‘ಗಾಜಾ ಪ್ರತೀಕಾರ’ಕ್ಕೆ ವಿಮಾನ ಹೈಜಾಕ್! ಫ್ಲೈದುಬೈ ಸಹ ಪೈಲಟ್ ಅಲ್​-ಹಮ್ಮಾಮಿ ಬಾಯ್ಬಿಟ್ಟ ಶಾಕಿಂಗ್ ಸತ್ಯ ಇಲ್ಲಿದೆ | Al Hammami

ಗಾಜಾ ಪ್ರತೀಕಾರಕ್ಕೆ ವಿಮಾನ ಹೈಜಾಕ್‌ಗೆ ಯತ್ನಿಸಿದ್ದ ಫ್ಲೈದುಬೈ ಸಹ ಪೈಲಟ್ ಅಲ್​-ಹಮ್ಮಾಮಿ ಬಾಯ್ಬಿಟ್ಟ ಶಾಕಿಂಗ್ ಸತ್ಯ! ವಿಮಾನಯಾನ ಭದ್ರತೆಗೆ ಎದುರಾದ ಆಘಾತಕಾರಿ ಸಂಚಿನ ಸಂಪೂರ್ಣ ವಿವರ ಇಲ್ಲಿದೆ.
Flydubai co-pilot Al-Hammami accused of plotting to hijack a plane.
ವಿಮಾನ ಹೈಜಾಕ್ ಸಂಚಿನ ಆರೋಪ ಹೊತ್ತ ಫ್ಲೈದುಬೈ ಸಹ ಪೈಲಟ್ ಅಲ್​-ಹಮ್ಮಾಮಿ
Published on: 

ಯುಎಇ: ದುಬೈನಿಂದ ಟೇಲ್​ ಅವೀವ್​ಗೆ ಪ್ರಯಾಣ ಬೆಳೆಸಿದ್ದ ಫ್ಲೈದುಬೈ ವಿಮಾದಲ್ಲಿ ನಡೆದ ಘಟನೆ ಈಗ ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಗುರಿಯಾಗಿದೆ. ವಿಮಾನದ ಪೈಲಟ್​ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​ ಮೇಲೆ ಮಾರಣಾಂತಿಕ ದಾಳಿ ನಡೆಸಿ ವಿಮಾವನ್ನು ಪತನಗೊಳಿಸಲು ಮುಂದಾಗಿದ್ದ ಸಹ ಪೈಲಟ್​, ಹಮಾನ್​ ಅಲ್​-ಹಮ್ಮಾಮಿಯ ವಿಚಾರಣೆ ಮುಂದುವರಿದಿದೆ.

ಸದ್ಯ ಯುಎಇ ತನಿಖಾ ಸಂಸ್ಥೆಗಳಿಂದ ತೀವ್ರ ವಿಚಾರಣೆಗೆ ಒಳಗಾಗಿರುವ ಹಮ್ಮಾಮಿ, ತಾನೇಕೆ ವಿಮಾನವನ್ನು ಪತನಮಾಡ ಬಯಸಿದ್ದೆ ಎಂಬ ರಹಸ್ಯ ಹಾಗೂ ಶಾಕಿಂಗ್​ ಸತ್ಯವನ್ನು ಬಾಯ್ಬಿಟ್ಟಿದ್ದಾನೆಂದು ಕೆಲ ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

https://www.mako.co.il/travel-news/international/Article-430d0394d1201a1027.htm?utm_source=copy_link&utm_medium=share&utm_campaign=mako_article

ಗಾಜಾ ಜನರ ಪ್ರತೀಕಾರ!

ಇಸ್ರೇಲಿ ನ್ಯೂಸ್​ ಪೋರ್ಟ್​ಲ್​ ಮಾಕೊ ವರದಿ ಮಾಡಿರುವಂತೆ, ಕೆಲ ದಿನಗಳಿಂದ ಯುಎಇ ತನಿಖಾಧಿಕಾರಿಗಳು, ಬಂಧಿತ ಆರೋಪಿ ಅಲ್​​-ಹಮ್ಮಾಮಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇಸ್ರೇಲ್​ಗೆ ಬರುತ್ತಿದ್ದ, ಅದರಲ್ಲೂ ಯಹೂದಿಗಳೇ ಅತ್ಯಧಿಕವಾಗಿ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ಏಕೆ ಹೈಜಾಕ್​ ಮಾಡಲು ಮುಂದಾದೆ ಎಂದು ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ.

ಇಸ್ರೇಲ್​ ಗಾಜಾ ಪ್ರದೇಶದಲ್ಲಿ, ಅಲ್ಲಿಯ ಜನರ ಮೇಲೆ ಅತ್ಯಾಚಾರ, ಅನಾಚಾರವನ್ನು ನಡೆಸುತ್ತಿದೆ. ತನಗೆ ಮನಸ್ಸು ಬಂದಾಗ ಗಾಜಾ ಮೇಲೆ ಡ್ರೋನ್​, ಮಿಸೈಲ್​ ದಾಳಿ ನಡೆಸುತ್ತದೆ. ಇದರ ಪ್ರತೀಕಾರಕ್ಕಾಗಿ ನಾನು ಈ ಫ್ಲೈದುಬೈ ವಿಮಾನವನ್ನು ಹೈಜಾಕ್​ ಮಾಡಿ, ಪತನಗೊಳಿಸಲು ಮುಂದಾಗಿದ್ದೆ ಎಂದು ಅಲ್​-ಹಮ್ಮಾಮಿ ತಿಳಿಸಿದ್ದಾನೆಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ.

Also Read
ಪತ್ರಕರ್ತೆ ಮೇಲೆ ಲೈಂಗಿಕ ಕಿರುಕುಳ ಆರೋಪ; ತನಿಖೆ ನಡೆಯುತ್ತಿರುವಾಗಲೇ ACP ವಿವೇಕ್ ಭಗತ್‌ಗೆ ಬಡ್ತಿ! ACP Vivek Bhagat
Flydubai co-pilot Al-Hammami accused of plotting to hijack a plane.

ಫ್ಲೈದುಬೈ ವಿಮಾನದಲ್ಲಿ ನಡೆದಿದ್ದೇನು?

ಸಪ್ಟೆಂಬರ್​ 30 ರಂದು ವಿಮಾನ ಸಂಖ್ಯೆ FZ 1073 ಫ್ಲೈದುಬೈ ವಿಮಾನ ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣ ಬೆಳೆಸಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ವಿಮಾನ ಇಸ್ರೇಲ್​ ಅನ್ನು ಪ್ರವೇಶಿಸುತ್ತದೆ ಎನ್ನುವಾಗ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಇದ್ದಕ್ಕಿದ್ದಂತೆ ತನ್ನ ವಿಕೃತ ಬುದ್ಧಿ ತೋರಿಸಿದ್ದಾನೆ. ಕಾಕ್‌ಪಿಟ್ ಒಳಗೆ ತುರ್ತು ಸಂದರ್ಭದಲ್ಲಿ ಬಳಸುವ 'ಕ್ರಾಶ್ ಆಕ್ಸ್' (ಕೊಡಲಿ) ತೆಗೆದುಕೊಂಡು, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಸಹ-ಪೈಲಟ್‌ನ ಈ ಹಠಾತ್ ದಾಳಿಯಿಂದ ಕ್ಯಾಪ್ಟನ್ ಮಚ್ಚಾರ್ ಒಂದು ಕ್ಷಣ ಬೆಚ್ಚಿಬಿದ್ದಿದ್ದು ಹಲ್ಲೆಯ ರಭಸಕ್ಕೆ ಕಾಕ್‌ಪಿಟ್‌ನಿಂದ ಹೊರಬಿದ್ದರೂ, ಸಾಹಸ ಮಾಡಿ ಮತ್ತೆ ಕಾಕ್‌ಪಿಟ್‌ಗೆ ನುಗ್ಗಿ ವಿಮಾನದ ನಿಯಂತ್ರಣ ತಪ್ಪದಂತೆ ತಡೆದು, ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಬೋಯಿಂಗ್ 737 ವಿಮಾನ ಕೇವಲ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಸುಮಾರು 14,000 ಅಡಿಗಳಷ್ಟು ಆಕಾಶದಿಂದ ಕೆಳಗೆ ಕುಸಿತಕಂಡಿದೆ.

ನಂತರ ಪ್ರಯಾಣಿಕರ ಸಹಾಯದಿಂದ ಆ ದುಷ್ಟ ಸಹ-ಪೈಲಟ್‌ನನ್ನು ಕಟ್ಟಿಹಾಕಲಾಯಿತು. ಅದೃಷ್ಟವಶಾತ್ ಅದೇ ವಿಮಾನದಲ್ಲಿದ್ದ ಇತರೆ ಪೈಲಟ್‌ಗಳ ತಂಡವು ಮುಂದೆ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿತು. ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಮಯೋಚಿತ ಜಾಣ್ಮೆಯಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಿತ್ತು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net