B1 Bridge | ಇರಾನ್‌ನ ಬಿ1 ಸೇತುವೆ ಮೇಲೆ ಭೀಕರ ವಾಯುದಾಳಿ-ಇರಾನ್‌ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್: ಇರಾನ್‌ನ ರಾಜಧಾನಿ ಟೆಹ್ರಾನ್ ಮತ್ತು ಪಶ್ಚಿಮದ ಕರಾಜ್ ನಗರವನ್ನು ಸಂಪರ್ಕಿಸುವ ಪ್ರಮುಖ ಬಿ1 ಹೆದ್ದಾರಿ ಸೇತುವೆಯ (B1 Bridge) ಮೇಲೆ ಗುರುವಾರ ಭೀಕರ ವಾಯುದಾಳಿ ನಡೆದಿದ್ದು, ಇಡೀ ಪ್ರದೇಶ ಸ್ಫೋಟ ಮತ್ತು ದಟ್ಟ ಹೊಗೆಯಿಂದ ಆವೃತವಾಗಿದೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಘಟನೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ತುಂಬಾ ತಡವಾಗುವ ಮೊದಲು ಒಪ್ಪಂದ ಮಾಡಿಕೊಳ್ಳುವಂತೆ ಇರಾನ್ ನಾಯಕತ್ವಕ್ಕೆ ನಿರ್ದೇಶನ ನೀಡಿದ್ದು, ಇರಾನ್ ತನ್ನ ಹಾದಿಯನ್ನು ಬದಲಿಸಿಕೊಳ್ಳದಿದ್ದರೆ ಮತ್ತಷ್ಟು ಹಾನಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ದೇಶ ಅಧಿಕೃತವಾಗಿ ವಹಿಸಿಕೊಂಡಿಲ್ಲವಾದರೂ, ಟ್ರಂಪ್ ಮಾತುಗಳು ಈ ದಾಳಿಯಲ್ಲಿ ಅಮೆರಿಕದ ಪಾತ್ರವಿರುವ ಮುನ್ಸೂಚನೆ ನೀಡಿವೆ.
ಇಸ್ರೇಲಿ ರಕ್ಷಣಾ ಪಡೆಗಳು ಈ ದಾಳಿಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದರೆ, ದಿ ಟೈಮ್ಸ್ ಆಫ್ ಇಸ್ರೇಲ್ ವರದಿಯು ಅಮೆರಿಕದ ದಾಳಿಯಿಂದಲೇ ಸೇತುವೆಗೆ ಹಾನಿಯಾಗಿದೆ ಎಂದು ಉಲ್ಲೇಖಿಸಿದೆ. ಈ ದಾಳಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ, ನಾಗರಿಕ ಮೂಲಸೌಕರ್ಯಗಳ ಮೇಲಿನ ಇಂತಹ ದಾಳಿಗಳು ಇರಾನಿಯನ್ನರನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ತನ್ನ ಮೇಲಿನ ಬೆದರಿಕೆ ಕಡಿಮೆಯಾಗಿದೆ ಎಂಬ ಟ್ರಂಪ್ ಹೇಳಿಕೆಗೆ ಸವಾಲು ಹಾಕುವಂತೆ ಇರಾನ್ ಗುರುವಾರ ಇಸ್ರೇಲ್ ಮತ್ತು ಗಲ್ಫ್ ಅರಬ್ ರಾಷ್ಟ್ರಗಳ ಮೇಲೆ ನಿರಂತರ ಕ್ಷಿಪಣಿ ದಾಳಿಗಳನ್ನು ನಡೆಸಿದ್ದು, ಈ ಮೂಲಕ ತಾನು ಇಂದಿಗೂ ಪ್ರಾದೇಶಿಕ ಗುರಿಗಳನ್ನು ತಲುಪಬಲ್ಲೆ ಎಂಬ ಸ್ಪಷ್ಟ ಸಂದೇಶವನ್ನು ಟೆಹ್ರಾನ್ ರವಾನಿಸಿದೆ.
ಹೋರ್ಮುಜ್ ಜಲಸಂಧಿಯ ಮೇಲೆ ಇರಾನ್ ಹೊಂದಿರುವ ಹಿಡಿತವು ಜಾಗತಿಕ ಇಂಧನ ಪೂರೈಕೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದು, ಇದು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಜಲಮಾರ್ಗವನ್ನು ಮರುಪಡೆಯುವ ಕುರಿತು ಬ್ರಿಟನ್ ಈಗಾಗಲೇ ಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಆದರೆ, ಹಾರ್ಮುಜ್ ತೈಲವನ್ನು ಅವಲಂಬಿಸಿರುವ ದೇಶಗಳೇ ಧೈರ್ಯ ಪ್ರದರ್ಶಿಸಿ ಅದನ್ನು ವಶಪಡಿಸಿಕೊಳ್ಳಬೇಕು ಎಂದು ಟ್ರಂಪ್ ಕರೆ ನೀಡಿದ್ದಾರೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಈ ಮಾರ್ಗವು ಮುಕ್ತವಾಗಿತ್ತು ಮತ್ತು ಜಾಗತಿಕ ತೈಲ ವ್ಯಾಪಾರದ ಶೇಕಡಾ 20 ರಷ್ಟು ಪಾಲು ಇದರ ಮೂಲಕವೇ ಸಾಗುತ್ತಿತ್ತು. ಪ್ರಸ್ತುತ ನಡೆಯುತ್ತಿರುವ ಈ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಅಸ್ಥಿರತೆಗೆ ಕಾರಣವಾಗಿದೆ(ಏಜೆನ್ಸೀಸ್).