ್ರದೇಶಕ್ಕೆ ಸೇರಿದೆ.
ಚೀನಾದ ಹುನಾನ್ ಭಾಗದ ವಾಂಗು ಪ್ರದೇಶದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪದ ಕುರಿತು 2024ರಲ್ಲಿ ಘೋಷಣೆ ಮಾಡಲಾಗಿತ್ತು. ಆರಂಭದಲ್ಲಿ ಸುಮಾರು 2,000 ಮೀಟರ್ ಆಳದಲ್ಲಿ ನಡೆಸಿದ ಭೂವೈಜ್ಞಾನಿಕ ಪರಿಶೋಧನೆಯಲ್ಲಿ 300 ಟನ್ ಚಿನ್ನ ಪತ್ತೆಯಾಗಿತ್ತು. ನಂತರ ಮತ್ತಷ್ಟು 1,000 ಮೀಟರ್ ಆಳದಲ್ಲಿ ನಡೆಸಿದ ಪರಿಶೋಧನೆಯಿಂದ ಈ ನಿಕ್ಷೇಪದ ಪ್ರಮಾಣ 1,000 ಟನ್ಗೂ ಹೆಚ್ಚಿರಬಹುದು ಎಂಬ ಅಂದಾಜಿಸಲಾಗಿತ್ತು.
ಚೀನಾದ ಅಧಿಕೃತ ಸುದ್ದಿಸಂಸ್ಥೆ ಈ ಪತ್ತೆಯನ್ನು 'ಸೂಪರ್ಜೈಂಟ್' ಚಿನ್ನದ ನಿಕ್ಷೇಪ ಎಂದು ಹೇಳಿತ್ತು. ಈ ಪ್ರದೇಶದ ಬಂಡೆಗಳ ಮಾದರಿಗಳಲ್ಲಿ ಬರಿಗಣ್ಣಿಗೆ ಕಾಣುವ ಚಿನ್ನದ ಕಣಗಳೂ ಪತ್ತೆಯಾಗಿದ್ದವು. ಈ ನಿಕ್ಷೇಪದ ಮೌಲ್ಯವನ್ನು ಆರಂಭದಲ್ಲಿ 600 ಬಿಲಿಯನ್ ಯುವಾನ್ಗೂ ಹೆಚ್ಚು ಎಂದು ಅಂದಾಜಿಸಲಾಗಿತ್ತು. ಅಂದಿನ ಲೆಕ್ಕಾಚಾರದ ಪ್ರಕಾರ ಇದು ಸುಮಾರು 83 ಬಿಲಿಯನ್ ಡಾಲರ್ ಮೌಲ್ಯದ್ದಾಗಿತ್ತು ಎನ್ನಲಾಗಿದೆ.
ಇದೀಗ ಚೀನಾದ ಲಿಯಾವೊನಿಂಗ್ ಪ್ರಾಂತ್ಯದ ದಾಡೊಂಗೌ ಪ್ರದೇಶದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪ ಮತ್ತಷ್ಟು ಕುತೂಹಲ ಮೂಡಿಸಿದೆ. ಇದು ವಾಂಗು ಪ್ರದೇಶದ ನಿಕ್ಷೇಪಕ್ಕಿಂತಲೂ ದೊಡ್ಡದಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಚೀನಾ ಮೈನಿಂಗ್ ಮ್ಯಾಗಜೀನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಪ್ರದೇಶದಲ್ಲಿ ನಡೆಸಿದ ಪ್ರತಿಯೊಂದು ಬೋರ್ಹೋಲ್ ಪರಿಶೋಧನೆಯಲ್ಲೂ ಚಿನ್ನದ ಅಂಶ ಪತ್ತೆಯಾಗಿದೆ.
ಬೀಜಿಂಗ್ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಪನ್ಮೂಲ ಇಂಜಿನಿಯರ್ ಡು ಜಿಯಾ ನೇತೃತ್ವದ ತಂಡ ಈ ಅಧ್ಯಯನ ನಡೆಸಿದೆ. 200ಕ್ಕೂ ಹೆಚ್ಚು ಕೊರೆಯುವ ಬಾವಿಗಳ ದಾಖಲೆಗಳು, ಸ್ಥಳ ಪರಿಶೀಲನೆ ಮತ್ತು ಬಂಡೆಗಳಲ್ಲಿನ ಸ್ಫಟಿಕಗಳ ಸೂಕ್ಷ್ಮ ವಿಶ್ಲೇಷಣೆಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಚಿನ್ನದ ನಿಕ್ಷೇಪಗಳು ಇಳಿಜಾರಿನಲ್ಲಿರುವ ಸ್ಫಟಿಕ ಶಿಲೆಯ ಸ್ತರಗಳಲ್ಲಿ ಕಂಡುಬರುತ್ತವೆ. ಆದರೆ, ದಾಡೊಂಗೌ ಪ್ರದೇಶದಲ್ಲಿ ಚಿನ್ನವು ಫಿಲೈಟ್ ಎಂಬ ಸೂಕ್ಷ್ಮ ಕಣಗಳಿರುವ ರೂಪಾಂತರಿತ ಬಂಡೆಗಳ ಸಮತಟ್ಟಾದ ಪದರಗಳಲ್ಲಿ ಹರಡಿಕೊಂಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇಲ್ಲಿನ ಚಿನ್ನದ ಪ್ರಮಾಣ ಪ್ರತಿ ಟನ್ ಬಂಡೆಯಲ್ಲಿ ಸುಮಾರು 0.3ರಿಂದ 1 ಗ್ರಾಂನಷ್ಟಿದೆ. ಸರಾಸರಿ ಪ್ರಮಾಣ 0.56 ಗ್ರಾಂ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಚಿನ್ನವನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಶೇ.65ರಿಂದ ಶೇ.91ರಷ್ಟು ಚಿನ್ನವನ್ನು ಮರುಪಡೆಯುವ ಸಾಧ್ಯತೆಯಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಸಂಶೋಧಕರ ಪ್ರಕಾರ, ಈ ಚಿನ್ನದ ನಿಕ್ಷೇಪ ಒಂದೇ ಹಂತದಲ್ಲಿ ರೂಪುಗೊಂಡಿಲ್ಲ. ಭೂಮಿಯ ಹೊರಪದರದಲ್ಲಿ ಒತ್ತಡದ ಸ್ವರೂಪ ಬದಲಾಗುತ್ತಿದ್ದ ಆರಂಭಿಕ ಕ್ರಿಟೇಷಿಯಸ್ ಯುಗದಲ್ಲಿ ಇದರ ಪ್ರಮುಖ ರಚನೆ ಸಂಭವಿಸಿರಬಹುದು. ಟಾನ್-ಲು ಫಾಲ್ಟ್ (Tan-Lu Fault) ಎಂಬ ಭೂವೈಜ್ಞಾನಿಕ ಬಿರುಕು ಪ್ರದೇಶದ ಚಲನೆಯೂ ಚಿನ್ನದ ನಿಕ್ಷೇಪಗಳಿರುವ ಸಮತಟ್ಟಾದ ಪದರಗಳ ರಚನೆಗೆ ಕಾರಣವಾಗಿರಬಹುದು ಎಂದು ಅಧ್ಯಯನ ಹೇಳಿದೆ.
ಜ್ವಾಲಾಮುಖಿ ಚಟುವಟಿಕೆ ಅಥವಾ ಒಂದೇ ಗ್ರಾನೈಟ್ ಶಿಲೆಯ ಒಳನುಗ್ಗುವಿಕೆಯಿಂದ ಈ ನಿಕ್ಷೇಪ ರೂಪುಗೊಂಡಿಲ್ಲ. ಆದರೆ, ಭೂಗರ್ಭದಲ್ಲಿನ ಮ್ಯಾಗ್ಮಾದ ಶಾಖ ಇದರಲ್ಲಿ ಪಾತ್ರ ವಹಿಸಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಕಂಡುಬರುವ ಚಿನ್ನದ ನಿಕ್ಷೇಪಗಳಿಗಿಂತ ಭಿನ್ನವಾದ ಭೂವೈಜ್ಞಾನಿಕ ರಚನೆ ಇರುವುದರಿಂದ ಇಂತಹ ಪ್ರದೇಶಗಳನ್ನು ಈ ಹಿಂದೆ ಸಂಶೋಧಕರು ಗಮನಿಸದೇ ಹೋಗಿರುವ ಸಾಧ್ಯತೆಯಿದೆ ಎಂದು ಅಧ್ಯಯನ ಸೂಚಿಸಿದೆ. ಪೆಸಿಫಿಕ್ ಸಾಗರದ ಸುತ್ತಮುತ್ತಲಿನ ಪ್ರದೇಶಗಳು, ಜಿಯಾಡೊಂಗ್ ಪರ್ಯಾಯ ದ್ವೀಪ, ಅಲಾಸ್ಕಾ ಮತ್ತು ರಷ್ಯಾದ ದೂರಪ್ರಾಚ್ಯ ಭಾಗಗಳಲ್ಲೂ ಭೂಮಿಯ ಹೊರಪದರದ ಚಲನೆಯಿಂದ ಇಂತಹ ನಿಕ್ಷೇಪಗಳು ರೂಪುಗೊಂಡಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ವಾಂಗು ಮತ್ತು ದಾಡೊಂಗೌ ಪ್ರದೇಶಗಳಲ್ಲಿನ ಚಿನ್ನದ ನಿಕ್ಷೇಪಗಳು ಚೀನಾದ ಖನಿಜ ಸಂಪತ್ತಿನ ಬಗ್ಗೆ ಹೊಸ ನಿರೀಕ್ಷೆ ಮೂಡಿಸಿವೆ. ಈ ಎರಡೂ ಪ್ರದೇಶಗಳ ಚಿನ್ನದ ಒಟ್ಟು ಮೌಲ್ಯವನ್ನು ಪ್ರಸ್ತುತ ಬೆಲೆಗಳ ಆಧಾರದಲ್ಲಿ ಸುಮಾರು 300 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನವನ್ನು ವಾಣಿಜ್ಯಿಕವಾಗಿ ಹೊರತೆಗೆಯಲು ಸಾಧ್ಯವೇ ಎಂಬುದನ್ನು ಮುಂದಿನ ಪರಿಶೋಧನೆ ಮತ್ತು ಗಣಿಗಾರಿಕೆ ಪ್ರಕ್ರಿಯೆಗಳು ನಿರ್ಧರಿಸಲಿವೆ,(ಏಜೆನ್ಸೀಸ್).