Wildfire: ದಕ್ಷಿಣ ಸ್ಪೇನ್‌ನ ಆಂಡಲೂಸಿಯಾ ಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಘಟನೆಯಲ್ಲಿ ಇಲ್ಲಿಯವರಿಗೆ 11 ಮಂದಿ ಮೃತಪಟ್ಟಿದ್ದು, 19 ಜನ ನಾಪತ್ತೆಯಾಗಿದ್ದಾರೆ ಎಂದು ಶುಕ್ರವಾರ(ಜು. 10) ವರದಿಯಾಗಿದೆ.
ಆಂಡಲೂಸಿಯನ್ ಪ್ರಾದೇಶಿಕ ಸರ್ಕಾರದ ಮಾಹಿತಿಯ ಪ್ರಕಾರ, ಬೆಂಕಿಯು ಅಲ್ಮೇರಿಯಾ ಪ್ರಾಂತ್ಯದ ಲಾಸ್ ಗಲ್ಲಾರ್ಡೋಸ್, ಬೇಡಾರ್ ಮತ್ತು ಅಂಟಾಸ್ ಪುರಸಭೆ ವ್ಯಾಪ್ತಿಯಲ್ಲಿ ಹರಡಿದೆ. ಆರಂಭದಲ್ಲಿ ಸಾವಿನ ಸಂಖ್ಯೆಯನ್ನು 12 ಎಂದು ಘೋಷಿಸಲಾಗಿತ್ತು, ಆದರೆ ಅಧಿಕಾರಿಗಳು ಅದನ್ನು 11 ಕ್ಕೆ ಇಳಿಸಿದ್ದಾರೆ.
ಇನ್ನೂ ಬೆಂಕಿ ವೇಗವಾಗಿ ಹರಡುತ್ತಿರುವುದರಿಂದ ಅಲ್ಮೋಕೈಸರ್, ಫ್ಯುಯೆಂಟೆ ಡೆಲ್ ಅಲ್ಬರಿಕೊ, ಲಾಸ್ ಪಿನೋಸ್, ಲಾ ಸೆರೆನಾ ಮತ್ತು ಪಿನಾರ್ ನಂತಹ ಹತ್ತಿರದ ಪ್ರದೇಶಗಳಿಂದ ಸುಮಾರು 600 ನಿವಾಸಿಗಳನ್ನು ಜನರನ್ನು ಸ್ಥಳಾಂತರಿಸಲಾಗಿದೆ. ಪ್ರತಿಕೂಲ ಗಾಳಿಯ ನಡುವೆ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹರಸಾಹಾಸ ಮಾಡುತ್ತಿದ್ದಾರೆ.
ಕಾಡ್ಗಿಚ್ಚಿನ ಕುರಿತು ಮಾತನಾಡಿರುವ ಆಂಡಲೂಸಿಯನ್ ತುರ್ತು ಸೇವೆಗಳ ಸಚಿವ ಆಂಟೋನಿಯೊ ಸ್ಯಾನ್ಜ್ ಕ್ಯಾಬೆಲ್ಲೊ, ಬೆಂಕಿಯಿಂದ ಇದುವರೆಗೆ ಸುಮಾರು 3,150 ಹೆಕ್ಟೇರ್ ಅರಣ್ಯ ಸುಟ್ಟುಹೋಗಿದೆ. ಬೆಂಕಿಯ ತೀವ್ರತೆಯಿಂದಾಗಿ ಬೆಂಕಿ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ. ಗಾಳಿಯ ದಿಕ್ಕು ಬದಲಾಗುವ ಸಾಧ್ಯತೆಯಿರುವುದರಿಂದ ಅಧಿಕಾರಿಗಳು ಇನ್ನೂ ಹೆಚ್ಚಿನ ಎಚ್ಚರಿಕೆಯಲ್ಲಿದ್ದಾರೆ. ಅಪಾಯದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು 'ಪ್ಲಾನ್ ಇನ್ಫೋಕಾ' ಎಂಬ ತುರ್ತು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).