ಅಮೆರಿಕದ ನಿರ್ಧಾರವನ್ನು ಸ್ವಾಗತಿಸಿದ ಭಾರತದ ವಿದೇಶಾಂಗ ಸಚಿವಾಲಯ
- ಮಧ್ಯಪ್ರಾಚ್ಯದಲ್ಲಿ ತಾತ್ಕಾಲಿಕ ಶಾಂತಿ ಸ್ಥಾಪನೆ
- 14 ದಿನಗಳ ಕದನ ವಿರಾಮ ಘೊಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಅಮೆರಿಕದ ನಿರ್ಧಾರವನ್ನು ಸ್ವಾಗತಿಸಿದ ಭಾರತದ ವಿದೇಶಾಂಗ ಸಚಿವಾಲಯ
ಭಾರತ: ಕಳೆದೊಂದು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ಈಗ ತಾತ್ಕಾಲಿಕ ತಡೆಯ ರೀತಿಯಲ್ಲಿ ಅಮೆರಿಕಾ 14 ದಿನಗಳ ಕದನ ವಿರಾಮವನ್ನು ಘೋಷಿಸಿದೆ. ಈ ಕದನ ವಿರಾಮವನ್ನು ಇರಾನ್ ಕೂಡ ಒಪ್ಪಿಕೊಂಡಿದ್ದು, ಶಾಶ್ವತ ಯುದ್ಧ ವಿರಾಮಕ್ಕೆ ತನ್ನದೇ ಆದ ಕೆಲ ಷರತ್ತುಗಳನ್ನು ಅಮೆರಿಕ ಮುಂದಿಟ್ಟಿದೆ.
ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ಈಗ ಈ ಕದನ ವಿರಾಮದ ಕುರಿತು ಭಾರತ ಸಹ ತನ್ನ ಪ್ರತಿಕ್ರಿಯೆ ನೀಡಿದ್ದು, ನಾವು (ಭಾರತ) ಈ ಕದನ ವಿರಾಮವನ್ನು ಸ್ವಾಗತಿಸುತ್ತೇವೆ ಮತ್ತು ಇದು ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿಗೆ ಕಾರಣವಾಗುತ್ತದೆ ಎಂದು ನಾವು ಆಶಿಸುತ್ತೇವೆ. ನಾವು ಈ ಮೊದಲು ಹೇಳಿದಂತೆ ಉದ್ವಿಗ್ನತೆ ನಿವಾರಣೆಗಾಗಿ ಸಂವಾದ ಮತ್ತು ರಾಜತಾಂತ್ರಿಕ ಮಾರ್ಗವನ್ನು ಪಾಲಿಸಿ ಎಂದು ಕೇಳಿಕೊಳ್ಳತ್ತೇವೆ ಎಂದು ವಿದೇಶಾಂಗ ಸಚಿವಾಲಯ (MEA on Ceasefire in Middle East) ಎಕ್ಸ್ (ಟ್ವಿಟರ್) ನಲ್ಲಿ ತಿಳಿಸಿದೆ.
ಈ ಸಂಘರ್ಷವು ಅಪರಾ ಜನರ ಸಾವು-ನೋವಿಗೆ ಕಾರಣವಾಗಿದೆ ಹಾಗೆಯೇ ಜಾಗತಿಕ ಇಂಧನ ಪೂರೈಕೆ ಮತ್ತು ವ್ಯಾಪಾರಕ್ಕೆ ತೊಂದರೆಯನ್ನುಂಟು ಮಾಡಿದೆ. ಹೊರ್ಮುಜ್ ಜಲಸಂಧಿಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಸಂಭವಿಸುವುದಿಲ್ಲ ಎಂದು ನಾವು ನಂಬಿದ್ದೇವೆ ಎಂದು ಪ್ರಕಟಣೆ ನೀಡಿದೆ.
ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್!
ಮಂಗಳವಾರ (ಏ.7) ಇರಾನಿನ ಇಡೀ ನಾಗರಿಕತೆಯನ್ನೇ ನಾಶಗೊಳಿಸುವ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಏ.8) ರಂದು ಇರಾನ್ ಮೇಲೆ ಮುಂದಿನ 14 ದಿನ ಯಾವುದೇ ದಾಳಿ ನಡೆಸದಿರುವಂತೆ ಕದನ ವಿರಾಮ ಘೋಷಿಸಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಗಳ ಆಧಾರದ ಮೇಲೆ ಇಂದು ರಾತ್ರಿ ಇರಾನ್ ಮೇಲೆ ನಡೆಸಲು ಉದ್ದೇಶಿಸಿರುವ ವಿನಾಶಕಾರಿ ದಾಳಿಯನ್ನು ತಡೆ ಹಿಡಿಯುವಂತೆ ವಿನಂತಿಸಿದ್ದು, ಹಾರ್ಮುಜ್ ಜಲಸಂಧಿಯ ಸಂಪೂರ್ಣ ಮತ್ತು ತಕ್ಷಣದ ಮತ್ತು ಸುರಕ್ಷಿತ ತೆರೆಯುವಿಕೆಗೆ ಇರಾನ್ ಒಪ್ಪಿಕೊಂಡರೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.
ಇರಾನ್ ಹೇಳಿದ್ದೇನು?
ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಣೆ ಮಾಡಿದ ಕೆಲವೇ ನಿಮಿಷಗಳಲ್ಲಿ, ಇರಾನ್ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡಿದ್ದು, ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಇರಾನ್ ವಿರುದ್ಧದ ದಾಳಿಗಳನ್ನು ನಿಲ್ಲಿಸಿದರೆ, ನಮ್ಮ ಪ್ರಬಲ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ ಎಂದು ಹೇಳಿದ್ದಾರೆ.
ಆತ್ಮೀಯ ಸಹೋದರರಾದ ಶೆಹಬಾಜ್ ಷರೀಫ್ ಮತ್ತು ಅಸಿಮ್ ಮುನೀರ್ ಅವರಿಗೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅವರು ಮಾಡಿದ ಅವಿರತ ಪ್ರಯತ್ನಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ,(ಏಜನ್ಸೀಸ್).