ಪಾರ್ಶ್ವವಾಯು ಚಿಕಿತ್ಸೆಗೆ ಬಂದ ರೋಗಿಗೆ ಕಾದಿತ್ತು ಶಾಕ್​: ಮೂತ್ರಕೋಶದಲ್ಲಿ 3.1 ಕೆಜಿ ತೂಕದ ಬೃಹತ್​ ಕಲ್ಲು ಪತ್ತೆ...! Stone Removed From Bladder 
ವಿದೇಶ

ಪಾರ್ಶ್ವವಾಯು ಚಿಕಿತ್ಸೆಗೆ ಬಂದ ರೋಗಿಗೆ ಕಾದಿತ್ತು ಶಾಕ್​: ಮೂತ್ರಕೋಶದಲ್ಲಿ 3.1 ಕೆಜಿ ತೂಕದ ಬೃಹತ್​ ಕಲ್ಲು ಪತ್ತೆ...! Stone Removed From Bladder

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾದ ಆಸ್ಪತ್ರೆಯಲ್ಲಿ ವ್ಯಕ್ತಿಯ ಮೂತ್ರಕೋಶದಲ್ಲಿ ಬೃಹತ್ ಕಲ್ಲು ಪತ್ತೆ
  • 3.1 ಕೆಜಿ ತೂಕ ಹಾಗೂ 17 ಸೆಂ.ಮೀ ಉದ್ದದ ಕಲ್ಲನ್ನು ಹೊರತೆಗೆದ ವೈದ್ಯರು
  • ಪಾರ್ಶ್ವವಾಯು ಚಿಕಿತ್ಸೆಗೆ ತೆರಳಿದ್ದ ವೇಳೆ ಬೆಳಕಿಗೆ ಬಂದ ಅಚ್ಚರಿಯ ಪ್ರಕರಣ
  • ಇದುವರೆಗಿನ ವೈದ್ಯಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಲ್ಲು ಎಂದು ದಾಖಲು
Stone Removed From Bladder: ವೈದ್ಯಕೀಯ ಲೋಕದಲ್ಲಿ ಕೆಲವೊಮ್ಮೆ ವೈದ್ಯರೇ ಅಚ್ಚರಿಪಡುವಂತಹ ಅಸಾಧಾರಣ ಹಾಗೂ ವಿಸ್ಮಯಕಾರಿ ಘಟನೆಗಳು ವರದಿಯಾಗುತ್ತಿರುತ್ತವೆ. ಸಾಮಾನ್ಯವಾಗಿ ಮೂತ್ರಪಿಂಡದಲ್ಲಿ ಅಥವಾ ಮೂತ್ರಕೋಶದಲ್ಲಿ ಸಣ್ಣಪುಟ್ಟ ಕಲ್ಲುಗಳಾಗುವುದು ಸಾಮಾನ್ಯ ಸಮಸ್ಯೆಯಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರತೆಗೆಯಲಾಗುತ್ತದೆ. ಆದರೆ, ಶ್ರೀಲಂಕಾದ ಆಸ್ಪತ್ರೆಯೊಂದರಲ್ಲಿ ಪಾರ್ಶ್ವವಾಯು ಹಾಗೂ ಮೂತ್ರದ ತೊಂದರೆಗೆಂದು ಚಿಕಿತ್ಸೆಗೆ ಬಂದ 55 ವರ್ಷದ ವ್ಯಕ್ತಿಯೊಬ್ಬರ ದೇಹದೊಳಗೆ ಅಕ್ಷರಶಃ ಬಂಡೆಯೊಂದೇ ಅಡಗಿಕೊಂಡಿತ್ತು! ವೈದ್ಯರು ನಡೆಸಿದ ತಪಾಸಣೆಯ ವೇಳೆ ಆ ವ್ಯಕ್ತಿಯ ಮೂತ್ರಕೋಶದಲ್ಲಿ ಬರೋಬ್ಬರಿ 3.1 ಕೆಜಿ ತೂಕ ಮತ್ತು 17 ಸೆಂ.ಮೀ ಉದ್ದದ ದೈತ್ಯಾಕಾರದ ಕಲ್ಲು ಪತ್ತೆಯಾಗಿದ್ದು, ಇದು ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಲ್ಲು ಎಂದು ದಾಖಲಾಗಿದೆ.
ಶ್ರೀಲಂಕಾದ ತಿುಕೋಮಲೆ ಜಿಲ್ಲಾ ಜನರಲ್ ಆಸ್ಪತ್ರೆಗೆ 55 ವರ್ಷದ ವ್ಯಕ್ತಿಯೊಬ್ಬರು ಪಾರ್ಶ್ವವಾಯು ಸಮಸ್ಯೆಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ಈ ವೇಳೆ ವೈದ್ಯರು ಆತನಿಗೆ ಮೂತ್ರದ ಹರಿವಿನಲ್ಲಿ ತೀವ್ರ ತಡೆ ಉಂಟಾಗುತ್ತಿರುವುದನ್ನು ಗಮನಿಸಿ, ಮುಂದುವರಿದು ಕೂಲಂಕಷವಾಗಿ ವೈದ್ಯಕೀಯ ತಪಾಸಣೆ ನಡೆಸಲು ಮುಂದಾದರು. ಆಗ ಸ್ಕ್ಯಾನಿಂಗ್ ವರದಿ ನೋಡಿ ವೈದ್ಯರೇ ದಂಗಾಗಿ ಹೋದರು, ಏಕೆಂದರೆ, ರೋಗಿಯ ಮೂತ್ರಕೋಶದಲ್ಲಿ ಕಲ್ಪನೆಗೂ ಮೀರಿದ ಅಳತೆಯ ಬೃಹತ್ ಕಲ್ಲೊಂದು ಬೆಳೆದಿತ್ತು. ತಕ್ಷಣವೇ ಡಾ. ಪ್ರಹ್ಲಾದನ್ ಬಾಲಕೃಷ್ಣನ್ ನೇತೃತ್ವದ ನುರಿತ ತಜ್ಞ ವೈದ್ಯರ ತಂಡವು ಅತ್ಯಂತ ಎಚ್ಚರಿಕೆಯಿಂದ ಈ ಜಟಿಲ ಹಾಗೂ ಜೋಪಾನವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿ, ಮೂತ್ರಕೋಶದಲ್ಲಿದ್ದ 3.1 ಕೆಜಿ ತೂಕದ ರಾಕ್ಷಸ ಕಲ್ಲನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಇದುವರೆಗಿನ ಲಭ್ಯವಿರುವ ವೈದ್ಯಕೀಯ ದಾಖಲೆಗಳ ಪ್ರಕಾರ, ಇದುವರೆಗೂ ತೆಗೆಯಲಾದ ಕಲ್ಲುಗಳ ಪೈಕಿ ಇದುವೇ ಅತ್ಯಂತ ದೊಡ್ಡ ಕಲ್ಲಾಗಿದೆ ಎಂದು ಡಾ. ಪ್ರಹ್ಲಾದನ್ ಬಿಬಿಸಿ ಸಿಂಹಳಕ್ಕೆ ತಿಳಿಸಿದ್ದಾರೆ.

ಮೂತ್ರಕೋಶದಲ್ಲಿ ಕಲ್ಲುಗಳು ಬೆಳೆಯಲು ಕಾರಣವೇನು?

ರೋಗಿಗಳು ತೀವ್ರವಾದ ನೋವು ಕಾಣಿಸಿಕೊಂಡಾಗ ಅಥವಾ ಮೂತ್ರನಾಳದಲ್ಲಿ ಕಲ್ಲುಗಳು ದೀರ್ಘಕಾಲದವರೆಗೆ ಉಳಿದು ಮೂತ್ರಪಿಂಡಕ್ಕೆ ಹಾನಿ ಮಾಡುವ ಲಕ್ಷಣಗಳು ತೋರಿದಾಗ ಮಾತ್ರ ವೈದ್ಯರನ್ನು ಸಂಪರ್ಕಿಸುತ್ತಾರೆ. ತೀವ್ರವಾದ ಹೊಟ್ಟೆ ಅಥವಾ ಬೆನ್ನು ನೋವು, ಮೂತ್ರ ವಿಸರ್ಜನೆ ಮಾಡುವಾಗ ಕಷ್ಟ, ವಾಂತಿ ಮತ್ತು ಮೂತ್ರದಲ್ಲಿ ರಕ್ತ ಬರುವುದು ಇದರ ಮುಖ್ಯ ಲಕ್ಷಣಗಳಾಗಿವೆ. ಯಾವುದೇ ನೋವನ್ನು ಉಂಟುಮಾಡದ ಕಲ್ಲುಗಳನ್ನು 'ಸೈಲೆಂಟ್ ಸ್ಟೋನ್ಸ್' ಎಂದು ಕರೆಯಲಾಗುತ್ತದೆ. ಆದರೆ ಮೂತ್ರನಾಳದಲ್ಲಿರುವ ಕಲ್ಲುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಿದಾಗ ತೀವ್ರತರವಾದ ನೋವು ಅನುಭವಿಸಬೇಕಾಗುತ್ತದೆ. ಮೂತ್ರಪಿಂಡದ ಶ್ರೋಣಿಯಿಂದ ಮೂತ್ರನಾಳಕ್ಕೆ ಮೂತ್ರವು ಚಲಿಸುವಾಗ ಈ ತೀವ್ರ ನೋವು ಕಾಣಿಸಿಕೊಳ್ಳುತ್ತದೆ, ಇದರಿಂದ ಮೂತ್ರನಾಳದಲ್ಲಿ ತಡೆ ಉಂಟಾಗುತ್ತದೆ. ಅದರಲ್ಲೂ ಒಕ್ಸಲೇಟ್ ಕಲ್ಲುಗಳು ಈ ನಾಳಗಳ ಮೂಲಕ ಚಲಿಸುವಾಗ ರಕ್ತಸ್ರಾವಕ್ಕೂ ಕಾರಣವಾಗಬಹುದು.
ಮೂತ್ರಕೋಶದ ಕಲ್ಲುಗಳಿಂದಾಗಿ ಮೂತ್ರದ ಹರಿವು ಕ್ಷೀಣಿಸಬಹುದು ಅಥವಾ ಸಂಪೂರ್ಣವಾಗಿ ತಡೆಪಡೆಯಲ್ಪಡಬಹುದು. ಇದರ ಪರಿಣಾಮವಾಗಿ ಮೂತ್ರನಾಳದ ಮೇಲಿನ ಭಾಗವು ದೊಡ್ಡದಾಗಿ ಉಬ್ಬಿಕೊಳ್ಳುತ್ತದೆ ಮತ್ತು ಮೂತ್ರಪಿಂಡಗಳಲ್ಲಿ ಗಂಭೀರವಾದ ಬಾವು ಉಂಟಾಗುತ್ತದೆ. ಈ ಹಂತದಲ್ಲೂ ಕಲ್ಲನ್ನು ಸಮಯಕ್ಕೆ ಸರಿಯಾಗಿ ಹೊರತೆಗೆಯದಿದ್ದರೆ, ದೇಹದ ಆ ಭಾಗದ ಮೂತ್ರಪಿಂಡದ ಸಂಪೂರ್ಣ ಕಾರ್ಯಕ್ಷಮತೆ ಶಾಶ್ವತವಾಗಿ ನಾಶವಾಗುತ್ತದೆ. ಸಾಮಾನ್ಯವಾಗಿ ಮೂರು ಮಿಲಿಮೀಟರ್‌ಗಿಂತ ಕಡಿಮೆ ಗಾತ್ರದ ಸಣ್ಣ ಕಲ್ಲುಗಳು ಮಾತ್ರ ಯಾವುದೇ ಅಡ್ಡಿಯಿಲ್ಲದೆ ಮೂತ್ರದ ಮೂಲಕ ತಾವಾಗಿಯೇ ಹೊರಹೋಗುತ್ತವೆ. ಆದರೆ ದೊಡ್ಡ ಗಾತ್ರದ ಕಲ್ಲುಗಳು ಮೂತ್ರಕೋಶದಲ್ಲಿ ಬೆಳೆದಂತೆ ಗಂಭೀರ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ.
ರೋಗಿಯ ದೈಹಿಕ ಲಕ್ಷಣಗಳ ಜೊತೆಗೆ, ಮೂತ್ರ ಪರೀಕ್ಷೆ, ಎಕ್ಸ್-ರೇ ಹಾಗೂ ಸ್ಕ್ಯಾನ್‌ಗಳ ಮೂಲಕ ಈ ಕಲ್ಲುಗಳನ್ನು ನಿಖರವಾಗಿ ಪತ್ತೆಹಚ್ಚಬಹುದಾಗಿದೆ. ಮೂತ್ರ ಪರೀಕ್ಷೆಯಿಂದ ಮೂತ್ರದಲ್ಲಿ ರಕ್ತ ಅಥವಾ ಕೀವು ಅಂಶವಿರುವುದು ತಿಳಿಯುತ್ತದೆ. ರಕ್ತ ಪರೀಕ್ಷೆಯಲ್ಲಿ ಬಿಳಿ ರಕ್ತ ಕಣಗಳ (WBC) ಸಂಖ್ಯೆ ಹೆಚ್ಚಿರುವುದು ಮೂತ್ರದ ಸೋಂಕಿನ ಸ್ಪಷ್ಟ ಸೂಚನೆಯಾಗಿದೆ. ಸುಮಾರು 80 ಪ್ರತಿಶತದಷ್ಟು ಕಲ್ಲುಗಳು ಒಕ್ಸಲೇಟ್ ಕಲ್ಲುಗಳಾಗಿರುವುದರಿಂದ ಅವು ಕಿಡ್ನಿ, ಮೂತ್ರನಾಳ ಮತ್ತು ಮೂತ್ರಕೋಶದ ಸಾಂಪ್ರದಾಯಿಕ ಎಕ್ಸ್-ರೇಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಆದರೆ ಯೂರಿಕ್ ಆಮ್ಲದ ಕಲ್ಲುಗಳು ಇಂತಹ ಸಾಮಾನ್ಯ ಎಕ್ಸ್-ರೇಗಳಲ್ಲಿ ಕಾಣಿಸುವುದಿಲ್ಲ. ರಕ್ತನಾಳಕ್ಕೆ ನಿರ್ದಿಷ್ಟ ಬಣ್ಣದ ದ್ರವವನ್ನು (ಡೈ) ಚುಚ್ಚಿ ಎಕ್ಸ್-ರೇ ತೆಗೆಯುವ 'ಇಂಟ್ರಾವೆನಸ್ ಪೈಲೋಗ್ರಾಮ್' ವಿಧಾನವು ಕಲ್ಲುಗಳನ್ನು ಪತ್ತೆಹಚ್ಚಲು ಅತ್ಯಂತ ಪರಿಣಾಮಕಾರಿಯಾಗಿದೆ. ಇದರೊಂದಿಗೆ ಅಲ್ಟ್ರಾಸೌಂಡ್ ಮತ್ತು ಸಿಟಿ ಸ್ಕ್ಯಾನ್ ಪರೀಕ್ಷೆಗಳು ಸಹ ಕಲ್ಲುಗಳ ನಿಖರ ಮಾಹಿತಿ ಪಡೆಯಲು ಹೆಚ್ಚು ಸಹಕಾರಿಯಾಗಿವೆ.

ಕಲ್ಲುಗಳ ರಚನೆಯನ್ನು ತಡೆಯಲು ನಾವು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ಸಾಕಷ್ಟು ನೀರು ಕುಡಿಯುವುದು: ದೇಹದಲ್ಲಿ ಕಲ್ಲುಗಳ ಉತ್ಪತ್ತಿಯನ್ನು ತಡೆಯಲು ಪ್ರಮುಖ ಮಾರ್ಗವೆಂದರೆ ಹೆಚ್ಚು ನೀರು ಕುಡಿಯುವುದು. ಅದರಲ್ಲೂ ಬೇಸಿಗೆಯ ಕಾಲದಲ್ಲಿ ದಿನಕ್ಕೆ ಕನಿಷ್ಠ ಎರಡರಿಂದ ಎರಡೂವರೆ ಲೀಟರ್ ನೀರನ್ನು ಕಡ್ಡಾಯವಾಗಿ ಕುಡಿಯಬೇಕು, ಇದರಿಂದ ಸರಾಗವಾಗಿ ಮೂತ್ರ ವಿಸರ್ಜನೆಯಾಗುತ್ತದೆ.
ಆಹಾರ ಕ್ರಮದಲ್ಲಿ ಬದಲಾವಣೆ: ಸೇವಿಸುವ ಆಹಾರದಲ್ಲಿ ಪ್ರೋಟೀನ್ ಮತ್ತು ಉಪ್ಪಿನ ಪ್ರಮಾಣವನ್ನು ಮಿತಗೊಳಿಸಿ. ಕೋಲಾ ಪಾನೀಯಗಳು ಸೇರಿದಂತೆ ಕೃತಕ ತಂಪು ಪಾನೀಯಗಳನ್ನು ಆದಷ್ಟು ಸಂಪೂರ್ಣವಾಗಿ ದೂರವಿಡಿ.
ಹಣ್ಣಿನ ರಸಗಳ ಸೇವನೆ: ಕಿತ್ತಳೆ ರಸವನ್ನು ಕುಡಿಯುವುದು ಕ್ಯಾಲ್ಸಿಯಂ ಒಕ್ಸಲೇಟ್ ಕಲ್ಲುಗಳ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಅನಾನಸ್ ಹಣ್ಣು ಯೂರಿಕ್ ಆಮ್ಲದ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಯಬಲ್ಲದು. ಮೂತ್ರದ ಸೋಂಕುಗಳನ್ನು ಎಂದಿಗೂ ಲಘುವಾಗಿ ಪರಿಗಣಿಸದೆ, ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ, (ಏಜೆನ್ಸೀಸ್​).