ಭಾರತೀಯ ಐಟಿ ಕಂಪನಿಗಳಿಗೆ ಟ್ರಂಪ್​ ಬಿಗ್​ ಶಾಕ್! ಇನ್ಫೋಸಿಸ್​, ಟಿಸಿಎಸ್​, ವಿಪ್ರೋ, ಎಚ್​ಸಿಎಲ್​ಗೆ PERM ನಿರ್ಬಂಧ |US Visa  
ವಿದೇಶ

ಭಾರತೀಯ ಐಟಿ ಕಂಪನಿಗಳಿಗೆ ಟ್ರಂಪ್​ ಬಿಗ್​ ಶಾಕ್! ಇನ್ಫೋಸಿಸ್​, ಟಿಸಿಎಸ್​, ವಿಪ್ರೋ, ಎಚ್​ಸಿಎಲ್​ಗೆ PERM ನಿರ್ಬಂಧ | US Visa

ಅಮೆರಿಕದ ಕಾರ್ಮಿಕ ಇಲಾಖೆ ಹೊಸದಾಗಿ PERM ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಮತ್ತು ಈ ಕಂಪನಿಗಳಿಗೆ ಸಂಬಂಧಿಸಿದ ಬಾಕಿ ಇರುವ ಅರ್ಜಿಗಳನ್ನೂ ಪ್ರಕ್ರಿಯೆಗೊಳಿಸುವುದಿಲ್ಲ ಎಂದು ಕಾರ್ಮಿಕ ಸಚಿವ ಕೀತ್ ಸೊಂಡರ್ಲಿಂಗ್ ಸ್ಪಷ್ಟಪಡಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆಡಳಿತವು ವಿದೇಶಿ ಉದ್ಯೋಗಿಗಳಿಗೆ ಗ್ರೀನ್‌ಕಾರ್ಡ್ ಪಡೆಯುವ ಪ್ರಕ್ರಿಯೆಯ ಪ್ರಮುಖ ಹಂತವಾದ PERM (Permanent Labour Certification) ಕಾರ್ಯಕ್ರಮದಿಂದ ಇದೀಗ ಭಾರತೀಯ ಹೆಸರಾಂತ ಟೆಕ್​ ಕಂಪನಿಗಳಿಗೆ ನಿರ್ಬಂಧ ಹೇರಿದೆ.

ಎಚ್​-1 ಬಿ ವೀಸಾದ ಗ್ರೀನ್​ ಕಾರ್ಡ್ ಯೋಜನೆಯಿಂದ ಅಡೋಬ್​, ಕಾಗ್ನಿಜೆಂಟ್​, ಇನ್ಫೋಸಿಸ್​, ಟಾಟಾ, ವಿಪ್ರೋ, ಎಚ್​ಸಿಎಲ್​ ಮತ್ತು ಕೇಪ್​ಜೆಮಿನಿ ಸೇರಿದಂತೆ ಹಲವು ಪ್ರಮುಖ ಐಟಿ ಕಂಪನಿಗಳನ್ನು ಪಟ್ಟಿಯಿಂದ ಅಮಾನತುಗೊಳಿಸಿದೆ. ಅಮೆರಿಕದ ಕಾರ್ಮಿಕ ಇಲಾಖೆ ಹೊಸದಾಗಿ PERM ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಮತ್ತು ಈ ಕಂಪನಿಗಳಿಗೆ ಸಂಬಂಧಿಸಿದ ಬಾಕಿ ಇರುವ ಅರ್ಜಿಗಳನ್ನೂ ಪ್ರಕ್ರಿಯೆಗೊಳಿಸುವುದಿಲ್ಲ ಎಂದು ಕಾರ್ಮಿಕ ಸಚಿವ ಕೀತ್ ಸೊಂಡರ್ಲಿಂಗ್ ಸ್ಪಷ್ಟಪಡಿಸಿದ್ದಾರೆ.

ವಿದೇಶಿ ಉದ್ಯೋಗಿಗಳ ನೇಮಕಾತಿ ವ್ಯವಸ್ಥೆಯಲ್ಲಿ ಅಕ್ರಮ ಮತ್ತು ದುರುಪಯೋಗ ನಡೆದಿದೆ ಎಂಬ ಆರೋಪಗಳನ್ನು ಅಮೆರಿಕ ಆಡಳಿತ ಮಾಡಿದ್ದು, ಮೈಕ್ರೋಸಾಫ್ಟ್​ ಸಂಸ್ಥೆಯು ಸಾವಿರಾರು ಯುಎಸ್​ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಜೆಡಿ ವ್ಯಾನ್ಸ್ ಗಂಭೀರವಾಗಿ ಆರೋಪಿಸಿದ್ದಾರೆ.

H-1B ವೀಸಾ ರದ್ದಾಗುತ್ತಾ?

ಈ ಕ್ರಮದಿಂದ ಎಚ್​-1ಬಿ ವೀಸಾಗಳು ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. PERM ಎನ್ನುವುದು ಉದ್ಯೋಗ ಆಧಾರಿತ ಗ್ರೀನ್‌ಕಾರ್ಡ್ ಪಡೆಯುವ ಪ್ರಮುಖ ಹಂತವಾಗಿದ್ದು, ಇದೀಗ ಪರಿಣಾಮ ಬೀರುವುದು ಮುಖ್ಯವಾಗಿ ಗ್ರೀನ್‌ಕಾರ್ಡ್ ಪ್ರಕ್ರಿಯೆಯ ಮೇಲೆ ಮಾತ್ರ ಎಂಬುದು ಇಲ್ಲಿ ಗಮನಾರ್ಹ.

ಭಾರತೀಯ ಉದ್ಯೋಗಿಗಳಿಗೆ ಏಕೆ?

ಈಗಾಗಲೇ ಹಲವು ಭಾರತೀಯ ಐಟಿ ಸಂಸ್ಥೆಗಳು ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ನೆಲೆಯೂರಿದೆ. ಹೀಗಾಗಿ ಈ ನಿರ್ಧಾರವು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಅಥವಾ ಉದ್ಯೋಗದ ಮೂಲಕ ಗ್ರೀನ್‌ಕಾರ್ಡ್ ಪಡೆಯಲು ಮುಂದಾಗಿರುವ ಭಾರತೀಯ ಟೆಕ್ ಉದ್ಯೋಗಿಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಏನಿದು ಪರ್ಮ್ (PERM) ಪ್ರಕ್ರಿಯೆ?

ಪರ್ಮ್ ಎಂಬುದು ಅಮೆರಿಕದ ಕಾರ್ಮಿಕ ಇಲಾಖೆಯ (US Department of Labour) ಒಂದು ಅಧಿಕೃತ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಅಮೆರಿಕದ ಉದ್ಯೋಗದಾತರು ವಿದೇಶಿ ಉದ್ಯೋಗಿಗಳನ್ನು ಶಾಶ್ವತವಾಗಿ ಕೆಲಸಕ್ಕೆ ನೇಮಿಸಿಕೊಳ್ಳಲು ಪ್ರಮಾಣಪತ್ರವನ್ನು ಪಡೆಯಬಹುದು. ಈ ಪ್ರಕ್ರಿಯೆ ಅಡಿಯಲ್ಲಿ, ಆ ನಿರ್ದಿಷ್ಟ ಕೆಲಸಕ್ಕೆ ಅರ್ಹರಾದ, ಉದ್ಯೋಗ ಪಡೆಯಲು ಸಿದ್ಧರಿರುವ ಅಥವಾ ಲಭ್ಯವಿರುವ ಅಮೆರಿಕದ ನಾಗರಿಕರು ಸಿಗುತ್ತಿಲ್ಲ ಹಾಗೂ ವಿದೇಶಿ ಉದ್ಯೋಗಿಯನ್ನು ನೇಮಿಸಿಕೊಳ್ಳುವುದರಿಂದ ಅಲ್ಲಿನ ಸ್ಥಳೀಯ ಕಾರ್ಮಿಕರ ವೇತನ ಮತ್ತು ಕೆಲಸದ ವಾತಾವರಣದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕಂಪನಿಗಳು ಸಾಬೀತುಪಡಿಸಬೇಕಾಗುತ್ತದೆ.

ಕಾರ್ಮಿಕ ಇಲಾಖೆಯು ಈ ಪ್ರಮಾಣಪತ್ರವನ್ನು ಅನುಮೋದಿಸಿದ ನಂತರ, ಉದ್ಯೋಗದಾತ ಕಂಪನಿಯು 'Form I-140' ಮೂಲಕ ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳಿಗೆ ಇಮಿಗ್ರೆಂಟ್ ಅರ್ಜಿ ಸಲ್ಲಿಸಬಹುದು. H-1B ವೀಸಾ ಹೊಂದಿರುವ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿ ಪರ್ಮ್​ ಅತ್ಯಂತ ಪ್ರಮುಖ ಹಂತವಾಗಿದೆ. ಒಂದು ವೇಳೆ ಯಾವುದೇ ಕಂಪನಿಗೆ ಈ ಪ್ರೋಗ್ರಾಂ ಬಳಸದಂತೆ ತಡೆ ನೀಡಿದರೆ, ಆ ಕಂಪನಿಯು ತನ್ನ ವಿದೇಶಿ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪ್ರಾಯೋಜಿಸುವುದು ಕಷ್ಟಸಾಧ್ಯ,(ಏಜೆನ್ಸೀಸ್).