ಮಧ್ಯಪ್ರಾಚ್ಯ ಯುದ್ಧ: ಕದನ ವಿರಾಮ ಈಗ ಅರ್ಥಹೀನ ಎಂದ ಇರಾನ್! ಯುಎಸ್ ದಾಳಿಯ ಬೆನ್ನಲ್ಲೇ ಜೋರ್ಡಾನ್‌ನ ವಾಯುನೆಲೆ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!
ಟೆಹ್ರಾನ್: ಇರಾನ್ ಮೇಲಿನ ಅಮೆರಿಕದ ಸರಣಿ ವೈಮಾನಿಕ ದಾಳಿಗಳ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾ ಯುದ್ಧದ ಭೀತಿ ಎದುರಾಗಿದೆ. ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಅಮೆರಿಕ ಸೇನೆ ಭೀಕರ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಏಪ್ರಿಲ್ 8 ರಂದು ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವು ಸಂಪೂರ್ಣ ಅರ್ಥಹೀನವಾಗಿದೆ ಎಂದು ಇರಾನ್(Iran Strikes Jordan Air Base) ವಿದೇಶಾಂಗ ಸಚಿವಾಲಯ ಗುರುವಾರ (ಜೂ,11) ಘೋಷಿಸಿದೆ. ಅಷ್ಟೇ ಅಲ್ಲದೆ, ಈ ಅಪಾಯಕಾರಿ ಬೆಳವಣಿಗೆಯ ಭೀಕರ ಪರಿಣಾಮಗಳಿಗೆ ನೇರವಾಗಿ ವಾಷಿಂಗ್ಟನ್ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಇರಾನ್ ತೀವ್ರ ಎಚ್ಚರಿಕೆ ನೀಡಿದೆ.
ಮತ್ತೊಂದೆಡೆ, ಅಮೆರಿಕದ ಈ ದುಸ್ಸಾಹಸಕ್ಕೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕೇವಲ ಕೆಲವೇ ಗಂಟೆಗಳಲ್ಲಿ ಪ್ರತಿಯಾಗಿ ಭೀಕರ ಕ್ಷಿಪಣಿ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತುತ್ತತುದಿಗೆ ತಲುಪಿದ್ದು, ಜಾಗತಿಕ ತೈಲ ಮಾರುಕಟ್ಟೆ ಹಾಗೂ ವಿಶ್ವದ ಶಾಂತಿಗೆ ಧಕ್ಕೆ ಉಂಟಾಗಿದೆ.
ಅಮೆರಿಕದ ಕಮಾಂಡ್ ಸೆಂಟರ್ ಮೇಲೆ ಇರಾನ್‌ನ 12 ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ!
ಅಮೆರಿಕದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್‌ನ ಸೇನಾ ಪಡೆಗಳು ಜೋರ್ಡಾನ್‌ನಲ್ಲಿರುವ ಅಮೆರಿಕದ ಪ್ರಮುಖ ಸೇನಾ ಕಮಾಂಡ್ ಸೆಂಟರ್ ಮೇಲೆ ಭೀಕರ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಳೆಗರೆದಿವೆ. ಇರಾನ್‌ನ ಸರ್ಕಾರಿ ಮಾಧ್ಯಮಗಳು ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಜೋರ್ಡಾನ್‌ನ ಅಲ್-ಅಜ್ರಾಕ್ ವಾಯುನೆಲೆ ಮತ್ತು ಅದರ ನಿಯಂತ್ರಣ ಕೊಠಡಿಯೇ ನಮ್ಮ ಮುಖ್ಯ ಗುರಿಯಾಗಿತ್ತು ಎಂದು ಇರಾನ್ ಹೇಳಿದೆ.
ಆಕ್ರಮಣಕಾರರ ವಿರುದ್ಧ ನಡೆಸಿದ ದಂಡನಾತ್ಮಕ ಕಾರ್ಯಾಚರಣೆ ಇದಾಗಿದೆ ಎಂದು ಇರಾನ್‌ನ ತಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಈ ಭೀಕರ ಕಾರ್ಯಾಚರಣೆಯಲ್ಲಿ ಇರಾನ್ ಒಟ್ಟು 12 ಅತ್ಯಾಧುನಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿದೆ. ಈ ದಾಳಿಯಿಂದಾಗಿ ಅಮೆರಿಕದ ವಾಯುನೆಲೆಯ ನಿಯಂತ್ರಣ ಕೇಂದ್ರ ಸೇರಿದಂತೆ ಅಲ್ಲಿ ನಿಲ್ಲಿಸಲಾಗಿದ್ದ ಭಾರಿ ಸಂಖ್ಯೆಯ ಯುದ್ಧ ವಿಮಾನಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಇರಾನ್ ಸೇನೆ ಪ್ರತಿಪಾದಿಸಿದೆ.
ಅಮೆರಿಕಕ್ಕೆ ಜಾಗ ಕೊಟ್ಟರೆ ನಿಮಗೂ ಗಂಡಾಂತರ: ನೆರೆ ರಾಷ್ಟ್ರಗಳಿಗೆ ಇರಾನ್ ವಾರ್ನಿಂಗ್!
ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಇರಾನ್ ವಿದೇಶಾಂಗ ಸಚಿವಾಲಯ ಜಾಗತಿಕ ಸಮುದಾಯಕ್ಕೆ ಮತ್ತು ತನ್ನ ನೆರೆಹೊರೆಯ ಮುಸ್ಲಿಂ ರಾಷ್ಟ್ರಗಳಿಗೆ ಕಠಿಣ ಸಂದೇಶ ರವಾನಿಸಿದೆ. ಯಾವ ದೇಶವಾದರೂ ತನ್ನ ಭೂಪ್ರದೇಶವನ್ನು ಅಥವಾ ತನ್ನ ಮಿಲಿಟರಿ ನೆಲೆಗಳನ್ನು ಇರಾನ್ ಮೇಲೆ ದಾಳಿ ಮಾಡಲು ಅಮೆರಿಕಕ್ಕೆ ಬಳಸಿಕೊಳ್ಳಲು ಬಿಟ್ಟುಕೊಟ್ಟರೆ, ಆ ದೇಶವನ್ನು ನಾವು ಅಮೆರಿಕದ ಪಾಲುದಾರ ಮತ್ತು ದಾಳಿಕೋರ ಎಂದೇ ಪರಿಗಣಿಸುತ್ತೇವೆ ಎಂದು ಇರಾನ್ ನೇರವಾಗಿ ಎಚ್ಚರಿಸಿದೆ. ಇರಾನ್‌ನ ಈ ಹೇಳಿಕೆಯು ಇಡೀ ಮಧ್ಯಪ್ರಾಚ್ಯದ ಇತರ ದೇಶಗಳನ್ನೂ ಈ ಯುದ್ಧದ ಸುಳಿಗೆ ಸಿಲುಕಿಸುವ ಮುನ್ಸೂಚನೆ ನೀಡಿದೆ.
ಮತ್ತೊಂದೆಡೆ, ಅಮೆರಿಕದ ಸೆಂಟ್ರಲ್ ಕಮಾಂಡ್ ಈ ವೈಮಾನಿಕ ದಾಳಿಯನ್ನು ಸಮರ್ಥಿಸಿಕೊಂಡಿದ್ದು, ಇರಾನ್‌ನ ನೆಲೆಗಳ ಮೇಲೆ ನಡೆಸಿರುವುದು ಅಧ್ಯಕ್ಷ ಟ್ರಂಪ್ ಅವರ ಆದೇಶದ ಮೇರೆಗಿನ ಸ್ವಯಂ ರಕ್ಷಣೆಗಾಗಿ ನಡೆಸಿದ ದಾಳಿ ಎಂದು ಬಣ್ಣಿಸಿದೆ. ಇರಾನ್ ನಮ್ಮ ನಿಯಮ ಹಾಗೂ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಹೊಸ ಒಪ್ಪಂದ ಸಾಧ್ಯ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರಾದರೂ, ಇರಾನ್ ಮಾತ್ರ ಈಗ ಯುದ್ಧದ ಹಾದಿ ಹಿಡಿದಿದೆ,(ಏಜೆನ್ಸೀಸ್).