Love 
ವಿದೇಶ

ಗೇಮಿಂಗ್ ಆ್ಯಪ್ ಮೂಲಕ ಪ್ರೀತಿ: ಪಾಕಿಸ್ತಾನಿ ಯುವಕನನ್ನು ಮದುವೆಯಾಗಲು ಜರ್ಮನಿಯಿಂದ ಬಂದ ವೈದ್ಯೆ! | Love

ಮಂಡಿ ಬಹಾವುದ್ದೀನ್ (ಪಾಕಿಸ್ತಾನ): ಇಂದಿನ ಡಿಜಿಟಲ್ ಯುಗದಲ್ಲಿ ಗಡಿಗಳನ್ನು ಮೀರಿದ ಪ್ರೀತಿ(Love)  ಹೊಸದೇನಲ್ಲ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ, ಆನ್‌ಲೈನ್ ಗೇಮ್ 'ರೋಬ್ಲಾಕ್ಸ್' (Roblox) ಮೂಲಕ ಪರಿಚಯವಾದ ಪಾಕಿಸ್ತಾನಿ ಯುವಕನನ್ನು ವರಿಸಲು ಜರ್ಮನಿಯ ವೈದ್ಯೆಯೊಬ್ಬರು ಸಾವಿರಾರು ಮೈಲಿ ದೂರ ಪ್ರಯಾಣಿಸಿ ಪಾಕಿಸ್ತಾನಕ್ಕೆ ಬಂದಿದ್ದಾರೆ.

ಪರಿಚಯವಾಗಿದ್ದು ಹೇಗೆ? 

ಜರ್ಮನಿ ಮತ್ತು ಬೋಸ್ನಿಯಾ ದ್ವಿಪೌರತ್ವ ಹೊಂದಿರುವ 26 ವರ್ಷದ ವೈದ್ಯೆ ಸೆಲ್ಮಾ ಮತ್ತು ಪಾಕಿಸ್ತಾನದ ಡಿಫಾರ್ ಗ್ರಾಮದ 22 ವರ್ಷದ ಮೊಹಮ್ಮದ್ ಅಕ್ಮಲ್ ನಡುವೆ ರೋಬ್ಲಾಕ್ಸ್ ಆಟದ ಮೂಲಕ ಪರಿಚಯವಾಗಿತ್ತು. ಕಳೆದ ಐದು ತಿಂಗಳುಗಳಿಂದ ಆನ್‌ಲೈನ್‌ನಲ್ಲಿ ಇವರಿಬ್ಬರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಅಚ್ಚರಿಯ ವಿಷಯವೆಂದರೆ, ಅಕ್ಮಲ್‌ಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಸೆಲ್ಮಾ ಕಳುಹಿಸುವ ಸಂದೇಶಗಳಿಗೆ ಆತ ಕೇವಲ 'ಓಕೆ' ಎಂದು ಮಾತ್ರ ಉತ್ತರಿಸುತ್ತಿದ್ದ. ಆದರೂ ಇವರಿಬ್ಬರ ನಡುವೆ ಭಾವನಾತ್ಮಕ ಸಂಬಂಧ ಬೆಳೆದಿತ್ತು.

ಹಳ್ಳಿಯ ಜೀವನಕ್ಕೆ ಹೊಂದಿಕೊಂಡ ವಿದೇಶಿ ವೈದ್ಯೆ

ಅಕ್ಮಲ್ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ ಸೆಲ್ಮಾ, ಜರ್ಮನಿಯಿಂದ ಪಾಕಿಸ್ತಾನಕ್ಕೆ ಬಂದು ಅಲ್ಲಿನ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಈ ಮದುವೆಗೆ ಎರಡೂ ಕುಟುಂಬದವರ ಸಮ್ಮತಿ ಇತ್ತು. ಸುಮಾರು 14 ಲಕ್ಷ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿದೆ.
ಜರ್ಮನಿಯ ಸುಸಜ್ಜಿತ ಜೀವನಕ್ಕೆ ಅಭ್ಯಾಸವಾಗಿದ್ದ ಸೆಲ್ಮಾಗೆ ಪಾಕಿಸ್ತಾನದ ಹಳ್ಳಿಯ ಜೀವನ ಆರಂಭದಲ್ಲಿ ಸವಾಲಾಗಿತ್ತು. ಪಾತ್ರೆ ತೊಳೆಯುವುದು, ಕೈಯಿಂದ ಬಟ್ಟೆ ಒಗೆಯುವುದು ಮತ್ತು ರೊಟ್ಟಿ ತಯಾರಿಸುವುದು ಅವರಿಗೆ ಹೊಸ ಅನುಭವವಾಗಿತ್ತು. ಆದರೆ ಈಗ ಅವರು ಪ್ರೀತಿಯಿಂದಲೇ ಈ ಎಲ್ಲಾ ಕೆಲಸಗಳನ್ನು ಕಲಿಯುತ್ತಿದ್ದಾರೆ.

ಮುಂದಿನ ಯೋಜನೆ

 ಪತಿಯ ಮೇಲಿರುವ ಪ್ರೀತಿಯಿಂದಾಗಿ ಸೆಲ್ಮಾ ಪಾಕಿಸ್ತಾನದಲ್ಲೇ ನೆಲೆಸಲು ನಿರ್ಧರಿಸಿದ್ದಾರೆ. ಸ್ಥಳೀಯರೊಂದಿಗೆ ಸಂವಹನ ನಡೆಸಲು ಅವರು ಈಗ ಉರ್ದು ಮತ್ತು ಪಂಜಾಬಿ ಭಾಷೆಗಳನ್ನು ಕಲಿಯುತ್ತಿದ್ದಾರೆ. ಸದ್ಯ ಇವರ ಈ ಅಪರೂಪದ ಪ್ರೇಮಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ,(ಏಜೆನ್ಸೀಸ್​).