ಒಂಡೊ: ಸೋಮವಾರ (ಅ.5) ಬೆನಿನ್ ನಗರದಿಂದ ಲಾವೋಸ್ನತ್ತ ಹಾರಾಟ ಬೆಳೆಸಿದ್ದ ನೈಜೀರಿಯಾದ ಮಿಲಿಟರಿ ವಿಮಾನವೊಂದು ಪತನವಾದ ಕಾರಣ 25 ಜನ ಪ್ರಯಾಣಿಕರು ಹಾಗೂ 7 ಜನ ಕ್ಯಾಬಿನ್ ಕ್ರೂ ಸದಸ್ಯರು ಸೇರಿದಂತೆ ಒಟ್ಟು 32 ಜನ ದುರ್ಮರಣ ಹೊಂದಿರುವುದಾಗಿ ವರದಿಯಾಗಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ನೈಜೀರಿಯಾ ಅಧ್ಯಕ್ಷ ಬೊಲಾ ತಿನುಬು (Bola Tinubu), ಈ ಅಪಘಾತದಲ್ಲಿ ನಮ್ಮ ದುಃಖ ಹೊರತು ಮತ್ತ್ಯಾರು ಬದುಕಿಲ್ಲ ಎಂದು ಸಂತಾಪ ಸೂಚಿಸಿದ್ದಾರೆ. ಹಾಗೆಯೇ, ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೇಳಿಕೊಳ್ಳುತ್ತೆನೆಂದು ಅಧ್ಯಕ್ಷರು ಹೇಳಿದ್ದಾರೆ.
ನೈಜೀರಿಯಾದ ವಾಯುಪಡೆಗೆ ಸೇರಿದ್ದ ATR-42 ಎಂಬ ಸೇನಾ ವಿಮಾನ, ಸೋಮವಾರ ಎಂದಿನಂತೆ, ಬೆನಿನ್ ನಗರದಿಂದ ಲಾವೋಸ್ನತ್ತ ಪ್ರಯಾಣ ಆರಂಭಿಸಿತ್ತು. ಆದರೆ, ಬೆಳಿಗ್ಗೆ 8 ಗಂಟೆ ಸಮಯಕ್ಕೆ ಏವಿಯೇಷನ್ ಟ್ರಾಫಿಕ್ನ ಸಂಪರ್ಕ ಕಳೆದುಕೊಂಡಿದೆ. ನಂತರ ಈ ವಿಮಾನ ಪತನವಾಗಿದೆ ಎಂದು ನೈಜೀರಿಯಾದ ವಿಮಾನಯಾನ ಸಚಿವ, ಫೆಸ್ಟಸ್ ಕೆಯಾಮೊ (Festus Keyamo) ತಿಳಿಸಿದ್ದಾರೆ. ಈ ವಿಮಾನ ದುರ್ಘಟನೆಯು ನೈಜೀರಿಯಾದಲ್ಲಿ ನಡೆದಿರುವ ಅತ್ಯಂತ ದೊಡ್ಡಮಟ್ಟದ ದುರ್ಘಟನೆಯಾಗಿದೆ ಎಂದು ಸಚಿವರು ಬಣ್ಣಿಸಿದ್ದು, ಇದು ನಮ್ಮ ಪಾಲಿಗೆ ಕರಾಳ ದಿನವಾಗಿದೆ ಎಂದು ಹೇಳಿದ್ದಾರೆ.
ಬೆನಿನ್ ನಗರದಿಂದ ಲಾವೋಸ್ನತ್ತ ಹಾರಾಟ ಆರಂಭಿಸಿದ ಈ ಸೇನಾ ವಿಮಾನ, ಇಗ್ಬೊಕೊಡಾದ ಕಡಲ ತೀರದಲ್ಲಿ ಪತನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯಿಂದ ನೈಜೀರಿಯಾದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಅಧ್ಯಕ್ಷ ಬೊಲಾ ತಿನುಬು, ಈ ಅಪಘಾತ ಸಂಭವಿಸಲು ಕಾರಣವೇನು? ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತೆ? ನಮಗೆ ಸರಿಯಾದ ಸಮಯಕ್ಕೆ ಸಿಗ್ನಲ್ ಏಕೆ ದೊರೆಯಲಿಲ್ಲ? ಅಥವಾ ಇದರಲ್ಲಿ ಬೇರೆ ಏನಾದರೂ ಕಾರಣವಿದೆಯೇ? ಎಂದು ತಿಳಿದುಕೊಳ್ಳಲು ವಾಯುಪಡೆಗೆ ಸ್ವತಂತ್ರ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆಂದು ಹೇಳಲಾಗಿದೆ, (ಏಜೆನ್ಸೀಸ್).